More

  ಅಡುಗೆ ಮನೆಯಲ್ಲಿ ಆಹಾರ ಹುಡುಕಿ

  ಕಲಬುರಗಿ: ಭಾರತದಲ್ಲಿ ಆಹಾರ ಬಹುದೊಡ್ಡ ಸಂಸ್ಕೃತಿ. ಆದರೆ ಕಾರ್ಪೋರೇಟ್ ಸಂಸ್ಕೃತಿಯಿಂದ ಇಡೀ ಪದ್ಧತಿ ಹಾಳಾಗಿ ಎಲ್ಲರೂ ರೋಗದಿಂದ ನರಳುತ್ತಿದ್ದಾರೆ. ಅಡುಗೆ ಮನೆಯಲ್ಲಿ ಆರೋಗ್ಯ ಹುಡುಕಿ ಎಂದು ಪದ್ಮಶ್ರೀ ಪುರಸ್ಕೃತ ಡಾ.ಖಾದರ್ ವಲಿ ಕಿವಿಮಾತು ಹೇಳಿದರು.

  ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ ಸಹ ಯೋಗದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋ ಜಿಸಿದ್ದ ಆರೋಗ್ಯದ ಗುಟ್ಟು (ಸುಭದ್ರ, ಸುಸ್ಥಿರ ಜೀವನ ಕ್ರಮ) ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

  ನಾವು ಆರೋಗ್ಯ ವನ್ನು ಆಸ್ಪತ್ರೆಯಲ್ಲಿ ಹುಡು ಕುತ್ತಿರುವ ಪರಿಣಾಮ ಸುಧಾರಣೆ ಕಾಣುತ್ತಿಲ್ಲ. ಕಾಣುವುದೂ ಇಲ್ಲ. ಅದನ್ನೇ ಅಡುಗೆ ಮನೆಯಲ್ಲಿ ಹುಡುಕಿದರೆ ಖಂಡಿತಾ ಯಶಸ್ಸು ಸಿಗಲಿದೆ. ನೂರಾರು ವರ್ಷದ ಹಿಂದೆ ಒಂದು ಕಾಯಿಲೆ ಇರಲಿಲ್ಲ. ಆಹಾರ ಸೇರಿ ಜೀವನ ಶೈಲಿ ಹಾಗಿತ್ತು. ಈಗ ಪಿಜ್ಜಾ, ಬರ್ಗರ್ ಕಾಲ ಬಂದಿದೆ. ಆನ್‌ಲೈನ್ ಆಹಾರ ತಿನ್ನುತ್ತಿದ್ದಾರೆ. ಹೀಗಾದರೆ ನಿಮ್ಮ ಆರೋಗ್ಯ ಸುಧಾರಣೆ ಅಸಾಧ್ಯ. ರಕ್ತದಲ್ಲಿ ಗ್ಲುಕೋಸ್ ಅಂಶ ಹೆಚ್ಚಾಗಿ ರೋಗಗಳು ಸೇರಿಕೊಳ್ಳುತ್ತಿವೆ ಎಂದು ಹೇಳಿದರು.

  ಕೃಷಿಕ ಉಲ್ಲಾಸ್ ದೇಶಪಾಂಡೆ, ಬಳ್ಳಾರಿ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಅಮೀನ್ ಮುಖ್ತಾರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಹಿಂಗುಲಾಂಬಿಕ ಆಯುವೇದಿಕ್ ಕಾಲೇಜಿನ ಪ್ರಾಧ್ಯಾಪಕಿ ಡಾ.ನಿರ್ಮಲಾ ಕೆಳಮನಿ ಸ್ವಾಗತಿಸಿದರು. ವಿಕಾಸ ಅಕಾಡೆಮಿ ವಿಸ್ವಸ್ಥ ಮಾರ್ತಾಂಡ ಶಾಸ್ತ್ರೀ ಪ್ರಾಸ್ತಾವಿಕ ಮಾತನಾಡಿದರು.

  ಪರಿಸ್ಥಿತಿ ಇನ್ನೂ ಗಂಭೀರ: ೧೦೦ಕ್ಕೆ ೩೬ ಜನ ಸಕ್ಕರೆ ಕಾಯಿಲೆ, ೩೮ ಜನ ಬಿಪಿ, ೨೮ ಜನ ಥೈರಾಯಿಡ್, ೨೬ ಜನ ಕಿಡ್ನಿ ತೊಂದರೆ, ೨೬ ಜನ ಮಾನಸಿಕ ತೊಂದರೆ, ೨೬ ಜನ ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ. ಒಬ್ಬರಲ್ಲಿ ೨-೩ ರೋಗ ಸೇರಿಕೊಂಡಿವೆ. ೧೦೦ಕ್ಕೆ ೩೬ ಮಕ್ಕಳು ಹೊಲಸು ಆಹಾರದಿಂದ ಮೃತಪಡುತ್ತಿವೆ. ಕೃತಕ ಪದ್ಧತಿಯಿಂದ ತಯಾರಾಗುವ ಆಹಾರ ವಿಷ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ೧೦ ವರ್ಷ ಹೀಗೆ ಕಳೆದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಡಾ.ಖಾದರ ಆತಂಕ ವ್ಯಕ್ತಪಡಿಸಿದರು. ಸುಮಾರು ೨೦೦ಕ್ಕೂ ಹೆಚ್ಚು ಪದಾರ್ಥಗಳನ್ನು ಆಹಾರ ರೂಪದಲ್ಲಿ ತಿನ್ನುತ್ತಿದ್ದೆವು. ಆಧುನಿಕ ಕೃಷಿ ವ್ಯವಸ್ಥೆಯಿಂದ ಭಾರತದ ಶೇ.೩೮ ಭಾಗ ಬರಡಾಗಿದೆ. ಕೀಟನಾಶಕ ಹಾವಳಿಯಿಂದ ಮನುಷ್ಯರಷ್ಟೇ ಅಲ್ಲ, ಹಕ್ಕಿಗಳಲ್ಲೂ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದರು.

  ನಂದು ಫ್ರೀ ಗ್ಯಾರಂಟಿ: ಕೆಲವರು ನಿಮ್ಮ ರೊಕ್ಕ ತೊಗೊಂಡು ಐದು ಗ್ಯಾರಂಟಿ ಕೊಡುತ್ತಾರೆ. ಆದರೆ ನಾನು ಫ್ರೀ ಗ್ಯಾರಂಟಿ ಕೊಡುತ್ತೇನೆ. ಅಕ್ಕಿ, ಹಾಲು, ಗೋದಿ, ಸಕ್ಕರೆ ಧಿಕ್ಕರಿಸಿ. ತಾಯಿ ಎದೆ ಹಾಲು ಕಡಿಮೆ ಆದರೆ ಮಕ್ಕಳಿಗೆ ಜೋಳ, ರಾಗಿ ಹಾಲು ಹಾಕಿ. ಪಾಕೆಟ್ ಹಾಲು ಎಂದಿಗೂ ಕೊಡಬೇಡಿ. ಇದನ್ನು ಹತ್ತು ವಾರ ತಪ್ಪದೇ ಮಾಡಿ, ರೋಗಮುಕ್ತರಾಗುತ್ತೀರಿ. ಇದು ನನ್ನ ಫ್ರೀ ಗ್ಯಾರಂಟಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅಂಬಲಿ, ರೊಟ್ಟಿ, ಮುದ್ದೆ, ನವಣೆ, ಬರಗು ಸೇರಿ ಸಿರಿಧಾನ್ಯ ಬಳಸಬೇಕು. ಈಗ ಪರ್ಯಾಯ ಮಾರ್ಗ ಬಂದಿದೆ. ಎಲ್ಲ ಆಹಾರ ಪದಾರ್ಥ ಸುಲಭವಾಗಿ ಸಿಗುತ್ತಿವೆ. ಈ ಮೂಲಕ ಎಲ್ಲ ಕಾಯಿಲೆ ವಾಸಿಮಾಡಿಕೊಳ್ಳಿ. ಅಡುಗೆ ಮನೆ, ಪದಾರ್ಥ ಎರಡೂ ಬದಲಾಗಬೇಕು. ತಾಯಂದಿರುವ ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

  ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಉಳಿದುಕೊಳ್ಳಲು ಕಾರ್ಪೋರೇಟ್ ವ್ಯವಸ್ಥೆ ತನಗೆ ಬೇಕಿದ್ದನ್ನೇ ನೀಡುತ್ತಿದೆ. ನಾವು ಕಣ್ಣು ಮುಚ್ಚಿ ಎಲ್ಲ ತಿನ್ನುತ್ತಿದ್ದೇವೆ. ಪ್ರಶ್ನಿಸುವ ಮನೋಭಾವ ಕಳೆದುಕೊಂಡಿದ್ದೇವೆ. ಆಧುನಿಕ ಜೀವನಶೈಲಿ ಎಲ್ಲವನ್ನೂ ಹದಗೆಡಿಸುತ್ತಿದೆ.
  | ಡಾ.ಖಾದರ್ ವಲಿ ಪದ್ಮಶ್ರೀ ಪುರಸ್ಕೃತ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts