ಮುಂಡರಗಿ: ಪಟ್ಟಣದ ಕೆಎಸ್‌ಆರ್‌ಟಿಸಿ ಘಟಕದ ಬಸ್‌ಚಾಲಕ ವೀರಣ್ಣ ಮೇಟಿ ಅವರು ಕನ್ನಡ ರಾಜ್ಯೋತ್ಸವ ನಿಮಿತ್ತ ಶುಕ್ರವಾರ ತಮ್ಮ ಸ್ವಂತ ಖರ್ಚಿನಲ್ಲಿ ತಾವು ಚಲಾಯಿಸುವ ಬಸ್‌ನ ಮುಂಭಾಗದಲ್ಲಿ ಭುವನೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿ, ಬಸ್ ಅನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಇಲ್ಲಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದರು.
ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ವೀರಣ್ಣ ಮೇಟಿ ಅವರು 12 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ದಿನದಂದು ಬಸ್‌ನಲ್ಲಿ ಭುವನೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿ ಬಸ್ ಅನ್ನು ಪುಷ್ಪಗಳಿಂದ ಸಿಂಗರಿಸುತ್ತಾರೆ. ಸುಮಾರು 40 ಸಾವಿರ ರೂ.ವೆಚ್ಚ ಮಾಡಿ ಬೆಂಗಳೂರಿನಿಂದ ವಿವಿಧ ಪುಷ್ಪಗಳನ್ನು ತರಿಸಿ ಅಲಂಕರಿಸಿದ್ದಾರೆ. ಬಸ್‌ನ ಒಳಗಡೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.
ಘಟಕದ ವ್ಯವಸ್ಥಾಪಕ ಶೇಖರ ನಾಯಕ, ನಿರ್ವಾಹಕ ಧನಂಜಯ, ಪ್ರಕಾಶ ವಿಭೂತಿ, ಮತ್ತಿತರ ಸಿಬ್ಬಂದಿ ಚಾಲಕ ಮೇಟಿ ಕಾರ್ಯಕ್ಕೆ ಸಾಥ್ ನೀಡಿದರು.
ಕನ್ನಡ ರಾಜ್ಯೋತ್ಸವವನ್ನು ಈ ರೀತಿಯಲ್ಲಿ ಆಚರಿಸುವುದಕ್ಕೆ ಪ್ರತಿವರ್ಷ ನನ್ನ ವೇತನದಲ್ಲಿ ಇಂತಿಷ್ಟು ಹಣ ಮೀಸಲಿಡುತ್ತೇನೆ. ಆ ಹಣವನ್ನು ರಾಜ್ಯೋತ್ಸವದ ಹಬ್ಬಕ್ಕೆ ಭುವನೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿ ಬಸ್ ಸಿಂಗರಿಸಲು ಖರ್ಚು ಮಾಡುತ್ತೇನೆ.
>ವೀರಣ್ಣ ಮೇಟಿ, ಬಸ್ ಚಾಲಕ