ವಿಜಯವಾಣಿ ಸುದ್ದಿಜಾಲ ಧಾರವಾಡ
ಛಾಯಾಗ್ರಹಣ ಕೇವಲ ಕಲೆಯಲ್ಲ. ಅದು ನಮ್ಮ ಮನಸ್ಸಿನ ನಯವಾದ ದೃಷ್ಟಿಯ ಪ್ರತಿರೂಪ. ಶಶಿ ಸಾಲಿ ಅವರು ಇದನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡವರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ ಹೇಳಿದರು.
ನಗರದ ಆಲೂರ ವೆಂಕಟರಾವ್ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ `ಸೃಜನಶೀಲ ಛಾಯಾಚಿತ್ರಕಾರ ಶಶಿ ಸಾಲಿ’ ಕುರಿತು ರಚಿತ `ನೆನಪು ಹರಿಗೋಲು’ ಅಭಿನಂದನ ಗ್ರಂಥಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಽಕಾರ, ಐಶ್ವರ್ಯ ದೊರೆತಾಗ ಎಷ್ಟೋ ಜನ ತನ್ನ ಮೌಲ್ಯಗಳನ್ನು ಧೂಳೀಪಟ ಮಾಡುತ್ತಾರೆ. ಆದರೆ, ಶಶಿ ಸಾಲಿ ಸದಾ ಎಚ್ಚರದಿಂದ ಇರುವ ವ್ಯಕ್ತಿ. ಭೂತಕಾಲ ಮತ್ತು ವರ್ತಮಾನ ಕಾಲದ ಸಮನ್ವಯವನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡ ಮಾಂತ್ರಿಕ. ಅವರ ಸೃಜನಶೀಲ ಕ್ಯಾಮರಾ ಕಲೆ ನೋಡಿ, ಅರ್ಥ ಮಾಡಿಕೊಂಡಾಗ ಅವರ ವ್ಯಕ್ತಿತ್ವದ ಅರಿವಾಗುತ್ತದೆ. ಅವರ ಪ್ರತಿಯೊಂದು ಫೋಟೊ ಒಂದು ಕಥೆ ವಿವರಿಸುತ್ತದೆ ಎಂದರು.
ಶಶಿ ಸಾಲಿ ಕ್ರಮಿಸಿದ ಹಾದಿ ಸುಲಭದ್ದಲ್ಲ. ಹೋರಾಟದ ಮೂಲಕ ಬದುಕು ರೂಪಿಸಿಕೊಂಡವರು. ಅಂಥವರು ಸಾಹಸಿಗರಾಗುತ್ತಾರೆ. ಸಾಹಸದ ಬದುಕಾಗುತ್ತದೆ ಎಂದರು.
ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗೀಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಪ್ರೊ. ಸಿದ್ದಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಛಾಯಾಗ್ರಾಹಕ ಶಶಿ ಸಾಲಿ ಗೌರವ ಉಪಸ್ಥಿತರಿದ್ದರು.
`ಶಶಿ ಸಾಲಿ ಛಾಯಾಗ್ರಹಣದ ಕೌಶಲ್ಯಗಳು’ ವಿಷಯ ಕುರಿತು ದೇವು ಪತ್ತಾರ, `ಸಾಹಿತಿಗಳ ದೃಷ್ಟಿಯಲ್ಲಿ ಶಶಿ ಸಾಲಿ’ ವಿಷಯ ಕುರಿತು ಡಾ. ಜಿ.ಎಂ. ಹೆಗಡೆ, `ನೆನಪು ಹರಿಗೋಲು- ಶಶಿ ಸಾಲ ಆತ್ಮಕಥೆ’ ವಿಷಯ ಕುರಿತು ಡಾ. ವಿನಯಾ ವಕ್ಕುಂದ ಮಾತನಾಡಿದರು.
ಡಾ. ಈರಣ್ಣ ಇಂಜನಗೇರಿ ನಿರೂಪಿಸಿದರು.
