ಜಮಖಂಡಿ: ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಎರಡು ಜೋಡಿ ದಂಪತಿಗೆ ತಿಳುವಳಿಕೆ ನೀಡಿ ಒಂದುಗೂಡಿಸಿದ ಘಟನೆ ಇಲ್ಲಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನಡೆದಿದೆ.
ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ದಂಪತಿಗೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಒಂದಾಗಿ ಜೀವನ ನಡೆಸುವಂತೆ ನೀಡಿದ ಬುದ್ಧಿ ಮಾತಿಗೆ ದಂಪತಿ ಸಮ್ಮತಿಸಿದರು.
ಕಲ್ಲಹಳ್ಳಿ ಗ್ರಾಮದ ಸದಾಶಿವ ನಾಗಪ್ಪ ಬಸವಣ್ಣಪೂಜಾರಿ ಹಾಗೂ ಆತನ ಪತ್ನಿ ಗೀತಾ ಸದಾಶಿವ ಬಸವಣ್ಣಪೂಜಾರಿ ಮತ್ತು ಜಮಖಂಡಿ ನಗರದ ಗೋಪಾಲ ಶಾಮರಾವ ಭಜಂತ್ರಿ ಮತ್ತು ಆತನ ಪತ್ನಿ ರಜನಿ ಗೋಪಾಲ ಭಜಂತ್ರಿ ಒಂದಾದ ದಂಪತಿಗಳು.
ಸಂಸಾರದಲ್ಲಿ ಬರುವ ಭಿನ್ನಭಾವ ಮತ್ತು ಕಲಹಗಳಿಗೆ ಜೋತು ಬಿದ್ದು ಜೀವನ ಹಾಳು ಮಾಡಿಕೊಳ್ಳದೆ ಪರಸ್ಪರ ಅರ್ಥಮಾಡಿಕೊಂಡು ಜೀವನ ನಡೆಸಿ ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕೆಂದು ದಂಪತಿಗಳಿಗೆ ತಿಳುವಳಿಕೆ ನೀಡಲಾಯಿತು. ದಂಪತಿಗಳ ಪೋಷಕರಿಗೆ ಹಾಗೂ ಹಿರಿಯರಿಗೂ ತಿಳುವಳಿಕೆ ನೀಡಲಾಯಿತು.
ವಕೀಲರುಗಳಾದ ಎಸ್.ಎ. ಅಂಬಿ, ಎಸ್.ಕೆ. ಹಾಲಳ್ಳಿ, ಕಟ್ಟೆಪ್ಪನವರ, ಸಂಧಾನಗಾರ್ತಿ ವಕೀಲಾರದ ಜೆ.ಬಿ. ಕಳಸಣ್ಣವರ ಲೋಕ ಅದಾಲತ್‌ನಲ್ಲಿ ಹಾಜರಿದ್ದರು. ಅವರೆಲ್ಲರ ಸಮ್ಮುಖದಲ್ಲಿ ಒಂದಾದ ದಂಪತಿಗಳು ಸಿಹಿ ಹಂಚಿ ಖುಷಿಪಟ್ಟರು. ಲೋಕ ಅದಾಲತ್‌ನಲ್ಲಿ ಈ ವರೆಗೆ 1263 ವ್ಯಾಜ್ಯಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.