ಕೃಷ್ಣಮೂರ್ತಿ ಪಿ.ಎಚ್., ಮಾಯಕೊಂಡ
ಸುಮಾರು 20 ಎಕರೆಗಿಂತ ಹೆಚ್ಚಿನ ವಿಶಾಲವಾದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣ ಕಳೆದ 40-50 ವರ್ಷಗಳಿಂದ ಬಳಕೆಯಾಗದೆ ಪಾಳು ಬಿದ್ದಿದೆ.
ಹೌದು… ಎಲ್ಲವೂ ಇದ್ದು ಬಳಕೆಗೆ ಬಾರದೆ ಹಾಳಾಗಿರುವ ದಾವಣಗೆರೆ ಜಿಲ್ಲೆಯ ಪ.ಜಾತಿಗೆ ಮೀಸಲಿರುವ ವಿಧಾನಸಭಾ ಕ್ಷೇತ್ರ ಮಾಯಕೊಂಡದ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಯಶೋಗಾಥೆ ಇದು.
ದಾವಣಗೆರೆ ಎಪಿಎಂಸಿ ಬಿಟ್ಟರೆ ಎಲ್ಲ ತಾಲೂಕು ಹಾಗೂ ಗ್ರಾಮೀಣ ಮಟ್ಟದ ಕೃಷಿ ಉತ್ಪನ್ನ ಮಾರುಕಟ್ಟೆ ಗಳಿಗಿಂತ ದೊಡ್ಡದಾದ ಹಾಗೂ ವಿಶಾಲವಾದ ಪ್ರಾಂಗಣ, ಕಟ್ಟಡ ಹೊಂದಿದ್ದು, ಗ್ರಾಮದ ಹೊರವಲಯದಲ್ಲಿ ಹೊಸದುರ್ಗ-ದಾವಣಗೆರೆ ಜಿಲ್ಲಾ ಮುಖ್ಯರಸ್ತೆಗೆ ಹೊಂದಿಕೊಂಡ ಉಪ ಕೃಷಿ ಮಾರುಕಟ್ಟೆ ಪ್ರಾಂಗಣ ವಿಶಾಲವಾಗಿದ್ದರೂ ಯಾವುದೇ ವಹಿವಾಟು ನಡೆಯುತ್ತಿಲ್ಲ.
ಈ ಭಾಗದಲ್ಲಿ ಅತಿಹೆಚ್ಚು ಮೆಕ್ಕೆಜೋಳ, ಅಡಕೆ, ಭತ್ತ, ರಾಗಿ, ಜೋಳ ಮತ್ತು ತರಕಾರಿ ಬೆಳೆ ಬೆಳೆಯುತ್ತಾರೆ. ಆದರೆ, ಇಲ್ಲಿ ಹೆಸರಿಗಷ್ಟೇ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಇದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತ ಅವಧಿಯಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆಗೆ ಖರೀದಿಸಲು ಮೂರು ನಾಲ್ಕು ತಿಂಗಳು ಖರೀದಿ ಕೇಂದ್ರ ತೆರೆದದ್ದನ್ನು ಬಿಟ್ಟರೆ ತದನಂತರ, ಆರು ವರ್ಷದ ಹಿಂದೆ ಮಾರುಕಟ್ಟೆಯಲ್ಲಿ ದನಗಳ ಖರೀದಿ ಸಂತೆ 6 ತಿಂಗಳು ನಡೆಸಲಾಯಿತು. ಅದು ಬಿಟ್ಟರೆ ಯಾವುದೇ ಕಾರ್ಯ ಚಟುವಟಿಕೆ ನಡೆದಿಲ್ಲ.
ಹಾಗಾಗಿ, ಮಾರುಕಟ್ಟೆ ಗಿಡ ಗಂಟಿಗಳಲ್ಲಿ ಮುಚ್ಚಿ ಹೋಗಿ ಸಂಪೂರ್ಣ ಹಾಳಾಗಿದೆ. ಇನ್ನಾದರೂ ಮಾರುಕಟ್ಟೆ ಸ್ವಚ್ಛಗೊಳಿಸಿ ಸದ್ವಿನಿಯೋಗಿಸಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸರ್ಕಾರ ಈ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿರುವ ಗೋದಾಮುಗಳು, ವಾಣಿಜ್ಯ ಮಳಿಗೆಗಳ ಮಾರುಕಟ್ಟೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಜತೆಗೆ ರೈತರ ದವಸ,ಧಾನ್ಯಗಳನ್ನು ಗೋದಾಮುಗಳಲ್ಲಿ ಶೇಖರಣೆ ಮಾಡಲು ಅನುಕೂಲತೆ ಮಾಡಿಕೊಡಬೇಕು.
> ಪಿ.ಕೆ. ರಾಜೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ