Friday, 16th November 2018  

Vijayavani

Breaking News

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿಲಿಯರ್ಸ್ ವಿದಾಯ

Thursday, 24.05.2018, 3:04 AM       No Comments

ಪ್ರಿಟೋರಿಯಾ: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ವಿಶ್ವ ಕ್ರಿಕೆಟ್​ನ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಬುಧವಾರ ಅಚ್ಚರಿಯ ವಿದಾಯ ಪ್ರಕಟಿಸಿದ್ದಾರೆ. 14 ವರ್ಷದ ಕ್ರಿಕೆಟ್ ಜೀವನದಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದ್ದ 34 ವರ್ಷದ ವಿಲಿಯರ್ಸ್, ನಿವೃತ್ತಿ ನಿರ್ಧಾರವನ್ನು ತಮ್ಮ ಅಧಿಕೃತ ಆಪ್​ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದರು.

‘ತಕ್ಷಣದಿಂದಲೇ ನಾನು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಪ್ರಕಟಿಸುತ್ತಿದ್ದೇನೆ. 114 ಟೆಸ್ಟ್, 228 ಏಕದಿನ ಹಾಗೂ 78 ಅಂತಾರಾಷ್ಟ್ರೀಯ ಟಿ20 ಪಂದ್ಯದ ಬಳಿಕ ಬೇರೊಬ್ಬರು ನನ್ನ ಸ್ಥಾನಕ್ಕೆ ಬರಬೇಕು ಎಂದು ಆಶಿಸಿದ್ದೇನೆ. ಪ್ರಾಮಾಣಿಕವಾಗಿ ಹೇಳುವುದಾದರೆ ಇಷ್ಟೆಲ್ಲ ಕ್ರಿಕೆಟ್ ಆಡಿ ನಾನು ಬಳಲಿದ್ದೇನೆ. ಇದು ಕಠಿಣ ನಿರ್ಧಾರ. ಬಹಳ ದೀರ್ಘ ಸಮಯದಿಂದ ಇದರ ಬಗ್ಗೆ ಯೋಚನೆಯಲ್ಲಿದ್ದೆ. ಉತ್ತಮ ಫಾಮರ್್​ನಲ್ಲಿದ್ದಾಗಲೇ ನಿವೃತ್ತಿ ಹೇಳಬೇಕು ಎನ್ನುವುದು ನನ್ನ ಯೋಚನೆಯಾಗಿತ್ತು. ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಸರಣಿ ಗೆಲುವುಗಳ ಬಳಿಕ, ನಿವೃತ್ತಿಯಾಗಲು ಸರಿಯಾದ ಸಮಯ ಎಂದು ನಿರ್ಧರಿಸಿದ್ದೇನೆ’ ಎಂದು ವಿಲಿಯರ್ಸ್ ಹೇಳಿದ್ದಾರೆ.

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ ನಾಲ್ಕು ದಿನಗಳ ಬಳಿಕ ವಿಲಿಯರ್ಸ್ ಈ ನಿರ್ಧಾರ ಪ್ರಕಟಿಸಿದ್ದು, ಮುಂದೆ ಐಪಿಎಲ್​ನಲ್ಲಿ ಆಡುವ ಬಗ್ಗೆ ತಮ್ಮ ನಿರ್ಧಾರವನ್ನು ಹೇಳಿಲ್ಲ.

ವಿಶ್ವಕಪ್ ಸಿದ್ಧತೆಗೆ ಏಟು

‘ಮಿ. 360’ ಎಂದು ವಿಶ್ವದೆಲ್ಲೆಡೆಯ ಕ್ರಿಕೆಟ್ ಅಭಿಮಾನಿಗಳಿಂದ ಗುರುತಿಸಿಕೊಂಡಿದ್ದ ವಿಲಿಯರ್ಸ್​ರ ನಿವೃತ್ತಿ ನಿರ್ಧಾರ ದಕ್ಷಿಣ ಆಫ್ರಿಕಾದ 2019ರ ವಿಶ್ವಕಪ್ ಸಿದ್ಧತೆಗೆ ದೊಡ್ಡ ಏಟು ನೀಡಿದೆ. ಆಡುವ ದಿನಗಳಿಂದಲೂ ತಂಡದ ಪ್ರಮುಖ ಭಾಗವಾಗಿದ್ದ ವಿಲಿಯರ್ಸ್, ಇಂಗ್ಲೆಂಡ್​ನಲ್ಲಿ ನಡೆಯಲಿರುವ ವಿಶ್ವಕಪ್​ಗೆ ತಂಡದ ಬಲವಾಗಿದ್ದರು.

ದಾಖಲೆಗಳ ಸರದಾರ

ಏಕದಿನ ಕ್ರಿಕೆಟ್​ನ ಅತಿವೇಗದ ಅರ್ಧಶತಕ (16 ಎಸೆತದಲ್ಲಿ 50 ರನ್), ಅತಿವೇಗದ ಶತಕ (31 ಎಸೆತದಲ್ಲಿ 100 ರನ್) ಹಾಗೂ ಅತಿವೇಗದ 150ರನ್ (64 ಎಸೆತದಲ್ಲಿ) ಸಿಡಿಸಿದ ದಾಖಲೆ ಹೊಂದಿರುವ ವಿಲಿಯರ್ಸ್, ದಕ್ಷಿಣ ಆಫ್ರಿಕಾ ಪರ ಟೆಸ್ಟ್​ನಲ್ಲಿ 2ನೇ ಗರಿಷ್ಠ ವೈಯಕ್ತಿಕ ಮೊತ್ತ (278*) ದಾಖಲೆಯನ್ನೂ ಹೊಂದಿದ್ದಾರೆ. ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಗಳಿಸಿದ ಗರಿಷ್ಠ ಅಂಕ (935) ದಾಖಲೆಯೂ ಇವರ ಹೆಸರಲ್ಲಿದೆ. 2010, 2014 ಹಾಗೂ 2015ರಲ್ಲಿ ಐಸಿಸಿಯ ವರ್ಷದ ಏಕದಿನ ಕ್ರಿಕೆಟಿಗ ಎನ್ನುವ ಗೌರವವನ್ನೂ ಪಡೆದಿದ್ದಾರೆ.

ವಿಶ್ವಕಪ್ ಗೆಲ್ಲದೆ ನಿರ್ಗಮನ

ದ್ರಾವಿಡ್ ಪಾಲಿಗೆ ಆಟಗಾರನಾಗಿ ಐಸಿಸಿ ವಿಶ್ವಕಪ್ ಟ್ರೋಫಿ ಗಗನ ಕುಸುಮವಾದಂತೆ ವಿಲಿಯರ್ಸ್ ಪಾಲಿಗೆ ಐಸಿಸಿಯ ಟ್ರೋಫಿ ಗಗನಕುಸುಮವಾಗುಳಿಯಿತು. ವಿದಾಯದ ಪಂದ್ಯವಾಡುವ ಅವಕಾಶವನ್ನೂ ಪಡೆಯದೇ ವಿಲಿಯರ್ಸ್ ವಿದಾಯ ಪ್ರಕಟಿಸಿದರು. ಮುಂದಿನ ವಿಶ್ವಕಪ್​ಗೆ ವರ್ಷವಿರುವಾಗ ಹಾಗೂ ಏಕದಿನದಲ್ಲಿ 10 ಸಾವಿರ ರನ್ ಗಡಿ ಮುಟ್ಟಲು 423 ರನ್​ಗಳಿಂದ ದೂರವಿದ್ದಾಗ ವಿಲಿಯರ್ಸ್ ಹೊರನಡೆದಿದ್ದಾರೆ. ಅವರು ಕಳೆದ 11 ವರ್ಷಗಳಿಂದ ಐಪಿಎಲ್ ಆಡುತ್ತಿದ್ದರೂ, ಒಮ್ಮೆಯೂ ಚಾಂಪಿಯನ್ ತಂಡದ ಭಾಗವಾಗಿಲ್ಲ. ಕ್ರಿಕೆಟ್​ನೊಂದಿಗೆ ವಿಲಿಯರ್ಸ್ ಟೆನಿಸ್, ರಗ್ಬಿ ಹಾಗೂ ಗಾಲ್ಪ್ ಆಟದಲ್ಲೂ ಪರಿಣಿತರಾಗಿದ್ದಾರೆ.

ಜಾಲತಾಣದಲ್ಲಿ ಅಚ್ಚರಿ

ವಿಲಿಯರ್ಸ್ ನಿರ್ಧಾರ ಪ್ರಕಟಿಸುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ಅಚ್ಚರಿ-ಆಘಾತ ವ್ಯಕ್ತವಾದವು. ಸಚಿನ್ ತೆಂಡುಲ್ಕರ್, ಸೆಹ್ವಾಗ್, ಅಲನ್ ಡೊನಾಲ್ಡ್ ಎಲ್ಲರೂ ವಿಲಿಯರ್ಸ್​ಗೆ ಭವಿಷ್ಯದ ದಿನಗಳಿಗೆ ಶುಭ ಕೋರಿದರು. ವಿಶ್ವ ಕಂಡ ಅತ್ಯುತ್ತಮ ಬ್ಯಾಟ್ಸ್ ಮನ್ ನೊಂದಿಗೆ ಫೀಲ್ಡರ್ ಕೂಡ ಆಗಿದ್ದ ವಿಲಿಯರ್ಸ್​ರ ಕೆಲವು ಸ್ಮರಣೀಯ ಕ್ಯಾಚ್​ಗಳು ಹಾಗೂ ರನೌಟ್​ಗಳನ್ನು ನೆನೆಸಿಕೊಂಡಿದ್ದಾರೆ.

103 ಏಕದಿನಕ್ಕೆ ನಾಯಕ

ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 2 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದ ವಿಲಿಯರ್ಸ್, 1 ಗೆಲುವು ಹಾಗೂ 1 ಸೋಲಿನ ದಾಖಲೆ ಹೊಂದಿದ್ದಾರೆ. 2012ರಿಂದ 2017ರವರೆಗೆ ಏಕದಿನ ನಾಯಕರಾಗಿದ್ದ ವಿಲಿಯರ್ಸ್ 103 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. 59 ಗೆಲುವು, 39 ಸೋಲು, 1 ಟೈ ಹಾಗೂ 4 ರದ್ದು ಫಲಿತಾಂಶ ಇದರಲ್ಲಿದೆ. ಇದೇ ಅವಧಿಯಲ್ಲಿ 18 ಟಿ20 ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ವಿಲಿಯರ್ಸ್ 8 ಗೆಲುವು, 9 ಸೋಲು ಹಾಗೂ 1 ರದ್ದು ಫಲಿತಾಂಶ ಕಂಡಿದ್ದಾರೆ. 2015ರ ಏಕದಿನ ವಿಶ್ವಕಪ್, 2012ರ ಟಿ20 ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸಿದ್ದರು. ದಕ್ಷಿಣ ಆಫ್ರಿಕಾವನ್ನು 100ಕ್ಕಿಂತ ಅಧಿಕ ಏಕದಿನ ಪಂದ್ಯದಲ್ಲಿ ಮುನ್ನಡೆಸಿದ ಏಕೈಕ ನಾಯಕ ವಿಲಿಯರ್ಸ್.

ವಿದೇಶದ ಲೀಗ್​ಗಳಲ್ಲಿ ಆಡುವ ಬಗ್ಗೆ ಯಾವುದೇ ಯೋಚನೆಯಿಲ್ಲ. ದೇಶೀಯ ಕ್ರಿಕೆಟ್​ನಲ್ಲಿ ಟೈಟಾನ್ಸ್​ಗೆ ಲಭ್ಯವಿರಲಿದ್ದೇನೆ. ಅದರೊಂದಿಗೆ ಫಾಫ್ ಡು ಪ್ಲೆಸಿಸ್ ಹಾಗೂ ದಕ್ಷಿಣ ಆಫ್ರಿಕಾ ತಂಡದ ಅತಿದೊಡ್ಡ ಬೆಂಬಲಿಗನಾಗಿ ಇರಲಿದ್ದೇನೆ.

| ಎಬಿ ಡಿವಿಲಿಯರ್ಸ್

 

Leave a Reply

Your email address will not be published. Required fields are marked *

Back To Top