ಮುದ್ದೇಬಿಹಾಳ: ಸದಸ್ಯ ಶಿವು ಶಿವಪುರ ಅವರು ಎಸ್‌ಡಿಎ ಶಿವಾನಂದ ಗಂಜಿಹಾಳ ಅವರೊಂದಿಗೆ ಅನುಚಿತವಾಗಿ ನಡೆದುಕೊಂಡು ಜೀವ ಬೆದರಿಕೆ ಹಾಕಿದ್ದರಿಂದ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಭಯದ ವಾತಾವರಣ ಉಂಟಾಗಿದೆ. ಆ ಸದಸ್ಯರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪುರಸಭೆ ಸಿಬ್ಬಂದಿ ಮಂಗಳವಾರ ಕಚೇರಿ ಕೆಲಸಗಳಿಂದ ದೂರ ಉಳಿದು ದಿಢಿರ್ ಪ್ರತಿಭಟನಾ ಧರಣಿ ನಡೆಸಿದರು.
ಕೊಳಚೆ ನಿರ್ಮೂಲನಾ ಮಂಡಳಿಯ ಠರಾವು ಕೊಡುವಂತೆ ಶಿವಪುರ ಅವರು ದೂರವಾಣಿಯಲ್ಲಿ ಮಾತನಾಡಿ ಕೇಳಿದ್ದರು. ಈ ಬಗ್ಗೆ ಮುಖ್ಯಾಧಿಕಾರಿಯವರನ್ನು ವಿಚಾರಿಸಿದಾಗ ಕಲಬುರ್ಗಿ ಉಚ್ಚ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಠರಾವು ಕೊಡಲು ಬರುವುದಿಲ್ಲ ಎಂದು ತಿಳಿಸಿದ್ದರು.
ಶಿವಪುರ ಅವರು ಮತ್ತೊಮ್ಮೆ ಕರೆ ಮಾಡಿದಾಗ ಮುಖ್ಯಾಧಿಕಾರಿಯವರು ಹೇಳಿದ್ದನ್ನು ಅವರಿಗೆ ತಿಳಿಸಿದ್ದೆ. ಸಂಜೆ ಮತ್ತೊಮ್ಮೆ ಕರೆ ಮಾಡಿ ಶಿವಪುರ ಅವರು ಅವಾಚ್ಯವಾಗಿ ಮಾತನಾಡಿದರು. ಕಚೇರಿಗೆ ಬಂದು ಎಲ್ಲ ಸಿಬ್ಬಂದಿ ಎದುರು ನನಗೆ ಹೊಡೆಯಲು ಬಂದು ತೇಜೋವಧೆ ಮಾಡಿದರು. ಇವರ ವಿರುದ್ಧ ಕ್ರಮ ಕೈಕೊಳ್ಳದಿದ್ದರೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕಾಗುತ್ತದೆ ಎಂದು ಅಧ್ಯಕ್ಷ, ಮುಖ್ಯಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಗಂಜಿಹಾಳ ತಿಳಿಸಿದ್ದಾರೆ.
ಧರಣಿಯ ತೀವ್ರತೆ ಅರಿತು ಅಧ್ಯಕ್ಷ ಮಹಿಬೂಬ ಗೊಳಸಂಗಿ ಅವರು ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮತ್ತು ಕೆಲ ಸದಸ್ಯರೊಂದಿಗೆ ಸಭಾ ಭವನದಲ್ಲಿ ಚರ್ಚೆ ನಡೆಸಿದರು. ಈ ಸಭೆಗೆ ಶಿವಪುರ ಅವರು ಹಾಜರಾಗಿದ್ದರು. ಅಲ್ಲಿನ ನಡೆದ ಮಾತುಕತೆಯ ನಂತರ ಅಧ್ಯಕ್ಷ, ಮುಖ್ಯಾಧಿಕಾರಿಯವರು ಧರಣಿ ನಿರತ ಸಿಬ್ಬಂದಿಗೆ ಶಿವಪುರ ಅವರು ತಮ್ಮೆದುರು ತಪ್ಪೊಪ್ಪಿಕೊಂಡಿದ್ದಾರೆ. ಇದೊಂದು ಬಾರಿ ಧರಣಿ ಕೈಬಿಡುವಂತೆ ಮನವೊಲಿಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಸಂಜೆಯವರೆಗೂ ನಡೆದ ಧರಣಿ ಮನವೊಲಿಕೆಯಿಂದ ಅಂತ್ಯಗೊಂಡಿತು.
ಪೌರ ನೌಕರರ ಸಂಘದ ಮುದ್ದೇಬಿಹಾಳ ಶಾಖೆಯ ನೇತತ್ವದಲ್ಲಿ ನಡೆದ ಧರಣಿಯಲ್ಲಿ ಶಿವಾನಂದ ಗಂಜಿಹಾಳ, ಪದಾಧಿಕಾರಿಗಳಾದ ಎಸ್.ಎಚ್. ಮೂಲಿಮನಿ, ಜಾವೀದ ನಾಯ್ಕೋಡಿ, ಮಹಾಂತೇಶ ಕಟ್ಟಿಮನಿ, ಮಲ್ಲಿಕಾರ್ಜುನ ಗುನ್ನಾಪುರ, ನಾಗಮ್ಮ ಪಾಟೀಲ, ವಿನೋದ ಜಿಂಗಾಡೆ, ಸೈನ್ ಮಾನ್ಯಾಳ, ಶರಣು ಚಲವಾದಿ, ಉಮೇಶ ದೇವೂರ ಇನ್ನಿತರರು ಇದ್ದರು.
ಬೆಳಿಗ್ಗೆ ಕಚೇರಿ ಅವಧಿಯ ಪ್ರಾರಂಭದ ಹಂತದಲ್ಲಿ ಶುರುವಾಗಿದ್ದ ಧರಣಿ ಒಂದೆರಡು ಗಂಟೆಗಳಲ್ಲೇ ಮುಕ್ತಾಯಗೊಳ್ಳುವ ಲಕ್ಷಣಗಳಿದ್ದವು. ಈ ವೇಳೆ ಕಚೇರಿಗೆ ಬಂದಿದ್ದ ಇನ್ನೊಬ್ಬ ಸದಸ್ಯರು ಧರಣಿ ನಿರತರೊಂದಿಗೆ ಉದ್ಧಟತನದ ಭಾಷೆಯಲ್ಲಿ ಮಾತನಾಡಿದ್ದು ಧರಣಿ ಮುಂದುವರಿಯಲು ಕಾರಣವಾಯಿತು ಎಂದು ಧರಣಿ ನಿರತರಲ್ಲಿ ಕೆಲವರು ಸುದ್ದಿಗಾರರಿಗೆ ತಿಳಿಸಿದರು.
ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಯೊಬ್ಬರು ಠರಾವಿನ ಪ್ರತಿ ಕೇಳಿದ್ದಕ್ಕೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಕೊಡಲು ಬರುವುದಿಲ್ಲ ಎಂದು ಮುಖ್ಯಾಧಿಕಾರಿ ಹೇಳಿದ್ದು ಜನಪ್ರತಿನಿಧಿಯ ಹಕ್ಕಿಗೆ ಧಕ್ಕೆ ತಂದಂತಾಗಿದೆ ಎನ್ನುವ ಮಾತು ಕೆಲವು ಸದಸ್ಯರಿಂದ ಕೇಳಿಬಂತು.