ಯಳಂದೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಬಿಳಿಗಿರಿರಂಗನಬೆಟ್ಟದ ಶ್ರೀಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಮಾಸದ ಮೊದಲ ಶನಿವಾರ ಭಕ್ತರ ದೊಡ್ಡ ದಂಡೇ ಆಗಮಿಸಿತ್ತು.
ಮೊದಲ ಶ್ರಾವಣ ಶನಿವಾರ ಆಲಮೇಲು ರಂಗನಾಯಕಿ, ಶ್ರೀಬಿಳಿಗಿರಿ ರಂಗನಾಥಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ 3 ಬಾರಿ ಪ್ರದಕ್ಷಿಣೆ ಮಾಡಲಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬಂದಿತ್ತು. ಎಲ್ಲರೂ ದೊಡ್ಡ ತೇರಿನ ಬೀದಿಯಲ್ಲಿ ತಮ್ಮ ವಾಹನ ನಿಲ್ಲಿಸಿ ನಡೆದುಕೊಂಡೇ ದೇಗುಲಕ್ಕೆ ತೆರಳುತ್ತಿದ್ದರು.
ಇದು ಪ್ರಸಿದ್ಧ ವೈಷ್ಣವ ದೇಗುಲವಾಗಿದ್ದು, ಸಾವಿರಾರು ವರ್ಷಗಳ ಐತಿಹ್ಯವನ್ನು ಹೊಂದಿದೆ. ಇಲ್ಲಿ ಶ್ರಾವಣ ಮಾಸದ ಪ್ರತಿ ಶನಿವಾರವೂ ಜಿಲ್ಲೆ ಹಾಗೂ ಇತರ ಜಿಲ್ಲೆಗಳ ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸುವ ವಾಡಿಕೆ ಇದೆ. ಅದರಂತೆ ಶನಿವಾರವೂ ಭಕ್ತರ ಸಂಖ್ಯೆ ಗಣನೀಯವಾಗಿ ಏರಿತ್ತು.
ದೇವಸ್ಥಾನದ ಮುಂಭಾಗ ದಾಸರು ಶಂಖ, ಜಾಗಟೆಗಳನ್ನು ಬಾರಿಸಿ ಭಕ್ತಿ ಮೆರೆದರು. ಕಡ್ಲೆಪುರಿ, ಬೆಲ್ಲ, ಅಕ್ಕಿ, ಬಾಳೆಹಣ್ಣು ಹಾಕಿ ದೇಗುಲದ ಸುತ್ತ ಬಹುಪರಾಕ್ ಸೇವೆ ನೆರವೇರಿಸಿದರು.
ದೇಗುಲದ ಮುಂಭಾಗ ಇಟ್ಟಿದ್ದ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು.
ದೇಗುಲದ ಕಮರಿಯಲ್ಲಿರುವ ದಾಸೋಹ ಭವನದಲ್ಲೂ ಸರತಿ ಸಾಲಿನಲ್ಲಿ ನಿಂತ ಭಕ್ತರ ಗುಂಪು ಪ್ರಸಾದ ಸ್ವೀಕರಿಸಿದರು.
ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ದೇಗುಲದ ದಾಸೋಹ ಹಾಗೂ ಕಮರಿಗೆ ತೆರಳುವ ದೇಗುಲದ ಮಾರ್ಗವನ್ನು ಬಂದ್ ಮಾಡಿ ಪರ್ಯಾಯ ಮಾರ್ಗದಲ್ಲಿ ತೆರಳಲು ವ್ಯವಸ್ಥೆ ಮಾಡಲಾಗಿತ್ತು.