ಮುಂಬೈ ದಾಳಿ ಕಲಿಸಿದ ಭದ್ರತಾ ಪಾಠಗಳು

ದೇಶವನ್ನೇ ನಡುಗಿಸಿದ 26/11ರ ಮುಂಬೈ ದಾಳಿ ಸಂಭವಿಸಿ 10 ವರ್ಷಗಳಾಗಿವೆ. ಈ ಒಂದು ದಶಕದಲ್ಲಿ ಭಯೋತ್ಪಾದನೆ ವಿರುದ್ಧದ ಸಮರ ತೀವ್ರಗೊಳಿಸಿರುವ ಭಾರತ ಗಡಿಗಳನ್ನು ಭದ್ರವಾಗಿಸುತ್ತಿದೆ. ಹುತಾತ್ಮ ಅಧಿಕಾರಿಗಳ ಮತ್ತು ಸಂತ್ರಸ್ತರ ಕುಟುಂಬವರ್ಗದಲ್ಲಿ ಘಟನೆಯ ಕರಾಳನೆನಪು ಇನ್ನೂ ಮಾಸಿಲ್ಲ. ಭವಿಷ್ಯದಲ್ಲಿ ಮತ್ತೆ ಇಂಥ ದಾಳಿ ಸಂಭವಿಸದಂತೆ ಜಾಗ್ರತೆ ವಹಿಸುವ ಸಂಕಲ್ಪದೊಂದಿಗೆ, ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಬೇಕಿರುವುದು ಈಗಿನ ಅನಿವಾರ್ಯತೆ.

ಆ ಕರಾಳ ದಿನ…

ಸದಾ ಚಲನಶೀಲವಾಗಿರುವ ಮುಂಬೈ ನಗರದ ಮೇಲೆ ಅಂದು ಮತ್ತೊಮ್ಮೆ ಭಯೋತ್ಪಾದಕರ ಕರಾಳ ಛಾಯೆ ಆವರಿಸಿತ್ತು. 2008ರ ನವೆಂಬರ್ 26. ಅಂದಿನ ಕೆಲಸಕಾರ್ಯಗಳನ್ನು ಮುಗಿಸಿ ಇನ್ನೇನು ಗೂಡು ಸೇರಿಕೊಳ್ಳಬೇಕೆಂಬ ಆತುರದಲ್ಲಿದ್ದ ಜನತೆಗೆ ಒಮ್ಮೆಲೆ ಆಘಾತ ಕಾದಿತ್ತು. ಪಾಕಿಸ್ತಾನದ ಕರಾಚಿಯಿಂದ ಹಡಗಿನ ಮೂಲಕ ಬಂದಿದ್ದ 10 ಭಯೋತ್ಪಾದಕರು ಮುಂಬೈನ ಎಂಟು ಕಡೆ ದಾಳಿ ನಡೆಸುವ ಮೂಲಕ ತಲ್ಲಣವುಂಟು ಮಾಡಿದರು. ರಹಸ್ಯವಾಗಿ ಕಾರ್ಯಾಚರಿಸುತ್ತಿದ್ದ, ನುಸುಳಿ ಭಾರತ ಪ್ರವೇಶಿಸುತ್ತಿದ್ದ ಪಾಕ್ ಪ್ರಾಯೋಜಿತ ಭಯೋತ್ಪಾದಕರು ಅಂದು ಬಹಿರಂಗವಾಗಿ ಭಾರತದ ವಿರುದ್ಧ ಸಮರ ಸಾರುವ ಧಾರ್ಷ್ಯr ತೋರಿದರು. ಛತ್ರಪತಿ ಶಿವಾಜಿ ಟರ್ವಿುನಲ್ ರೈಲು ನಿಲ್ದಾಣ, ಒಬೆರಾಯ್ ಹೋಟೆಲ್, ತಾಜ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್, ಸೇಂಟ್ ಜೆವಿಯರ್ಸ್ ಕಾಲೇಜ್, ಮೆಟ್ರೊ ಸಿನಿಮಾ ಮುಂತಾದೆಡೆ ಉಗ್ರರು ಶಸ್ತ್ರಾಸ್ತ್ರಗಳೊಂದಿಗೆ ಮುಗಿಬಿದ್ದರು. ತಾಜ್ ಹೋಟೆಲಿನಲ್ಲಿ 15 ಜನರನ್ನು ಹಾಗೂ ಒಬೆರಾಯ್ ಹೋಟೆಲಿನಲ್ಲಿ 40 ಜನರನ್ನು ಒತ್ತೆಯಾಳಾಗಿಸಿಕೊಂಡರು. ಈ ಪೈಕಿ ಹಲವರು ವಿದೇಶಿಗರೂ ಸೇರಿದ್ದರು.

ಕರಾಚಿಯಿಂದ ಬಂದಿದ್ದ ಉಗ್ರರು

2008ರ ನವೆಂಬರ್ 21ರಂದು 10 ಉಗ್ರರ ತಂಡ ಕರಾಚಿಯ ಕಡಲ ತೀರದಿಂದ ಬೋಟೊಂದರಲ್ಲಿ ಭಾರತದತ್ತ ಹೊರಟಿತು. ಬೋಟ್ ತುಂಬ ಶಸ್ತ್ರಾಸ್ತ್ರಗಳು, ಎದೆಯಲ್ಲಿ ಮಹಾನರಮೇಧ ನಡೆಸುವ ಹುಚ್ಚು ಆವೇಶ. ಪ್ರತಿಯೊಬ್ಬರ ಕೈಯಲ್ಲೂ ಉಪಗ್ರಹ ಆಧಾರಿತ ದೂರಸಂಪರ್ಕ ಸಾಧನ. ನ. 23ರಂದು ಕಡಲ ಮಧ್ಯೆ ಸಿಕ್ಕ ಭಾರತೀಯ ಮೀನುಗಾರಿಕಾ ದೋಣಿಯೊಂದನ್ನು ವಶಪಡಿಸಿಕೊಂಡರು. ಅದರಲ್ಲಿದ್ದ ನಾಲ್ವರು ಬೆಸ್ತರನ್ನು ಕೊಂದು ಭಾರತದ ತೀರದತ್ತ ದೋಣಿ ನಡೆಸುವಂತೆ ಅಂಬಿಗನನ್ನು ಬೆದರಿಸಿದರು. ನ. 26ರ ರಾತ್ರಿ 8.10ಕ್ಕೆ ಮಚಿಮ್ಗರದ ತೀರಕ್ಕೆ ತಲುಪಿತು ಉಗ್ರ ಪಡೆ. ಇಲ್ಲಿ ಉಗ್ರರು ಬೇರೆ ಬೇರೆ ಕಡೆಗೆ ವಿಭಜನೆಗೊಂಡು ತೆರಳಿದರು. 8.30ರ ಸುಮಾರಿಗೆ ದಕ್ಷಿಣ ಮುಂಬೈಯ ಲಿಯೊಪೊಲ್ಡ್ ಕೆಫೆ ಎಂಬಲ್ಲಿ ಇಬ್ಬರು ಉಗ್ರರು ಮೊದಲ ಬಾರಿ ಗುಂಡಿನ ದಾಳಿ ನಡೆಸಿದರು. ಅಲ್ಲಿ 10 ಮಂದಿ ಸಾವಿಗೀಡಾಗಿ ಹಲವರು ಗಾಯಗೊಂಡರು. ಅದೇ ಜಾಗದಲ್ಲಿ ಎರಡು ಟ್ಯಾಕ್ಸಿಗಳಲ್ಲಿ ಬಾಂಬುಗಳನ್ನಿರಿಸಿದ್ದರು. ಆ ದಾಳಿಗೆ 5 ಮಂದಿ ಸಾವನ್ನಪ್ಪಿದರು. ಒಂಭತ್ತು ಭಯೋತ್ಪಾದಕರು ಹತರಾಗಿ, ಅಜ್ಮಲ್ ಕಸಬ್ ಜೀವಂತವಾಗಿ ಸೆರೆಸಿಕ್ಕ. ಪ್ರಕರಣದ ವಿಚಾರಣೆ ನಡೆದು, ಕಸಬ್​ಗೆ ಮರಣದಂಡನೆ ಘೋಷಿಸಲಾಯಿತು. 2012 ನವೆಂಬರ್ 21ರಂದು ಕಸಬ್​ನನ್ನು ಗಲ್ಲಿಗೇರಿಸಲಾಯಿತು.

ಮುಂದುವರಿದಿರುವ ಸಮಸ್ಯೆಗಳು

 • ಯಾವುದೇ ಬಯೋಮೆಟ್ರಿಕ್ ಗುರುತಿನ ಚೀಟಿ ಹೊಂದಿಲ್ಲದ ಗುತ್ತಿಗೆ ಕಾರ್ವಿುಕರನ್ನು ಮೀನುಗಾರಿಕಾ ದೋಣಿಗಳು ಬಳಸುವುದರಿಂದಾಗಿ ಕಡಲತೀರದ ಪೊಲೀಸ್ ಠಾಣೆಗಳ ಕಸರತ್ತು ಇನ್ನೂ ನಿಂತಿಲ್ಲ.
 • ಬಹುತೇಕ ಕಿನಾರೆ ಕಾವಲುಪಡೆ/ಕಡಲತೀರದ ಪೊಲೀಸರ ಬಳಿ ಬಯೋಮೆಟ್ರಿಕ್ ಗುರುತಿನ ಚೀಟಿಗಳನ್ನು ಅವಲೋಕಿಸಬಲ್ಲ ಸಾಧನಗಳಿಲ್ಲ.
 • ತಮಿಳುನಾಡು ಮತ್ತು ಗುಜರಾತ್ ಹೊರತುಪಡಿಸಿದರೆ, ಸರ್ಕಾರಿ ವರ್ಣಸಂಹಿತೆಯ ಅನುಸಾರ ರಾಜ್ಯಗಳಲ್ಲಿನ ಮೀನುಗಾರಿಕಾ ದೋಣಿಗಳಿಗೆ ವರ್ಣಲೇಪನವಾಗಿಲ್ಲ; 2.2 ಲಕ್ಷದಷ್ಟು ಮೀನುಗಾರಿಕಾ ದೋಣಿಗಳಲ್ಲಿ ಮಿನಿ-ಎಐಎಸ್ ಸಾಧನಗಳ ಅಳವಡಿಕೆಯಿನ್ನೂ ಬಾಕಿಯಿದೆ.

ಮುಂಬೈ ದಾಳಿ ಬಳಿಕ ಭದ್ರತೆಯ ದೃಷ್ಟಿಯಿಂದ ಭಾರತ ಎಚ್ಚೆತ್ತುಕೊಂಡಿದ್ದು, ಗಡಿಗಳನ್ನು ಭದ್ರವಾಗಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ 26/11ರ ಮುಂಚೆ ಹಾಗೂ ನಂತರದ ಭದ್ರತಾ ಸ್ಥಿತಿ ಮತ್ತು ನಮ್ಮ ಗಡಿಗಳ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಭಾರತದ ಗಡಿಭಾಗಗಳು

 • 7 ದೇಶಗಳೊಂದಿಗೆ ಹಂಚಿಕೊಂಡಿರುವ 15,000 ಕಿ.ಮೀ.ಗೂ ಹೆಚ್ಚು ಉದ್ದದ ಗಡಿಗಳು.
 • 7,500 ಕಿ.ಮೀ.ಗೂ ಉದ್ದದ ಕಡಲತೀರ.

ಸಂರಕ್ಷಣೆ ಮಾರ್ಗೋಪಾಯ

ಭೂಗಡಿಗಳು

ಬೇಲಿಕಾರ್ಯದ ಸ್ಥಿತಿಗತಿ- ಹೊನಲುಬೆಳಕು ವ್ಯವಸ್ಥೆಗಳೊಂದಿಗಿನ ತಂತಿಬೇಲಿ ಕಾರ್ಯ, ರಾತ್ರಿವೇಳೆಯಲ್ಲಿನ ಪತ್ತೆ ತಂತ್ರಜ್ಞಾನ, ಬಿಎಸ್​ಎಫ್ ವತಿಯಿಂದ ಪಹರೆ ಚಾಲ್ತಿಯಲ್ಲಿವೆ.

ಸ್ಮಾರ್ಟ್-ಫೆನ್ಸಿಂಗ್

ದೂರ ಪ್ರದೇಶದಲ್ಲಿದ್ದುಕೊಂಡೇ ಭೂ, ಜಲ, ವಾಯು ಮತ್ತು ಭೂಗತ ಪ್ರದೇಶಗಳ ಮೇಲೆ ಕಣ್ಗಾವಲು ಇರಿಸುವುದಕ್ಕೆ ಅಗತ್ಯವಾದ ಸರ್ವಋತು ವ್ಯವಸ್ಥೆಗಳು.

ಜಮ್ಮು-ಕಾಶ್ಮೀರದಲ್ಲಿನ 5.5 ಕಿ.ಮೀ. ಗಡಿಯುದ್ದಕ್ಕೂ ಒಂದು ಪ್ರಾಯೋಗಿಕ ಯೋಜನೆಯಾಗಿ ಪ್ರಸಕ್ತ ವರ್ಷದ ಸೆಪ್ಟೆಂಬರ್​ನಲ್ಲಿ ಇದನ್ನು ಆರಂಭಿಸಲಾಗಿದೆ.

ತಾಂತ್ರಿಕ ಸಲಕರಣೆಗಳು- ಥರ್ಮಲ್ ಇಮೇಜರ್, ಯುಜಿಎಸ್, ಫೈಬರ್ ಆಪ್ಟಿಕಲ್ ಸೆನ್ಸರ್​ಗಳು, ರೇಡಾರ್, ಸೋನಾರ್​ಗಳು (ಜಲಾಂತರ ಶಬ್ದಶೋಧಕಗಳು).


ಉಗ್ರದಾಳಿ ನಿಗ್ರಹಕ್ಕೆ ನಾವೆಷ್ಟು ಸನ್ನದ್ಧ?

| ಗೋವಿಂದರಾಜು ಚಿನ್ನಕುರ್ಚಿ/ಅವಿನಾಶ ಮೂಡಂಬಿಕಾನ

ಮುಂಬೈ ದಾಳಿ ಘಟನೆ ನಂತರ ಎಚ್ಚೆತ್ತ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ಸ್ಮಾರ್ಟ್ ಮಾಡುವ ಜತೆಗೆ ಹೊಸ ಪಡೆಗಳನ್ನೇನೋ ಸ್ಥಾಪಿಸಿತು. ಅವುಗಳ ಕಾರ್ಯವೈಖರಿ ಹೇಗಿದೆ, ಇನ್ನೂ ಉಳಿದಿರುವ ಕೊರತೆಗಳೇನು ಮೊದಲಾದ ಅವಲೋಕನಕ್ಕೆ ಇದು ಸಕಾಲ.

26/11 ಘಟನೆ ನಂತರ ಆಂತರಿಕ ಭದ್ರತಾ ವಿಭಾಗಕ್ಕೆ ಪ್ರತ್ಯೇಕ ಕಚೇರಿ, ಸಿಬ್ಬಂದಿ ನೇಮಕ ಮಾಡಿ ಡಿಜಿಪಿ, ಎಡಿಜಿಪಿ ದರ್ಜೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರಡಿ ಭಯೋತ್ಪಾದನಾ ನಿಗ್ರಹ ಕೇಂದ್ರ (ಸಿಸಿಟಿ- ಗರುಡ ಕಮಾಂಡೊ ಪಡೆ), ನಕ್ಸಲ್ ನಿಗ್ರಹ ಪಡೆ, ಗುಪ್ತಚರ ದಳ, ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಕರಾವಳಿ ಭದ್ರತಾ ಪಡೆ ಎಂಬ ಪ್ರತ್ಯೇಕ ಘಟಕ ಸ್ಥಾಪಿಸಲಾಗಿದೆ. ಅಲ್ಲದೆ, ರಾಜ್ಯ ಮತ್ತು ಕೇಂದ್ರ ಗುಪ್ತಚರ ಇಲಾಖೆ, ಇಂಟೆಲಿಜೆನ್ಸ್ ಬ್ಯೂರೋ(ಐಬಿ), ರೀಸರ್ಚ್ ಆಂಡ್ ಅನಾಲಿಸಿಸ್ ವಿಂಗ್​ನಂತಹ (ರಾ) ಬೇಹುಗಾರಿಕಾ ಸಂಸ್ಥೆಗಳಿಂದ ವಿಭಾಗವು ಭಯೋತ್ಪಾದನಾ ದಾಳಿ ಹಾಗೂ ನಕ್ಸಲ್ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿ್ತೆ. ಈ ಮಾಹಿತಿ ಆಧರಿಸಿ ಪೊಲೀಸ್ ಇಲಾಖೆಗೆ ಮುನ್ನೆಚ್ಚರಿಕೆ ನೀಡುವ ಕೆಲಸವನ್ನು ಈ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ.

ಗರುಡ ಪಡೆ: ರಾಷ್ಟ್ರೀಯ ಭದ್ರತಾ ಪಡೆ (ಎನ್​ಎಸ್​ಜಿ)ಯ ಮಾದರಿಯಲ್ಲಿ ರಾಜ್ಯದಲ್ಲಿ 250 ಮಂದಿಯ ಗರುಡ ಪಡೆ ರಚಿಸಿ ಚೆನ್ನೈ ಮತ್ತು ಹೈದರಾಬಾದ್ ಎನ್​ಎಸ್​ಜಿ ಘಟಕದಲ್ಲಿ ತರಬೇತಿ ಕೊಡಲಾಗಿದೆ. ಈ ಪಡೆ ಪ್ರಮುಖ ಸ್ಥಳಗಳಲ್ಲಿ ಕಾಲಕಾಲಕ್ಕೆ ತಾಲೀಮು ನಡೆಸಿ ಸದಾ ಸನ್ನದ್ಧವಾಗಿರುತ್ತದೆ.

ಬಾಂಬ್ ನಿಷ್ಕ್ರಿಯ ದಳಕ್ಕೆ ಬಲವಿಲ್ಲ: ಮೆಗಾಸಿಟಿ ಪೊಲೀಸಿಂಗ್ ಯೋಜನೆಯಡಿಯಲ್ಲಿ ಬೆಂಗಳೂರಿಗೆ 14.66 ಕೋಟಿ ರೂ. ವೆಚ್ಚದಲ್ಲಿ ಪಿಸಿಆರ್ ವ್ಯಾನ್-52, ಬಾಂಬ್ ನಿಷ್ಕ್ರಿಯ ದಳದ ವಾಹನ- 4, ಗಣ್ಯ ವ್ಯಕ್ತಿಗಳ ಬೆಂಗಾವಲಿಗೆ ಮಿನಿ ಬಸ್-2, ಮಾನವ ರಹಿತ ಏರಿಯಲ್ ವಾಹನ (ಯುಎವಿ)-1, ಗಣ್ಯ ವ್ಯಕ್ತಿಗಳ ಭದ್ರತೆಗೆ ಗುಂಡು ನಿರೋಧಕ ವಾಹನ-2, ಕ್ಯಾನೈನ್ ವ್ಯಾನ್-6, ಹೆದ್ದಾರಿ ಗಸ್ತು ಕಾರುಗಳು-7, ರ್ಯಾಪಿಡ್ ಇಂಟರ್ ಆಕ್ಷನ್ ವಾಹನ-24 ಖರೀದಿಗೆ ಸೂಚಿಸಿತ್ತು. ಈ ಎಲ್ಲ ಹಣವನ್ನು 140 ಟೊಯೋಟ ಗಸ್ತು ವಾಹನ ಖರೀದಿಗೆ ಯೋಜನೆ ಬದಲಾಯಿಸಿ ಕೊನೆಗೆ 222 ಗಸ್ತು ವಾಹನ (ಮಾರುತಿ ಸುಜುಕಿ ಎರಿಟಿಗಾ) ಖರೀದಿಸಲಾಗಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಕ್ಯಾಮರಾಗಳೇ ಇಲ್ಲ

 • ರಾಜ್ಯದಲ್ಲಿ ಜನಸಂದಣಿಯಿರುವ ಕೆಲ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಒದಗಿಸದಿರುವುದು ಆತಂಕಕಾರಿ ಬೆಳವಣಿಗೆ.
 • ರಾಜಧಾನಿ ಬೆಂಗಳೂರಿನಲ್ಲೇ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ. ಆದರೂ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.
 • ರಾಜ್ಯದ ದೊಡ್ಡ ಮಾರುಕಟ್ಟೆಗಳಲ್ಲೊಂದಾದ ಕೆ.ಆರ್ ಮಾರುಕಟ್ಟೆ ಪ್ರದೇಶದಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಓಡಾಡುತ್ತಾರೆ. ಮುಂಜಾನೆ 3ಗಂಟೆಯಿಂದ ತಡರಾತ್ರಿ 12.30ರ ವರೆಗೂ ಇಲ್ಲಿ ಜನಸಂದಣಿ ಇರುತ್ತದೆ. ಇಲ್ಲಿರುವ ಕೆಲ ಸಂದಿಗೊಂದಿಗಳಲ್ಲಿ ಸಿಸಿಕ್ಯಾಮರಾ ಇಲ್ಲ. ಬೆರಳೆಣಿಕೆಯಷ್ಟು ಪೊಲೀಸ್ ಸಿಬ್ಬಂದಿ ಕೆಲ ಹೊತ್ತು ಗಸ್ತು ತಿರುಗಿ ಸುಸ್ತಾಗಿ ಹಿಂದಿರುಗುತ್ತಾರೆ.

 

ಭಯೋತ್ಪಾದನಾ ನಿಗ್ರಹದ ಉಪಕ್ರಮಗಳು

 • ಎನ್​ಎಸ್​ಜಿ: ಏಕೈಕ ಗಣ್ಯ ಕಮಾಂಡೊ ಪಡೆ.
 • ರಾಜ್ಯ ಪೊಲೀಸ್ ಭಯೋತ್ಪಾದನಾ-ನಿಗ್ರಹ ತಂಡ: ಪರಿಣಾಮಕಾರಿಯಾಗಿರಲಿಲ್ಲ
 • ವಿವಿಧ ದಳ/ಸಂಸ್ಥೆಗಳ ಪ್ರತ್ಯೇಕಿಸುವಿಕೆಯಿಂದಾದ ಗುಪ್ತಚರ ಚಟುವಟಿಕೆಯಲ್ಲಿ ವೈಫಲ್ಯ.

26/11ರ ಘಟನೆ ನಂತರದ ಯೋಜನೆಗಳು:

 • ರಾಜ್ಯ ಪೊಲೀಸ್ ಪಡೆ: ಸರ್ವಸನ್ನದ್ಧವಾಗಿರುವ, ಎನ್​ಎಸ್​ಜಿಯಿಂದ ತರಬೇತಿ ಪಡೆದಿರುವ ಪಡೆಯನ್ನು ಪ್ರತಿ ರಾಜ್ಯವೂ ಹೊಂದುವಂತಾಗಿದೆ.
 • ಕಡಲತೀರದ ಭದ್ರತೆ: ಕರಾವಳಿ ರಾಜ್ಯಗಳ ಬಲವರ್ಧನೆಯಾಯಿತು.
 • ಪ್ರಥಮ ಪ್ರತಿಸ್ಪಂದಕಾರಿ ಪಹರೆ ಪೊಲೀಸರು ಹೊಸ ಪಾತ್ರವನ್ನು ನಿರ್ವಹಿಸುವಂಥ, ಅತ್ಯುತ್ತಮ ಸಾಧನ-ಸಲಕರಣೆಗಳನ್ನು ಹೊಂದುವಂಥ ಬೆಳವಣಿಗೆಯಾಯಿತು.
 • ಎನ್​ಐಎ: ಭಯೋತ್ಪಾದಕ ಸಂಘಟನೆಗಳು, ಅವುಗಳ ಸದಸ್ಯರು ಮತ್ತು ಕೆಲಸಗಾರರ ತನಿಖೆ/ಕಾನೂನು ಕ್ರಮ ಜರುಗಿಸುವುದಕ್ಕೆ ಸಮರ್ಪಿತವಾದ ಕೇಂದ್ರೀಯ ಸಂಸ್ಥೆ.
 • ಎನ್​ಎಸ್​ಜಿ: ವಿದೇಶಿ ಪಡೆಗಳಿಗೆ ಸರಿಗಟ್ಟುವ ರೀತಿಯಲ್ಲಿ ರೂಪಿಸಲಾದ ವ್ಯವಸ್ಥೆ. ಇದರ ವೈಶಿಷ್ಟ್ಯಗಳೆಂದರೆ-
 • ವಿನೂತನ ತಂತ್ರಜ್ಞಾನಗಳ ಬಳಕೆ, ಉನ್ನತೀಕರಣ/ಪರಿಷ್ಕರಣೆಗೆ ಉತ್ತೇಜನ.
 • ಎಲ್ಲ ಆರ್ಥಿಕ ಮತ್ತು ಭದ್ರತಾ ಸ್ವತ್ತುಗಳ ಸುರಕ್ಷತಾ ವ್ಯವಸ್ಥೆಯೊಂದಿಗೆ ಸಂಪರ್ಕಸಾಧಿಸಲಾಯಿತು.
 • ಐದು ಕೇಂದ್ರಗಳಲ್ಲಿ ಸದಾಸನ್ನದ್ಧವಾಗಿರುವ ಪಡೆಗಳು.
 • ‘3-ಡಿ ಇಮೇಜಿಂಗ್’ ನೆರವಿನೊಂದಿಗೆ ಸಂಭಾವ್ಯ ಗುರಿಗಳ ನಿಯತ ಸ್ಥಳಾನ್ವೇಷಣೆ.
 • ನ್ಯಾಟ್​ಗ್ರಿಡ್: ಎಲ್ಲ ಗುಪ್ತಚರ ಸಂಸ್ಥೆಗಳು ಇದಕ್ಕೆ ಮಾಹಿತಿ ನೀಡುವ ವ್ಯವಸ್ಥೆಯಿದ್ದು, ಕೇಂದ್ರೀಯ ಮತ್ತು ಸುಧಾರಿತ/ಪರಿಷ್ಕೃತ ರಾಜ್ಯ ಸಂಸ್ಥೆಗಳ ನಡುವಿನ ಸಹಕಾರಕ್ಕೆ ದ್ಯೋತಕವಾಗಿದೆ.