ಹಿಮಾಚ್ಛಾದಿತ ಕಣಿವೆಯಲ್ಲಿ ವಿಹರಿಸಿದ ಪ್ರಧಾನಿ: ವಿಷ್ಣುವಿನ ಪಾದಕ್ಕೆರಗಿದ ಮೋದಿ

ಬದರೀನಾಥ: ಶನಿವಾರ ಕೇದಾರನಾಥನ ದರ್ಶನ ಪಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬದರೀನಾಥದಲ್ಲಿ ಶ್ರೀ ವಿಷ್ಣುವಿನ ದರ್ಶನ ಪಡೆದರು. ಅಂದಾಜು 20 ನಿಮಿಷ ಮಂದಿರದಲ್ಲಿ ಪೂಜೆ ಸಲ್ಲಿಸಿದ ಮೋದಿ, ನಾಲ್ಕು ಬಾರಿ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿದರು.

17 ಗಂಟೆ ಗುಹೆಯಲ್ಲಿ ಧ್ಯಾನ: ಕೇದಾರನಾಥದಲ್ಲಿರುವ ಗುಹೆಯಲ್ಲಿ ಶನಿವಾರ 17 ತಾಸು ಧ್ಯಾನಸ್ಥ ಸ್ಥಿತಿಯಲ್ಲಿದ್ದ ಮೋದಿ, ಭಾನುವಾರ ಬೆಳಗ್ಗೆ ಪರ್ವತ ಮಾರ್ಗವಾಗಿ ಮತ್ತೆ ದೇಗುಲಕ್ಕೆ ಆಗಮಿಸಿದರು. ಈ ವೇಳೆ ಹಿಮದಿಂದ ಆವೃತ್ತವಾದ ಪರ್ವತದ ಸೌಂದರ್ಯವನ್ನು ಕಣ್ತುಂಬಿಕೊಂಡರು. ಮಂದಾಕಿನಿ ನದಿ ತೀರದಲ್ಲಿ ಕೆಲ ಕಾಲ ವಿಶ್ರಮಿಸಿದರು. ದೇವಾಲಯದಲ್ಲಿ ಪೂಜೆ ಅರ್ಚನೆ ಸಲ್ಲಿಸಿದರು. ಬಳಿಕ ಮಾತನಾಡಿದ ಮೋದಿ ಎರಡು ದಿನ ವಿಶ್ರಾಂತಿ ಪಡೆಯಲು ಅವಕಾಶ ನೀಡಿದ ಚುನಾವಣಾ ಆಯೋಗಕ್ಕೆ ಆಭಾರಿಯಾಗಿರುವುದಾಗಿ ತಿಳಿಸಿದರು. ದೇವರಲ್ಲಿ ಏನೆಂದು ಪ್ರಾರ್ಥಿಸಿದಿರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮೋದಿ, ದೇವರ ಚರಣಗಳಲ್ಲಿ ಏನನ್ನೂ ಅಪೇಕ್ಷಿಸುವುದಿಲ್ಲ. ಅಲ್ಲದೇ ಅಪೇಕ್ಷಿಸುವ ಪ್ರವೃತ್ತಿಯನ್ನು ಬೆಂಬಲಿಸುವುದೂ ಇಲ್ಲ. ಯಾಕೆಂದರೆ ದೇವರು ನಮ್ಮನ್ನು ಸಮಾಜಕ್ಕೆ ಏನನ್ನಾದರು ಕೊಡಲು ಯೋಗ್ಯರನ್ನಾಗಿ ಮಾಡಿದ್ದಾರೆ ಎಂದರು.

ನೀತಿಸಂಹಿತೆ ಉಲ್ಲಂಘನೆ ಆರೋಪ

ಪ್ರಧಾನಿಯ ಕೇದಾರನಾಥ ಯಾತ್ರೆಯನ್ನು ಕಾಂಗ್ರೆಸ್, ಟಿಡಿಪಿ ಹಾಗೂ ಟಿಎಂಸಿ ನೀತಿಸಂಹಿತೆ ಉಲ್ಲಂಘನೆಯೆಂದು ಆರೋಪಿಸಿವೆ. ಮೋದಿ ಪ್ರವಾಸವನ್ನು ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಅಲ್ಲದೇ, ಮೋದಿ ಕೇದಾರನಾಥ ದೇವಾಲಯದ ಮಾಸ್ಟರ್ ಪ್ಲಾನ್ ಘೋಷಣೆ ಮಾಡಿದ್ದಾರೆ. ಜನತೆಯನ್ನು ಮತ್ತು ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ್ದಾರೆ. ಇದು ನೀತಿಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಟಿಎಂಸಿ ಆರೋಪಿಸಿದೆ.

ಸಾರ್ವಜನಿಕರಿಗೂ ಧ್ಯಾನಕ್ಕೆ ಅವಕಾಶ

ಧ್ಯಾನ ಗುಹೆಗೆ ಪ್ರವಾಸಿಗಳನ್ನು ಸೆಳೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಇಲ್ಲಿ ಹಲವು ವ್ಯವಸ್ಥೆಗಳನ್ನು ಕಲ್ಪಿಸಿದೆ. ದೇವಾಲಯದ ಸುತ್ತಮುತ್ತಲಿನ ಒಂದೆರಡು ಕಿಮೀ ದೂರದಲ್ಲಿ ಧ್ಯಾನ ಮಾಡುವ ಗುಹೆಗಳ ವ್ಯವಸ್ಥೆ ಮಾಡಬೇಕೆಂಬ ಮೋದಿ ಸಲಹೆಯ ನಂತರದಲ್ಲಿ ನಿರ್ಮಾಣ ಮಾಡಲಾಗಿರುವ ಈ ಗುಹೆಗಳಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಗೃಹದ ವ್ಯವಸ್ಥೆ ಯಿದೆ. ಕಲ್ಲಿನಿಂದ ಕಟ್ಟಲಾಗಿರುವ ಈ ಗುಹೆಗೆ ಮರದ ಬಾಗಿಲಿದೆ. ಇಲ್ಲಿ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ, ದಿನದ 2 ಹೊತ್ತು ಟೀ ವ್ಯವಸ್ಥೆ ಇರುತ್ತದೆ. ಆರಂಭದಲ್ಲಿ 1 ದಿನದ ಬಾಡಿಗೆ 3000 ರೂ. ನಿಗದಿ ಪಡಿಸಲಾಗಿತ್ತಾದರೂ ಪ್ರವಾಸಿಗರ ಅನು ಕೂಲಕ್ಕಾಗಿ 990ರೂ.ಗೆ ಇಳಿಸಲಾಗಿದೆ.