More

    ಒಂದೇ ಒಂದು ಸುಳ್ಳು ಹೇಳಿ ಮದ್ವೆ ಮಾಡಿದ್ದಕ್ಕೆ 11 ಮಂದಿಗೆ ಎದುರಾಯ್ತು ಸಂಕಷ್ಟ! ಬೀಗರ ಊಟದಲ್ಲಿ ಬಯಲಾಯ್ತು ಸತ್ಯ

    ಶಿವಮೊಗ್ಗ: ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಮಾತು ಇತ್ತು. ಈಗ ಒಂದೇಒಂದು ಸುಳ್ಳು ಹೇಳಿದ್ದಕ್ಕೆ ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ. ನವವಿವಾಹಿತ, ಮದುವೆ ಮಾಡಿಸಿದ ಪುರೋಹಿತರು, ಆಮಂತ್ರಣ ಪತ್ರಿಕೆ ಮುದ್ರಿಸಿದರು, ಕಲ್ಯಾಣ ಕಾರ್ಯಕ್ಕೆ ಸ್ಥಳಾವಕಾಶ ಕಲ್ಪಿಸಿದ ದೇವಾಲಯ ಸಮಿತಿಯವರು, ಫೋಟೋಗ್ರಾಫರ್, ಊಟೋಪಚಾರ ಮಾಡಿದ ಬಾಣಸಿಗರು ಸೇರಿ ಬರೋಬ್ಬರಿ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    ಸಂಬಂಧಿಕರ ಮದುವೆ: ಹುಡುಗಿ ಮಲವಗೊಪ್ಪ ಗ್ರಾಮದವಳು. ಯುವಕ ಸಂತೇಕಡೂರಿನವ. ಇಬ್ಬರೂ ದೂರದ ಸಂಬಂಧಿಗಳು. ಎರಡು ವರ್ಷದ ಹಿಂದೆ ಮದುವೆಯೊಂದರಲ್ಲಿ ಭೇಟಿಯಾಗಿದ್ದ ಇಬ್ಬರ ನಡುವೆ ಮೊಬೈಲ್ ಮೂಲಕ ಆರಂಭವಾದ ಸಂಭಾಷಣೆ, ವಿವಾಹದ ಹೊಸ್ತಿಲಿಗೆ ಕರೆತಂದಿತ್ತು.

    ಎರಡೂ ಕುಟುಂಬಗಳ ಸಮ್ಮತಿಯೂ ಸಿಕ್ಕಿತು. ಹುಡುಗಿ ಅಪ್ರಾಪ್ತೆಯಾಗಿರುವುದರಿಂದ ಒಂದು ವರ್ಷ ಕಾಯೋಣ ಎಂದುಕೊಂಡಿದ್ದ ಕುಟುಂಬಸ್ಥರು. ಜೂನ್‌ನಲ್ಲಿ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿದ್ದರು. ತಾಂಬೂಲ ಬದಲಾಯಿಸಿಕೊಂಡು ಸುಮ್ಮನಾಗಿದ್ದರೆ ಸಮಸ್ಯೆಯಿರಲಿಲ್ಲ. ತರಾತುರಿಯಲ್ಲಿ ಜುಲೈ 30ರಂದು ಮದುವೆಯನ್ನೂ ಮಾಡಿ ಬಿಟ್ಟರು.

    ಬೀಗರ ಊಟದಲ್ಲಿ ಬಯಲು: ಮದುವೆ ಮುಗಿಸಿ ಎರಡು ದಿನದ ಬಳಿಕ ಬೀಗರ ಊಟದ ದಿನ ನವವಿವಾಹಿತೆ ಅಪ್ರಾಪ್ತೆ ಎಂಬ ಸುದ್ದಿ ಹರಿದಾಡಿತು. ಅದು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯವರ ಕಿವಿಗೂ ಬಿತ್ತು. ಸ್ಥಳಕ್ಕೆ ತೆರಳಿದ ಮಕ್ಕಳ ರಕ್ಷಣಾ ಸಮಿತಿಯವರು ಬಾಲಕಿಯನ್ನು ಕರೆದುಕೊಂಡು ಬಂದು ಆಲ್ಕೊಳದ ಬಾಲಕಿಯರ ಬಾಲಭವನದಲ್ಲಿ ಇರಿಸಿ ದೂರು ದಾಖಲಿಸಿದ್ದಾರೆ.

    ಯಾರ ವಿರುದ್ಧ ದೂರು?: ಅಪ್ರಾಪ್ತೆಯನ್ನು ಮದುವೆಯಾದ ಯುವಕ, ಅಪ್ರಾಪ್ತೆಯ ತಂದೆ-ತಾಯಿ, ವರನ ಚಿಕ್ಕಪ್ಪ-ಚಿಕ್ಕಮ್ಮ, ಮದುವೆಗೆ ಜಾಗ ನೀಡಿದ ದೇವಸ್ಥಾನದ ಆಡಳಿತ ಮಂಡಳಿ, ಪುರೋಹಿತರು, ಇಬ್ಬರು ಫೋಟೋಗ್ರಾಫರ್‌ಗಳು, ಮದುವೆಗೆ ಅಡುಗೆ ಮಾಡಿದ ಬಾಣಸಿಗರು, ಆಹ್ವಾನ ಪತ್ರಿಕೆ ಮುದ್ರಿಸಿದ ಮುದ್ರಕರು, ಮದುವೆಗೆ ಭಾಗವಹಿಸಿದ ಸಂಬಂಧಿಕರು, ಸ್ನೇಹಿತರ ವಿರುದ್ಧ ದೂರು ದಾಖಲಾಗಿದೆ.

    ಡಿಸಿ ಸೂಚನೆ ನಡುವೆ ಕಾರ್ಯಾಚರಣೆ: ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ 10 ದಿನದ ಹಿಂದೆ ಸಭೆ ನಡೆಸಿ ಬಾಲ್ಯವಿವಾಹ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅಪ್ರಾಪ್ತರ ಪಾಲಕರ ಮೇಲೆ ಮಾತ್ರ ದೂರು ದಾಖಲಿಸಿದರೆ ಸಾಲದು. ಮದುವೆಗೆ ಸಹಕರಿಸಿದ ಎಲ್ಲರ ಮೇಲೂ ಪ್ರಕರಣ ದಾಖಲಿಸಿ ಎಂದು ಸೂಚನೆ ನೀಡಿದ ಬಳಿಕ ದಾಖಲಾದ ಮೊದಲ ಪ್ರಕರಣ ಇದಾಗಿದೆ.

    ತೇಜಸ್ವಿ ಸೂರ್ಯಗೆ ಒಳ್ಳೇ ಬುದ್ಧಿ ಬರಲೆಂದು ವಿಶೇಷ ಪೂಜೆ! ಪ್ರಸಾದ ತಲುಪಿಸಲು ಹೋದವರನ್ನ ವಶಕ್ಕೆ ಪಡೆದ ಪೊಲೀಸರು…

    ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಮಾಡಂಗಿಲ್ಲ: ಜಮೀರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts