ನಟ ಪುನೀತ್​ಗಾಗಿ 500 ಕಿ.ಮೀ. ದೂರದಿಂದ ಓಟದ ಮೂಲಕವೇ ಬೆಂಗಳೂರಿಗೆ ಆಗಮಿಸುತ್ತಿದ್ದಾಳೆ 3 ಮಕ್ಕಳ ತಾಯಿ!

1 Min Read

ಧಾರವಾಡ: ನಟ ಪುನೀತ್​ ರಾಜ್​ಕುಮಾರ್​ ನಿಧನರಾಗಿ ಇಂದಿಗೆ(ನ.29) ಒಂದು ತಿಂಗಳಾದರೂ ಅವರ ಅಭಿಮಾನಿಗಳ ಮನದ ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ನಿತ್ಯ ಪುನೀತ್​ ಹೆಸರಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿಯ ದರ್ಶನ ಪಡೆದು ಕಂಬನಿ ಮಿಡಿಯುತ್ತಲೇ ಇದ್ದಾರೆ. ಇದೀಗ ಮೂರು ಮಕ್ಕಳ ತಾಯಿಯೊಬ್ಬರು ನಟ ಪುನೀತ್ ರಾಜ್​ಕುಮಾರ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು 500 ಕಿ.ಮೀ. ಓಟ ಆರಂಭಿಸಿದ್ದಾರೆ.

ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದಾಕ್ಷಾಯಣಿ ಉಮೇಶ ಪಾಟೀಲ ಎಂಬುವರಿಗೆ ಪುನೀತ್​ ರಾಜ್​ಕುಮಾರ್​ ಅಂದ್ರೆ ತುಂಬಾ ಇಷ್ಟ. ಪುನೀತ್​ರ ಕಟ್ಟಾ ಅಭಿಮಾನಿಯಾಗಿರುವ ದಾಕ್ಷಾಯಿಣಿ, ಓಟದ ಮೂಲಕ ಆಗಮಿಸಿ ಪುನೀತ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಂದು (ಸೋಮವಾರ) ಬೆಳಗ್ಗೆ ಮ್ಯಾರಾಥಾನ್​ ಆರಂಭಿಸಿದ್ದಾರೆ. ಸ್ವಗ್ರಾಮದಿಂದ ಪುನೀತ್​ರ ಸಮಾಧಿವರೆಗೂ ಅಂದರೆ ಮನಗುಂಡಿ ಗ್ರಾಮದಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋವರೆಗೂ ಒಬ್ಬರೇ ಓಟದ​ ಮೂಲಕ ಆಗಮಿಸಲಿದ್ದಾರೆ. ಓಟದ ಮೂಲಕ ನಗರಕ್ಕೆ ಆಗಮಿಸಿದ ದಾಕ್ಷಾಯಣಿ ಅವರನ್ನು ನಗರದ ಲಿಂಗಾಯತ ಭವನದಲ್ಲಿ ಸ್ವಾಗತಿಸಿ ಅಭಿನಂದಿಸಲಾಯಿತು.

ನಾನು ಮೂರು ಮಕ್ಕಳ ತಾಯಿ. ನನ್ನ ಓರ್ವ ಪುತ್ರಿಯ ವಯಸ್ಸಿನ್ನೂ 11 ತಿಂಗಳು. ಬಾಲ್ಯದಿಂದ ಪುನೀತ್​ ರಾಜಕುಮಾರ್​ ಅಭಿಮಾನಿಯಾಗಿ ಬೆಳೆದಿದ್ದೇನೆ. ಅವರ ಹಠಾತ್​ ನಿಧನದಿಂದ ಬಹಳ ದುಃಖಿತಳಾಗಿದ್ದೇನೆ. ಅವರು ಮಾಡಿದ ಸಮಾಜ ಸೇವೆಗಳಿಂದ ಪ್ರೇರೇಪಿತಳಾಗಿ ನೇತ್ರದಾನ ಮತ್ತು ರಕ್ತದಾನ ಶಿಬಿರಗಳನ್ನು ಪ್ರೋತ್ಸಾಹಿಸಲು ನಿರ್ಧಾರ ಕೈಗೊಂಡಿದ್ದೇನೆ. ಬಾಲ್ಯದಿಂದ ಓಟದಲ್ಲಿ ಆಸಕ್ತಳಾಗಿದ್ದು, ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದೇನೆ. ಕ್ರೀಡೆಯ ಮೂಲಕವೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅದಕ್ಕಾಗಿ ಧಾರವಾಡದಿಂದ ಬೆಂಗಳೂರಿನಲ್ಲಿರುವ ಅವರ ಸಮಾಧಿವರೆಗೆ ಓಡುತ್ತಿದ್ದೇನೆ. ಇದಕ್ಕೆ ಕುಟುಂಬ, ಸಂಬಂಧಿಕರು ಹಾಗೂ ಗ್ರಾಮಸ್ಥರ ಪ್ರೋತ್ಸಾಹವಿದೆ ಎಂದು ದಾಕ್ಷಾಯಿಣಿ ಹೇಳಿದ್ದಾರೆ.

ವಿವಾದದ ಸುಳಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ: ಮಾದಪ್ಪ ಭಕ್ತರಿಂದ ಆಕ್ರೋಶ

ಹಾಗೆಲ್ಲ ಮಾಡಿದ್ರೆ ಅಪ್ಪುಗೆ ದ್ರೋಹ ಮಾಡಿದಂತೆ, ಆ ವಿಷ್ಯ ಅವನೊಂದಿಗೆ ಮಣ್ಣಾಗ್ಬೇಕು ಅನ್ಕೊಂಡಿದ್ದ: ರಾಘಣ್ಣ

ವೈದ್ಯನ ಕಾಮಪುರಾಣ: ಕಚೇರಿಯಲ್ಲೇ ತಬ್ಕೊಂಡು ಪೀಡಿಸಿದ್ರೂ 9 ಮಹಿಳೆಯರಲ್ಲಿ ಯಾರೊಬ್ಬರೂ ಬಾಯ್ಬಿಟ್ಟಿಲ್ಲ ಏಕೆ?

Share This Article