ವಿಮಾನದಲ್ಲಿ ಅಭಿಮಾನಿ ಹೃದಯ ಗೆದ್ದ ಸ್ಪಿನ್ ದಿಗ್ಗಜ ಕುಂಬ್ಳೆ!

ಬೆಂಗಳೂರು: ಭಾರತದಲ್ಲಿ ಕ್ರಿಕೆಟಿಗರ ಬೆನ್ನುಹತ್ತುವ ಅಭಿಮಾನಿಗಳಿಗೆ ಬರವಿಲ್ಲ. ಆದರೆ ಸ್ಟಾರ್ ಕ್ರಿಕೆಟಿಗರೊಬ್ಬರ ಜತೆಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕರೂ, ಸಂಕೋಚ ಸ್ವಭಾವದಿಂದಾಗಿ ಅವರನ್ನು ಮಾತನಾಡಿಸಲು ಧೈರ್ಯ ಬಾರದಿದ್ದಾಗ ಆ ಕ್ರಿಕೆಟ್ ತಾರೆಯಿಂದಲೇ ಮಾತನಾಡಿಸಲು ಆಹ್ವಾನ ಬಂದಾಗ ಹೇಗಾಗಬೇಡ?! ಇಂಥ ವಿಶೇಷ ಅನುಭವ ಪಡೆದವರು ಸೋಹಿನಿ ಎಂಬ ಕ್ರಿಕೆಟ್ ಪ್ರೇಮಿ. ವಿನಮ್ರ ವರ್ತನೆಯಿಂದ ಅಭಿಮಾನಿಯ ಹೃದಯ ಗೆದ್ದವರು ಸ್ಪಿನ್ ದಿಗ್ಗಜ ಹಾಗೂ ಟೀಮ್ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ.

ಕನ್ನಡಿಗ ಅನಿಲ್ ಕುಂಬ್ಳೆ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲೇ ಸೋಹಿನಿ ಇದ್ದರು. ಕುಂಬ್ಳೆ ಸಹ ಪ್ರಯಾಣಿಕರಾಗಿರುವುದನ್ನು ನೋಡಿ ಅವರು ಪುಳಕಿತರಾದರೂ, ಮಾತನಾಡಿಸಲು ಧೈರ್ಯ ಮಾಡಲಿಲ್ಲ. ಬದಲಾಗಿ ಟ್ವಿಟರ್​ನಲ್ಲಿ ತಮ್ಮ ಥ್ರಿಲ್ ಹಂಚಿಕೊಂಡರು. ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್​ನಲ್ಲಿ ಕುಂಬ್ಳೆ ಗಲ್ಲಕ್ಕೆ ಬ್ಯಾಂಡೇಜ್ ಕಟ್ಟಿಕೊಂಡು ಬೌಲಿಂಗ್ ಮಾಡಿದ ನೆನಪಾಗುತ್ತಿದೆ. ಅವಿಸ್ಮರಣೀಯ ಕ್ರಿಕೆಟ್ ನೆನಪು, ಗೆಲುವುಗಳಿಗಾಗಿ ಅವರ ಬಳಿ ಹೋಗಿ ‘ಥ್ಯಾಂಕ್ ಯೂ’ ಎನ್ನಬೇಕೆನಿಸುತ್ತಿದೆ. ಆದರೆ ನನ್ನ ಕಾಲುಗಳು ನಡುಗುತ್ತಿವೆ ಎಂದು ಟ್ವೀಟಿಸಿದ್ದರು. ಕುಂಬ್ಳೆ ವಿಮಾನದಲ್ಲಿದ್ದಾಗಲೇ ಈ ಟ್ವೀಟ್ ನೋಡಿದ್ದಲ್ಲದೆ ಅದಕ್ಕೆ ಪ್ರತಿಕ್ರಿಯೆಯನ್ನೂ ನೀಡಿದರು.

‘ವಿಮಾನ ಟೇಕ್​ಆಫ್ ಆದ ಬಳಿಕ ದಯವಿಟ್ಟು ನನ್ನ ಬಳಿ ಬಂದು ಹಾಯ್ ಎನ್ನಿರಿ’ ಎಂದು ಕುಂಬ್ಳೆ ಟೇಕ್​ಆಫ್​ಗೆ ಮುನ್ನವೇ ಟ್ವೀಟಿಸಿದ್ದರು. ಇದನ್ನು ನೋಡಿದ ಬಳಿಕ ಕೊನೆಗೂ ಧೈರ್ಯ ಮಾಡಿ ಕುಂಬ್ಳೆಯನ್ನು ಮಾತನಾಡಿಸಿದ ಸೋಹಿನಿ, ಬೋರ್ಡಿಂಗ್ ಪಾಸ್ ಮೇಲೆ ಅವರ ಹಸ್ತಾಕ್ಷರವನ್ನೂ ಪಡೆದು ಧನ್ಯರಾದರು. ‘ಈ ಬೋರ್ಡಿಂಗ್ ಪಾಸ್​ಗೆ ಫ್ರೇಮ್ ಹಾಕಿ ಇಡುವೆ. ಥ್ಯಾಂಕ್ ಯೂ ಕುಂಬ್ಳೆ. ನಿಮ್ಮಿಂದ ನಮ್ರತೆ ಕಲಿಯಲು ಬಯಸಿರುವೆ’ ಎಂದು ಸೋಹಿನಿ ವಿಮಾನ ಲ್ಯಾಂಡ್ ಆದ ಬಳಿಕ ಟ್ವೀಟಿಸಿ ಸಂಭ್ರಮಿಸಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *