ಶ್ರೀರಂಗಪಟ್ಟಣ: ಎರಡು ಟನ್‌ನಸ್ಟು ಗೋಮಾಂಸ ತುಂಬಿಕೊಂಡು ಬೆಂಗಳೂರು ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನ ಆಂಬುಲೆನ್ಸ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ಬಳಿಕ ಚಾಲಕ ಮತ್ತು ಕ್ಲೀನರ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ತಾಲೂಕಿನ ಮೈಸೂರು-ಬೆಂಗಳೂರು ಹೆದ್ದಾರಿಯ ಕಿರಂಗೂರು ವೃತ್ತದಲ್ಲಿ ಮಂಗಳವಾರ ಮುಂಜಾನೆ 5 ರ ಸುಮಾರಿನಲ್ಲಿ ಮೈಸೂರಿನಿಂದ ಬೆಂಗಳೂರು ಕಡೆಗೆ 2 ಟನ್‌ನಷ್ಟು ಕತ್ತರಿಸಿದ ಗೋಮಾಂಸ ತುಂಬಿ ವೇಗವಾಗಿ ತೆರಳುತ್ತಿದ್ದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಕೆ.ಆರ್.ಪೇಟೆ ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.
ಅಪಘಾತದ ಬಳಿಕ ಗೂಡ್ಸ್ ವಾಹನದ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪಾರಾರಿಯಾಗಿದ್ದು, ಅನುಮಾನಗೊಂಡ ಸ್ಥಳಿಯರು ಹಾಗೂ ಆಂಬುಲೆನ್ಸ್ ಚಾಲಕ ವಾಹನವನ್ನು ಪರಿಶೀಲಿಸಲಾಗಿ ಗೋಮಾಂಸ ತುಂಬಿ ಸಾಗಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಕೂಡಲೇ ಶ್ರೀರಂಗಪಟ್ಟಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಆಂಬುಲೆನ್ಸ್ ವಾಹನದಲ್ಲಿದ್ದ ರೋಗಿ ಮತ್ತು ಸಂಬಂಧಿಕರನ್ನು ಆಂಬುಲೆನ್ಸ್ ಚಾಲಕನ ಸಹಾಯದಿಂದ ಮತ್ತೊಂದು ವಾಹನದಲ್ಲಿ ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಗೋಮಾಂಸ ತುಂಬಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಗೋಮಾಂಸವನ್ನು ಗುಂಡಿ ತೆಗೆದು ಮುಚ್ಚಿ ಹಾಕಿದ್ದಾರೆ.