ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ನಗರದಲ್ಲಿ ಮತ್ತೊಂದು ಪ್ರತಿಷ್ಠಿತ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶವನ್ನು ಕಿಡಿಗೇಡಿಗಳು ರವಾನಿಸಿದ್ದಾರೆ.
ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿರುವ ಬಿಷಪ್ ಕಾಟನ್ ಶಾಲೆಯ ವೆಬ್ಸೈಟ್‌ಗೆ ಕಿಡಿಗೇಡಿಗಳಿಂದ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಗುರುವಾರ ಬೆಳಗ್ಗೆ ೬.೩೦ ಕ್ಕೆ ಬಾಂಬ್ ಸಂದೇಶ ಬಂದಿದ್ದು, ಬೆಳಗ್ಗೆ ಬಂದಿದ್ದ ಸಂದೇಶವನ್ನು ಆಡಳಿತ ಮಂಡಳಿ ಮಧ್ಯಾಹ್ನ ೩.೩೦ಕ್ಕೆ ಗಮನಿಸಿದ್ದಾರೆ. ಕೂಡಲೇ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬೆದರಿಕೆ ಸಂದೇಶದ ಮಾಹಿತಿ ತಿಳಿದು ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ತೆರಳಿ ಮಕ್ಕಳನ್ನು ಮತ್ತು ಶಾಲಾ ಸಿಬ್ಬಂದಿಯನ್ನು ಹೊರಗಡೆ ಕಳುಹಿಸಿ ಶಾಲೆಯಲ್ಲಿ ಇಂಚಿಂಚು ಪರಿಶೀಲನೆ ಮಾಡಿದ್ದಾರೆ. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶವೆಂದು ತಿಳಿದ ಪೊಲೀಸರು ಮತ್ತು ಶಾಲಾ ಆಡಳಿತ ಮಂಡಳಿಯವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಂಬಂಧ ಕಬ್ಬನ್‌ಪಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.