ಶಿರಸಿ: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಗರದ ನೆಮ್ಮದಿ ಆವರಣದ ರಂಗಧಾಮದಲ್ಲಿ ಜೂ. 21ರ ಬೆಳಗ್ಗೆ 5.30ಕ್ಕೆ ನಡೆಯಲಿದೆ. ವಿಶ್ವ ಮಾನ್ಯತೆ ಪಡೆದ ಭಾರತೀಯ ಹೆಮ್ಮೆಯ ಯೋಗ ನೆರವೇರಿಸಲು ತಾಲೂಕಿನ ಜನತೆ ಉತ್ಸುಕರಾಗಿದ್ದಾರೆ.
ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮತ್ತು ಆನಂದ ಬೋಧೇಂದ್ರ ಸರಸ್ವತೀ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಇಲ್ಲಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣಾ ಸಮಿತಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.
ಜಿಲ್ಲಾ ಯೋಗ ಫೆಡರೇಶನ್, ವಿದ್ಯಾನಗರ ರುದ್ರಭೂಮಿ ಸಮಿತಿ, ಆರ್ಟ್ ಆಫ್ ಲಿವಿಂಗ್, ರೋಟರಿ ಐಎಂಎ ಕೇಂದ್ರ, ನಿಸರ್ಗ ಟ್ರಸ್ಟ್, ರೋಟರಿ ಕ್ಲಬ್, ಐಎಂಎ, ಎಸ್ಪಿವೈಎಸ್ಎಸ್, ಇನ್ನರ್ ವ್ಹೀಲ್ ಕ್ಲಬ್, ಲಯನ್ಸ್ ಕ್ಲಬ್, ನಯನ ಫೌಂಡೇಶನ್, ಶಿರಸಿ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಅಸೋಸಿಯೇಶನ್, ಸೀನಿಯರ್ ಚೇಂಬರ್ಸ್ ಶಿರಸಿ, ಗಾಯತ್ರಿ ಗೆಳೆಯರ ಬಳಗ, ಆದರ್ಶ ವನಿತಾ ಸಮಾಜ ಹಾಗೂ ಆರೋಗ್ಯ ಭಾರತಿ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
200ಕ್ಕೂ ಅಧಿಕ ಜನರು ಬೆಳಗ್ಗೆ 5.30ರಿಂದ ಏಕ ಕಾಲದಲ್ಲಿ ಯೋಗ ಮಾಡಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೂ ಯೋಗದಲ್ಲಿ ಪಾಲ್ಗೊಳ್ಳಲಿದ್ದಾರೆ.
ಡಾ. ಪೂರ್ಣಿಮಾ ಎಸ್. ಯೋಗಾಭ್ಯಾಸದ ಮಾರ್ಗದರ್ಶನ ನೀಡಲಿದ್ದಾರೆ. ಬಳಿಕ ರಾಷ್ಟ್ರೋನ್ನತಿಗಾಗಿ ಯೋಗದ ಮೂಲಕ ವೈಯಕ್ತಿಕ ಕೊಡುಗೆ ವಿಷಯವಾಗಿ ಶಿರಳಗಿಯ ಶ್ರೀ ಚೈತನ್ಯ ರಾಮಕ್ಷೇತ್ರದ ಶ್ರೀ ಬ್ರ್ರ್ಮಾನಂದ ಭಾರತೀ ಸ್ವಾಮೀಜಿ ಆಶೀರ್ವಾದ ಪೂರ್ವಕ ವಿಶೇಷ ಸಂದೇಶ ನೀಡಲಿದ್ದಾರೆ. ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗ ನೀಡಿದೆ.
ಪ್ರಪಂಚದ ಅನೇಕ ದೇಶಗಳು ಭಾರತದ ಯೋಗವನ್ನು ಒಪ್ಪಿಕೊಂಡಿವೆ. ನಿತ್ಯ ಮನೆಯಲ್ಲಿ ಯೋಗ ಮಾಡುವವರು ಪ್ರಪಂಚದಾದ್ಯಂತ ಇದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಈ ಸಂದರ್ಭದಲ್ಲಿ ನಗರದ ಮನೆ- ಮನೆಯಿಂದಲೂ ಆಗಮಿಸಿ ಜನ ಪಾಲ್ಗೊಳ್ಳಲಿದ್ದು, ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. | ಶ್ರೀಕಾಂತ ಹೆಗಡೆ ಯೋಗ ಆಚರಣಾ ಸಮಿತಿಯ ಪ್ರಮುಖ