ಹಳಿಯಾಳ: ವಿಜಯದಶಮಿ ನಿಮಿತ್ತ ತಾಲೂಕಿನ ಕೇರವಾಡ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಶನಿವಾರ ಬನ್ನಿ ಮುಡಿಯುವ ಧಾರ್ವಿುಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶರನ್ನವರಾತ್ರಿ ಸಂದರ್ಭದಲ್ಲಿ ಪಟ್ಟಣದಿಂದ ಕೇವಲ 3 ಕಿಮೀ ಅಂತರದಲ್ಲಿರುವ ಕೆರವಾಡ ಗ್ರಾಮದಲ್ಲಿ ಗ್ರಾಮದೇವಿ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಪ್ರಸಿದ್ಧಿ ಪಡೆದ ಧಾರ್ವಿುಕ ಕಾರ್ಯಕ್ರಮವಾಗಿದೆ. ನೂರಾರು ಭಕ್ತರು ಪಾಲ್ಗೊಂಡು ಬನ್ನಿ ಮುಡಿದು ಸಂಭ್ರಮಿಸಿದರು. ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪಲ್ಲಕ್ಕಿ ಉತ್ಸವ ನಡೆಯಿತು. ಪಲ್ಲಕ್ಕಿ ಉತ್ಸವವು ಬನ್ನಿ ಮುಡಿಯುವ ಸ್ಥಳಕ್ಕೆ ತೆರಳಿತು. ಬಳಿಕ ಅಲ್ಲಿಂದ ಬನ್ನಿ ಮುಡಿದು ದೇವಿಯ ಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಗ್ರಾಮದ ಮಹಿಳೆಯರು ದೇವಿಗೆ ಉಡಿ ತುಂಬಿ ಹಣ್ಣು-ಕಾಯಿ ನೈವೇದ್ಯ ಸರ್ಮಪಿಸಿದರು.