ಚಿಂತಾಮಣಿ: ಆಸ್ತಿಯಲ್ಲಿ ಪಾಲು ಕಸಿದುಕೊಂಡರೂ ಪಾಲನೆ ಮಾಡಲು ನಿರ್ಲಕ್ಷ್ಯ ತೋರಿ, ಮನೆಯಿಂದ ಹೊರ ಹಾಕಿದ್ದ ಮಗನ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ವೃದ್ಧ ತಂದೆ ಕೊನೆಗೂ ನ್ಯಾಯ ಪಡೆದಿದ್ದಾರೆ. ಮನೆಯಿಂದ ಹೊರ ದಬ್ಬಿದ್ದ ಮಗನೇ ಕೊನೆಗೆ ಇದೀಗ ಜಾಗ ಖಾಲಿ ಮಾಡಿದ್ದು, ತಂದೆಯ ಸ್ವಾಧೀನಕ್ಕೆ ಮನೆ ಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಂಜನಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಅಪ್ಪ ಮತ್ತು ಮಗನ ನ್ಯಾಯಾಲಯ ಹೋರಾಟ, ಪಾಲನೆಯ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಮಗನ ವಿರುದ್ಧ ಹೋರಾಡಿ ಗೆದ್ದ ತಂದೆ ಹೆಸರು ಮುನಿಸ್ವಾಮಿ. ಚಿಂತಾಮಣಿ ನಗರದ ಸರ್ಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮುನಿಸ್ವಾಮಿಗೆ ಒಬ್ಬ ಮಗ, ಒಬ್ಬ ಪುತ್ರಿ. ಇಬ್ಬರಿಗೂ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ, ಮದುವೆ ಮಾಡಿಸಿದ್ದಲ್ಲದೇ ಆಸ್ತಿಪಾಸ್ತಿಯನ್ನು ಹಂಚಿದ್ದಾರೆ. ಇದರ ನಡುವೆ ಆಸ್ತಿಯಲ್ಲಿ ಪಾಲು ಪಡೆದ ಮಗ, ತಂದೆಯ ಪಾಲನೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದು, ವೃದ್ಧಾಪ್ಯದಲ್ಲಿನ ತಂದೆಯನ್ನು ಮನೆಯಿಂದ ಹೊರ ದಬ್ಬಿದ್ದ. ವಯೋಸಹಜವಾದ ಬಲಹೀನತೆ, ಕಾಯಿಲೆಗಳಿಂದ ದುರ್ಬಲರಾಗಿದ್ದ ಮುನಿಸ್ವಾಮಿ ಅವರು ಮೊಮ್ಮಕ್ಕಳ ಜತೆ ಆಟವಾಡಿಕೊಂಡಿರಬೇಕು ಎಂದು ಗೋಗರೆದರೂ ಮಗ ಕಿವಿಗೊಟ್ಟಿರಲಿಲ್ಲ.
ಮಗ ಎಂ.ಸುಭಾಷ್ ಮತ್ತು ಸೊಸೆ ಮಂಜುಳಾ ಇಬ್ಬರೂ ಸೇರಿ ಮುನಿಸ್ವಾಮಿಗೆ ದೌರ್ಜನ್ಯ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಹೊರ ಹಾಕಿದ್ದರು. ಆಶ್ರಯ ಕಳೆದುಕೊಂಡ ವೃದ್ಧ, ಎರಡ್ಮೂರು ಬಾರಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪಾಲಕರ ಪೋಷಣೆ ಸಂರಕ್ಷಣೆ ಹಾಗೂ ಹಿರಿಯ ನಾಗರಿಕ ರಕ್ಷಣಾ ಕಾಯ್ದೆ 2007 ರಡಿ ರಕ್ಷಣೆ ನೀಡುವುದರ ಜತೆಗೆ ಕಷ್ಟಪಟ್ಟು ನಿರ್ಮಿಸಿದ್ದ ಮನೆಯನ್ನು ಸ್ವಾಧೀನಕ್ಕೆ ಕೊಡಿಸಬೇಕು ಎಂದು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದರು. ವಿಚಾರಣೆಗೆ ಹಾಜರಾಗಲು ಅನೇಕ ಬಾರಿ ನೋಟಿಸ್ ನೀಡಿದ್ದರೂ ಪ್ರತಿವಾದಿಗಳಾದ ವೃದ್ಧನ ಮಗ ಮತ್ತು ಸೊಸೆ ಕಿವಿಗೊಟ್ಟಿರಲಿಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ವೃದ್ಧನ ಪರವಾಗಿ ತೀರ್ಪು ನೀಡಿದ್ದು, ಮನೆಯನ್ನು ಬಿಟ್ಟು ಕೊಡುವಂತೆ ಆದೇಶಿಸಲಾಗಿತ್ತು. ಆದರೂ ಕರೊನಾ ಸೋಂಕು ಸೇರಿ ನಾನಾ ಸಬೂಬುಗಳನ್ನು ಮುಂದಿಟ್ಟುಕೊಂಡು ಸತಾಯಿಸುತ್ತಿರುವುದನ್ನು ಪ್ರಶ್ನಿಸಿ, ಚಿಂತಾಮಣಿ ಜೆಎಂಎಫ್ಸಿ ನ್ಯಾಯಾಲಯ ಮತ್ತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಧೀಶರ ಆದೇಶದಂತೆ ಪೊಲೀಸರು ಮನೆ ಖಾಲಿ ಮಾಡಿಸಿ, ವೃದ್ಧನ ಸ್ವಾಧೀನಕ್ಕೆ ಕೊಡಿಸಿದ್ದಾರೆ. ಕೋರ್ಟ್ನ ಈ ತೀರ್ಪಿಗೆ ಜನ ಬಹುಪರಾಕ್ ಅನ್ನುತ್ತಿದ್ದಾರೆ.
ಕಷ್ಟಪಟ್ಟು ಮಕ್ಕಳನ್ನು ಓದಿಸಿ ದೊಡ್ಡವರನ್ನಾಗಿ ಮಾಡಿದ್ದೇನೆ. ಆದರೆ, ಆಸ್ತಿಯಲ್ಲಿ ಪಾಲು ಪಡೆದುಕೊಂಡ ಮಗ ಮನೆಯಿಂದ ಹೊರ ಹಾಕಿದ್ದ. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನನ್ನ ಪರವಾಗಿ ತೀರ್ಪು ಬಂದಿದೆ. ನನ್ನ ಮನೆ ನನಗೇ ಸಿಕ್ಕಿದೆ.
| ಮುನಿಸ್ವಾಮಿ ಸಂತ್ರಸ್ತ ವೃದ್ಧ
ಸೇತುವೆ ಮೇಲಿಂದ ಪ್ರಪಾತಕ್ಕೆ ಕಾರು ಪಲ್ಟಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ದಾರುಣ ಸಾವು