Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ಸಂಸ್ಕೃತಿ ಬಿಂಬಿಸುವ ಒಂದು ಮಾದರಿ…

Sunday, 20.08.2017, 3:00 AM       No Comments

ಸರ್ಕಾರಿ ಇಲಾಖೆಗಳೆಂದರೆ ಬರೀ ಅಂಕಿಸಂಖ್ಯೆಗಳ ಸಮೂಹವಲ್ಲ. ಅದರಾಚೆಗೂ ಅವುಗಳಿಗೆ ಅಸ್ತಿತ್ವವಿದೆ, ಕರ್ತವ್ಯವಿದೆ. ಆಯಾ ಇಲಾಖೆಗಳು ನಾಡಿನ ಸಂಸ್ಕೃತಿಯ ಜೊತೆಗೆ ತಮ್ಮ ಸಂಬಂಧವೇನೆಂಬುದನ್ನು ಮೊದಲು ಗುರ್ತಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಸೃಜನಶೀಲವಾಗಿ ಆಲೋಚಿಸಿ ಕಾರ್ಯಕ್ಕಿಳಿದರೆ ಹೊಸ ಜಾಡಿನಲ್ಲಿ ಸಾಗಬಹುದು. ಸಂಸ್ಕೃತಿ ಬಿಂಬಿಸುವ ಒಂದು ಮಾದರಿ…

ಈ ಸಲದ ಸ್ವಾತಂತ್ರ್ಯೋತ್ಸವದ ಲಾಲ್​ಬಾಗ್ ಫಲ-ಪುಷ್ಪ ಪ್ರದರ್ಶನ ವಿಶೇಷವಾಗಿತ್ತು. ನಮ್ಮ ಕಾಲದ ಮಹತ್ವದ ಕವಿ-ಚಿಂತಕರೊಬ್ಬರನ್ನು ನೆನಪಿಸಿಕೊಳ್ಳುವ, ಪರಿಚಯಿಸುವ ವಿಶಿಷ್ಟ ಮಾದರಿಯಿಂದಾಗಿ ಈ ಪ್ರದರ್ಶನ ನನಗೆ ಅನೇಕ ಕಾರಣಗಳಿಗಾಗಿ ಮುಖ್ಯವೆನ್ನಿಸಿತು. ಇದು ದಾರ್ಶನಿಕ ಕವಿಗೆ ಸರ್ಕಾರ ಸಲ್ಲಿಸುತ್ತಿರುವ ಗೌರವವೂ ಹೌದು.

ಸಾಮಾನ್ಯವಾಗಿ ಸಾಹಿತ್ಯ ಸಂಸ್ಕೃತಿಯೆಂದರೆ ವಿಚಾರಗೋಷ್ಠಿ, ಪುಸ್ತಕ ಪ್ರದರ್ಶನ, ಸಂಗೀತ, ನೃತ್ಯ, ಚಿತ್ರ, ಶಿಲ್ಪಕಲೆಗಳ ಪ್ರದರ್ಶನ – ಮೊದಲಾದವು ಸಾಮಾನ್ಯ ಸಂಗತಿ. ಇದು ನಮ್ಮ ರೂಢಿಯ ಪರಿಕಲ್ಪನೆ. ಇದರ ನಿರ್ವಹಣೆ ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದ್ದು ಎಂಬುದು ನಮ್ಮ ಅಧಿಕಾರಿವರ್ಗದ ತಿಳುವಳಿಕೆ. ಅದಕ್ಕಾಗಿಯೇ ಒಂದು ಇಲಾಖೆಯನ್ನು ಸೃಷ್ಟಿಸಿದ್ದೇವೆ, ಅದು ನಮಗಿರುವ ಸಾಹಿತ್ಯ ಸಂಸ್ಕೃತಿಗಳ ಬಗೆಗಿನ ಕಾಳಜಿಯನ್ನು ಸೂಚಿಸುತ್ತದೆ ಎಂಬುದು ಸರ್ಕಾರದ ಸಮರ್ಥನೆ. ಆದರೆ ಸರ್ಕಾರದ ಪ್ರತಿಯೊಂದು ಇಲಾಖೆಗೂ ಸಂಸ್ಕೃತಿಗೂ ಸಂಬಂಧವಿದೆಯೆಂಬುದನ್ನು ಈ ಪ್ರದರ್ಶನ ಅತ್ಯಂತ ಸಮರ್ಥವಾಗಿ ತೋರಿಸಿಕೊಟ್ಟಿತು. ತೋಟಗಾರಿಕಾ ಇಲಾಖೆಗೂ ಸಂಸ್ಕೃತಿಗೂ ಯಾವ ರೀತಿಯ ಸಂಬಂಧ? ಸಂವೇದನಾಶೀಲ ವ್ಯಕ್ತಿಗಳಿದ್ದರೆ, ಹೊಸ ಪ್ರಯೋಗ ಮಾಡುವ ಇಚ್ಛಾಶಕ್ತಿಯಿದ್ದರೆ ಏನೆಲ್ಲ ಮಾಡಬಹುದೆಂಬುದಕ್ಕೆ ಈ ಪ್ರದರ್ಶನ ಒಂದು ನಿದರ್ಶನ. ಸರ್ಕಾರದ ಎಲ್ಲ ಇಲಾಖೆಗಳಿಗೂ ಇದೊಂದು ಮಾದರಿ. ಈ ನಾಡಿನ ಸಂಸ್ಕೃತಿಯ ಜೊತೆ ತಮಗೆ ಯಾವ ರೀತಿಯ ಸಂಬಂಧವಿದೆಯೆಂಬುದನ್ನು ಆಯಾ ಇಲಾಖೆಗಳು ಗುರ್ತಿಸಿಕೊಳ್ಳಬೇಕು. ಹಾಗೆ ಗುರ್ತಿಸಿಕೊಂಡಾಗ ಅಂಕಿ-ಸಂಖ್ಯೆಗಳ ನಿರ್ಜೀವ ಜಗತ್ತಿನಿಂದ ಹೊರಬಂದು ಜನರ ಬದುಕು ಭಾವನೆಗಳ ಜೊತೆ ಅರ್ಥಪೂರ್ಣ ಸಂಬಂಧ ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ.

ಈ ಪ್ರದರ್ಶನ ನೋಡಲು ನಾನು ನನ್ನ ಪತ್ನಿ ರಜನಿ ಹಾಗೂ ಗೆಳೆಯರೊಡನೆ ಲಾಲ್​ಬಾಗ್ ಬಳಿ ಹೋದಾಗ ನಮಗೆ ಆದ ಆಶ್ಚರ್ಯವೆಂದರೆ ಅಲ್ಲಿದ್ದ ಜನಜಾತ್ರೆ. ನಾವು ಹೋಗಿದ್ದು ಆಗಸ್ಟ್ 15 ರಂದು. ಆ ದಿನ ರಜೆಯಿದ್ದರೂ ಸ್ವಾತಂತ್ರ್ಯೋತ್ಸವದ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಜನರು ಪಾಲ್ಗೊಳ್ಳುವುದರಿಂದ ಇಲ್ಲಿ ಅಷ್ಟು ಜನಸಂದಣಿ ಇರುವುದಿಲ್ಲವೆಂದು ನಾವು ಭಾವಿಸಿದ್ದೆವು. ಜೊತೆಗೆ ಹಿಂದಿನ ರಾತ್ರಿ ಸುರಿದ ಧಾರಾಕಾರ ಮಳೆ ಬೆಂಗಳೂರಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಇಂದೂ ಮಳೆ ಬರಬಹುದೆಂಬ ಮುನ್ಸೂಚನೆಯಿತ್ತು. ಹೀಗಾಗಿ ಬೆಂಗಳೂರಿನ ಮಂದಿ ಮನೆ ಬಿಟ್ಟು ಈಚೆ ಬರುವುದಿಲ್ಲವೆಂದು ನಾವು ಅಂದುಕೊಂಡಿದ್ದು ಸಹಜವೇ ಆಗಿತ್ತು. ಆದರೆ ದಾಖಲೆಯ ಎರಡು ಲಕ್ಷದ ಹದಿಮೂರು ಸಾವಿರ ಜನ ಅಂದು ಲಾಲ್​ಬಾಗ್​ಗೆ ಭೇಟಿ ನೀಡಿ ಫಲ-ಪುಷ್ಪ ಪ್ರದರ್ಶನ ವೀಕ್ಷಿಸಿದ್ದರು. ಗಾಜಿನಮನೆಯ ಒಳ ಹೋಗುವುದಿರಲಿ, ಸಮೀಪ ಹೋಗುವುದೂ ಸಾಧ್ಯವಿಲ್ಲದ ಪರಿಸ್ಥಿತಿಯಿತ್ತು. ಒಟ್ಟು ಸುಮಾರು ಐದು ಲಕ್ಷದ ಎಪ್ಪತ್ತೈದು ಸಾವಿರ ಜನರು ಪ್ರದರ್ಶನದ ಅವಧಿಯಲ್ಲಿ ಭೇಟಿ ನೀಡಿದ್ದರು. ಸಂಗ್ರಹವಾದ ಪ್ರವೇಶ ಶುಲ್ಕವೇ ಒಂದು ವರದಿಯ ಪ್ರಕಾರ 2.13 ಕೋಟಿ ರೂಪಾಯಿಗಳು. ನಾವು ಹೋದ ದಿನ ಜನಸಂದಣಿಗೆ ಟಿಕೆಟ್ ನೀಡಿ ನಿಯಂತ್ರಿಸಲಾರದೆ ಪೊಲೀಸರು ಉಚಿತವಾಗಿಯೇ ಪ್ರವೇಶ ಕಲ್ಪಿಸಿದ್ದರೆಂದು ಇಲಾಖೆ ಅಧಿಕಾರಿಗಳು ತಿಳಿಸಿದರು. ಇದನ್ನು ನಾನು ಯಾಕೆ ಹೇಳುತ್ತಿದ್ದೇನೆಂದರೆ ಸಂಸ್ಕೃತಿಹಬ್ಬಕ್ಕೆ ಜನರ ಸ್ಪಂದನೆ ಹೇಗಿರುತ್ತದೆಂಬುದನ್ನು ಸೂಚಿಸಲು. ಜನಸಾಮಾನ್ಯರಿಗೆ ಸಂಸ್ಕೃತಿಹಬ್ಬವೆಂದರೆ ಆಕರ್ಷಣೆ ಮಾತ್ರವಲ್ಲ, ಪ್ರೀತಿಯೂ ಇದೆ. ಅವರು ಅಪೇಕ್ಷಿಸುವುದನ್ನು, ಪ್ರೀತಿಸುವುದನ್ನು ನಾವು ಅರ್ಥಮಾಡಿಕೊಂಡು ಸಮರ್ಪಕ ರೀತಿಯಲ್ಲಿ ನೀಡುತ್ತಿದ್ದೇವೆಯೇ? ತೋಟಗಾರಿಕೆ ಇಲಾಖೆಯೇ ನಿರೀಕ್ಷಿಸದ ನೆಲೆಯಲ್ಲಿ ಜನಸ್ಪಂದನೆ ಸಿಕ್ಕಿದೆ ಎಂದರೆ ಜನಸಾಮಾನ್ಯರ ಅಭಿರುಚಿಯನ್ನು ನಾವು ಗೌರವಿಸಬೇಕಾಗಿದೆ.

ನಗರದ ಕಾಂಕ್ರೀಟ್ ಕಾಡಿನ ನಡುವೆ ಇನ್ನೂರನಲವತ್ತು ಎಕರೆ ವಿಸ್ತೀರ್ಣದ ಸಸ್ಯಕಾಶಿ ಲಾಲ್​ಬಾಗ್ ನಮ್ಮ ನಾಡಿನ ಹೆಮ್ಮೆ. ಯುಗೋಸ್ಲೋವಿಯಾದ ಅಧ್ಯಕ್ಷ ಮಾರ್ಷಲ್ ಟಿಟೋ 1955ರಲ್ಲಿ ಲಾಲ್​ಬಾಗ್​ಗೆ ಭೇಟಿ ನೀಡಿದಾಗ ‘ಭಾರತವು ಉದ್ಯಾನವಾದರೆ, ಲಾಲ್​ಬಾಗ್ ಅದರ ಹೃದಯ’ ಎಂದು ಹೇಳಿದ್ದು ಲಾಲ್​ಬಾಗ್​ನ ಮಹತ್ವವನ್ನು ಸೂಚಿಸುತ್ತದೆ. 1760ರಲ್ಲಿ ಮೈಸೂರು ಸಂಸ್ಥಾನದ ಆಡಳಿತ ಚುಕ್ಕಾಣಿ ಹಿಡಿದಿದ್ದ ಹೈದರಾಲಿಯ ಖಾಸಗಿ ಉದ್ಯಾನವಾಗಿ ನಲವತ್ತು ಎಕರೆ ಪ್ರದೇಶದಲ್ಲಿ ನಿರ್ವಣಗೊಂಡ ಲಾಲ್​ಬಾಗ್, ಮುಘಲ್ ಗಾರ್ಡನ್ನಿನ ಮಾದರಿಯಲ್ಲಿ ರೂಪುಗೊಂಡಿತು. ಮುಂದೆ ಟಿಪ್ಪು, ಆ ನಂತರ ಬ್ರಿಟಿಷ್ ಅಧಿಕಾರಿಗಳು ಲಾಲ್​ಬಾಗ್ ಉದ್ಯಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುವಂತೆ ರೂಪಿಸಿದರು. ನಮ್ಮ ಅಧಿಕಾರಿಗಳಾದ ಜವರಾಯರು, ಮರೀಗೌಡರು ಇವರ ಸೇವೆಯನ್ನೂ ನಾವಿಲ್ಲಿ ನೆನಪಿಸಿಕೊಳ್ಳಬೇಕು. ಲಾಲ್​ಬಾಗ್​ನಲ್ಲಿ ಇಂದು 673 ಪ್ರಭೇದ ಹಾಗೂ 140 ಕುಟುಂಬಕ್ಕೆ ಸೇರಿದ 2150 ರೀತಿಯ ವಿವಿಧ ಸಸ್ಯಪ್ರಭೇದಗಳಿದ್ದು ಜಗತ್ತಿನ ಅಪರೂಪದ ಸಸ್ಯ ಸಂಗ್ರಹಾಲಯ ಉದ್ಯಾನವನ ಎಂಬ ಖ್ಯಾತಿ ಪಡೆದಿದೆ.

ಇಂಗ್ಲೆಂಡಿನ ಕ್ರಿಸ್ಟಲ್ ಪ್ಯಾಲೆಸ್ ಮಾದರಿಯಲ್ಲಿ ನಿರ್ವಣವಾಗಿರುವ ಗಾಜಿನಮನೆ ಲಾಲ್​ಬಾಗ್​ನ ಮತ್ತೊಂದು ಆಕರ್ಷಣೆ. ಜಾನ್ ಕ್ಯಾಮರಾನ್ ಲಾಲ್​ಬಾಗ್​ನ ಸೂಪರಿಂಟೆಂಡೆಂಟ್ ಆಗಿದ್ದ ಅವಧಿಯಲ್ಲಿ ಇದು ನಿರ್ವಣಗೊಂಡಿತು. ಇಲ್ಲಿಯೇ ವರ್ಷಕ್ಕೆರಡು ಬಾರಿ ಪ್ರಸಿದ್ಧ ಫಲ-ಪುಷ್ಪ ಪ್ರದರ್ಶನ ನಡೆಯುವುದು.

ಕಳೆದ ವರ್ಷ ಇಲ್ಲಿ ನಡೆದ ಫಲ-ಪುಷ್ಪ ಪ್ರದರ್ಶನದಲ್ಲಿ ದೆಹಲಿಯ ಗೋಲಗುಂಬಝå್ ಪುಷ್ಪದ ಪ್ರತಿಕೃತಿಯನ್ನು ರೂಪಿಸಲಾಗಿತ್ತು. ಅದನ್ನು ಗಮನಿಸಿದ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರಿಗೆ ನಮ್ಮ ಕುವೆಂಪು ಕವಿಮನೆಯ ಮಾದರಿಯನ್ನು ಇದೇ ರೀತಿ ರೂಪಿಸಬಹುದಲ್ಲವೇ ಎಂಬ ಆಲೋಚನೆ ಮೂಡಿದೆ. ಕಡಿದಾಳ್ ಅವರಿಗೆ ಒಂದು ಆಲೋಚನೆ ಮನಸ್ಸಿಗೆ ಬಂದರೆ ಅದನ್ನು ಹಾಗೇ ಬಿಡುವವರಲ್ಲ. ತೋಟಗಾರಿಕಾ ಇಲಾಖೆಗೆ ಪತ್ರವೊಂದನ್ನು ಬರೆದು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇಲಾಖೆಯಲ್ಲಿರುವ ಕ್ರಿಯಾಶೀಲ ವ್ಯಕ್ತಿತ್ವದ ಡಾ. ಎಂ ಜಗದೀಶ್ ಗಮನಕ್ಕೆ ಈ ಪ್ರಸ್ತಾಪ ಬಂದಿದೆ. ಸಂಸ್ಕೃತಿಪ್ರೇಮಿಯಾದ ಜಗದೀಶ್ ಇಲಾಖೆಯ ಉನ್ನತಾಧಿಕಾರಿಗಳ ಜೊತೆ ರ್ಚಚಿಸಿ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದಾರೆ. ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಜೊತೆಗೆ ಡಾ. ಬಿ. ಆರ್. ಸತ್ಯನಾರಾಯಣ್ ಇಡೀ ಪ್ರದರ್ಶನಕ್ಕೆ ಕುವೆಂಪು ಸಾಹಿತ್ಯದ ಸ್ಪರ್ಶ ನೀಡಲು ನೆರವಾಗಿದ್ದಾರೆ. ಈ ಎಲ್ಲರ ಶ್ರಮದಿಂದಾಗಿ ಸಹೃದಯ ಮನಸ್ಸುಗಳು ಒಂದು ಅಪೂರ್ವ ಅನುಭವ ಪಡೆಯುವಂತಾಯಿತು.

ಇಡೀ ಪ್ರದರ್ಶನ ಒಂದು ವಿಶಿಷ್ಟ ಅನುಭೂತಿ. ಗಾಜಿನಮನೆ ಪ್ರವೇಶಿಸಿದ ತಕ್ಷಣ ಕವಿಮನೆಯ ಪುಷ್ಪ ಪ್ರತಿಕೃತಿ. ಅದರ ಹಿಂದೆ ಒಂದು ಪುಟ್ಟ ಅರಣ್ಯ. ಅದರಾಚೆಗೆ ಕವಿಶೈಲ. ಅಲ್ಲಿಯೇ ಕವಿಸಮಾಧಿ. ಅದರಾಚೆಗೆ ಕುವೆಂಪು ಅವರ ವಿವಿಧ ವಯೋಮಾನದ ಚಿತ್ರಗಳು ಸಾಲಾಗಿದ್ದು ಅವರೇ ಬರುತ್ತಿದ್ದಾರೇನೋ ಎಂಬ ಭಾವ. ಒಂದು ಕಡೆ ಜೋಗ ಜಲಪಾತವನ್ನು ಕವಿ ನಿರೀಕ್ಷಿಸುತ್ತಿರುವ ದೃಶ್ಯ. ಮತ್ತೊಂದು ಕಡೆ ಕುವೆಂಪು ಅವರ ಉಬ್ಬು ಚಿತ್ರಗಳು, ವಿವಿಧ ಕಡೆಗಳಲ್ಲಿ ನೇಗಿಲಯೋಗಿಯ ಮರಳು ಕಲಾಕೃತಿ, ಪೂವಮ್ಮ ಕವಿತೆಯಾಧಾರಿತ ಬಿ ಕೆ ಎಸ್ ವರ್ಮ ಅವರ ಕಲಾಕೃತಿ, ಹೊರಗೆ ಗಾಜಿನಮನೆಯ ನಾಲ್ಕೂ ಕಡೆಗಳಲ್ಲಿ ಕುವೆಂಪು ಚಿತ್ರಗಳು, ಪಕ್ಕದಲ್ಲಿ ಕುವೆಂಪು ಚಿತ್ರಗಳ ಪ್ರದರ್ಶನ, ಅಲ್ಲಿಯೇ ಅವರ ಕೃತಿ ಸಮೂಹದ ದರ್ಶನ, ಮತ್ತೊಂದು ಕಡೆ ಕುವೆಂಪು ಅವರಿಗೆ ಸಂಬಂಧಿಸಿದ ಕಿರುಚಿತ್ರ ಪ್ರದರ್ಶನ, ಇನ್ನೊಂದು ಬದಿಯಲ್ಲಿ ಸಂಗೀತಗಾರರ ಗಾಯನ ಇತ್ಯಾದಿ. ಜೊತೆಗೆ ಎಲ್ಲ ಕಡೆ ಕುವೆಂಪು ಕವಿತೆಗಳ ಸಾಲುಗಳು, ಅವರ ವಿಚಾರಗಳ ಉಲ್ಲೇಖದ ಬರಹಗಳು…. ಒಟ್ಟಾರೆಯಾಗಿ ಕುವೆಂಪು ಜಗತ್ತೊಂದನ್ನು ಅಲ್ಲಿ ನಿರ್ವಿುಸಲಾಗಿತ್ತು.

ಇವೆಲ್ಲ ದೃಶ್ಯ ಪ್ರಪಂಚ. ಇದರ ಜೊತೆಗೆ ಅಲ್ಲಿಯೇ ನಿರ್ಮಿಸಿದ್ದ ಬಯಲು ರಂಗಮಂದಿರದಲ್ಲಿ ಪ್ರತಿನಿತ್ಯ ಸಂಗೀತ, ನೃತ್ಯ, ನಾಟಕ, ಗಮಕವಾಚನ, ಜಾನಪದ ಕಲಾವೈಭವ, ಕವಿಗೋಷ್ಠಿ, ಉಪನ್ಯಾಸ- ಮೊದಲಾದ ಕಾರ್ಯಕ್ರಮಗಳು. ಅವುಗಳನ್ನು ಕುಳಿತು, ನಿಂತು, ಅಡ್ಡಾಗಿ, ಅಡ್ಡಾಡುತ್ತಾ ಕೇಳಿ ನೋಡಿ ಆಸ್ವಾದಿಸುವ ಸಹೃದಯ ಸಮೂಹ. ಅದೂ ಒಂದು ರೀತಿಯಲ್ಲಿ ರೂಢಿಗಿಂತ ಭಿನ್ನವಾಗಿ ವಿಶಿಷ್ಟವಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ, ವಿವಿಧ ಅಕಾಡೆಮಿಗಳು ಇವರೆಲ್ಲರ ನೆರವನ್ನು ಪಡೆದು ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಸಂದರ್ಭಕ್ಕಾಗಿಯೇ ಕುವೆಂಪು ಪ್ರತಿಷ್ಠಾನ ಬಿ ಆರ್ ಸತ್ಯನಾರಾಯಣ ಸಂಪಾದಿಸಿದ ‘ಕುವೆಂಪು ಪುಷ್ಪಗೀತೆ’ ಎಂಬ ಸಂಕಲನವನ್ನು ಪ್ರಕಟಿಸಿದೆ. ಹೂವುಗಳನ್ನು ಕುರಿತಂತೆ ಕುವೆಂಪು ಬರೆದ ಕವಿತೆಗಳ ಜೊತೆಗೆ ಸ್ವಾತಂತ್ರೊ್ಯೕತ್ಸವಕ್ಕೆ ಸಂಬಂಧಪಟ್ಟ ಕವಿತೆಗಳು ಹಾಗೂ ಕವಿಮನೆ ಕವಿಶೈಲ ಪ್ರತಿಕೃತಿಯ ಚಿತ್ರಗಳೂ ಸೇರಿದಂತೆ ಪ್ರತಿ ಕವನವನ್ನೂ ಸಚಿತ್ರವಾಗಿ, ಅಂದವಾಗಿ ಮುದ್ರಿಸಿದ್ದಾರೆ. ಜೊತೆಗೆ ಕುವೆಂಪು ಅವರ ವಿಶ್ವಮಾನವ ಸಂದೇಶದ ಪ್ರತಿಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಆಸಕ್ತರು ಕುವೆಂಪು ಕೃತಿಗಳನ್ನು ಕೊಳ್ಳಲೂ ಅಲ್ಲಿ ಅವಕಾಶವಿತ್ತು.

ಒಬ್ಬ ಕವಿಯನ್ನು ಸಹೃದಯ ಸಮೂಹಕ್ಕೆ ಯಾವ ಯಾವ ರೀತಿಯಲ್ಲಿ ತಲುಪಿಸಲು ಸಾಧ್ಯವೋ ಆ ಎಲ್ಲ ಪ್ರಯತ್ನಗಳನ್ನೂ ಸಂಘಟಕರು ಪ್ರಾಮಾಣಿಕವಾಗಿ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದು ರೂಢಿಯ ಸರ್ಕಾರೀ ಚಟುವಟಿಕೆಯಾಗದೆ ಪ್ರೀತಿಯಿಂದ ಯೋಜಿಸಿದ ಕಾರ್ಯಕ್ರಮವಾಗಿತ್ತು.

ಇದನ್ನು ನೋಡಿದಾಗ ನನಗೆ ಕನ್ನಡ ಸಂಸ್ಕೃತಿಯನ್ನು ಪಸರಿಸುವ ಅನೇಕ ಸಾಧ್ಯತೆಗಳು ಕಾಣಿಸಿದವು. ಸಾಹಿತ್ಯವೆಂದರೆ ವಿಚಾರ ಸಂಕಿರಣಗಳು, ಭಾಷಣಗಳು ಎಂದು ಪರಿಭಾವಿಸಿರುವ ನಮ್ಮ ಸಂದರ್ಭದಲ್ಲಿ ಇಂತಹ ಪರಿಕಲ್ಪನೆಗಳು ಜನಸಮೂಹವನ್ನು ತಲುಪಲು ಹೆಚ್ಚು ಸಹಾಯಕವೆನ್ನಿಸಿತು. ನಮ್ಮ ತೋಟಗಾರಿಕಾ ಇಲಾಖೆ ಈ ಕಾರ್ಯಕ್ರಮವನ್ನು ಇದೊಂದಕ್ಕೆ ಮಾತ್ರ ಸೀಮಿತಗೊಳಿಸದೆ ನಮ್ಮ ಇತರ ಕವಿಗಳ, ಚಿಂತಕರ, ಸಾಧಕರ ಬಗ್ಗೆಯೂ ಮಾಡುವ ಸಂಕಲ್ಪ ಮಾಡಬೇಕು. ಲಕ್ಷಾಂತರ ಜನರಲ್ಲಿ ಆ ಮೂಲಕ ಕನ್ನಡ ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸಲು ಸಾಧ್ಯವಾಗಬಹುದು.

ಈ ಪ್ರದರ್ಶನದ ಬಹುಮುಖ್ಯ ಅಂಶವೆಂದರೆ ಅನೇಕ ಕಲೆಗಳನ್ನು ಸಂಯೋಜಿಸಿ ಕಾರ್ಯಕ್ರಮ ಆಯೋಜಿಸಿರುವುದು. ಸಾಹಿತ್ಯ, ಸಂಗೀತ, ಚಿತ್ರ, ಶಿಲ್ಪ, ನೃತ್ಯ, ನಾಟಕ, ತಂತ್ರಜ್ಞಾನ ಇವೆಲ್ಲವನ್ನೂ ಸಮಯೋಚಿತವಾಗಿ, ಸಾರ್ಥಕವಾಗಿ ಬಳಸಿಕೊಂಡಿರುವುದು ಮೆಚ್ಚಬೇಕಾದ ಸಂಗತಿ. ಇವೆಲ್ಲವುಗಳ ಹಿಂದೆ ಸಂಯೋಜಕರ ಪ್ರತಿಭೆ, ಪರಿಶ್ರಮ ಇರುವುದು ಸ್ಪಷ್ಟ.

ಕರ್ನಾಟಕದ ರಾಜಧಾನಿ ನಮ್ಮ ಬೆಂಗಳೂರಿನಲ್ಲಿ ಕರ್ನಾಟಕದ ಬಹುಮುಖೀ ಸಂಸ್ಕೃತಿಯನ್ನು ಬಿಂಬಿಸುವ ಒಂದು ವಸ್ತು ಪ್ರದರ್ಶನಾಲಯವಿಲ್ಲ. ಹೊರರಾಜ್ಯ, ಹೊರದೇಶಗಳಿಂದ ಬಂದವರಿಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಒಂದು ವಸ್ತು ಪ್ರದರ್ಶನಾಲಯವನ್ನು ನಿರ್ಮಿಸಲು ನಮ್ಮ ಸರ್ಕಾರ ಮನಸ್ಸು ಮಾಡಿದರೆ ಅದು ಕನ್ನಡ ಸಂಸ್ಕೃತಿಗೆ ನೀಡುವ ಬಹು ಮಹತ್ವದ ಕೊಡುಗೆಯಾಗುತ್ತದೆ. ಕರ್ನಾಟಕ ಸಂಸ್ಕೃತಿಸಂಪನ್ನ ನಾಡು. ಒಂದು ಕಡೆ ಕರಾವಳಿ, ಮತ್ತೊಂದು ಕಡೆ ಮಲೆನಾಡು, ಆ ಕಡೆ ಕೊಡಗು, ಇನ್ನೊಂದು ಕಡೆ ಹಳೆಯ ಮೈಸೂರಿನ ಪ್ರಾಂತ್ಯ, ಮಗದೊಂದು ಕಡೆ ಉತ್ತರಕರ್ನಾಟಕದ ವೈವಿಧ್ಯಮಯ ಸಂಸ್ಕೃತಿಯ ತವರು- ಇವೆಲ್ಲವುಗಳಿಗೂ ಅವುಗಳದೇ ಆದ ವಿಭಿನ್ನ ಪರಂಪರೆಯಿದೆ. ಒಮ್ಮೆ ಆ ಬಗ್ಗೆ ಚಿಂತಿಸಿದರೆ ಮೈ ನವಿರೇಳುತ್ತದೆ. ಆದರೆ ಅದರ ಬಗೆಗಿನ ತಿಳುವಳಿಕೆ ಹೊರಗಿನವರಿಗಿರಲಿ, ನಮ್ಮ ಜನರಿಗೇ ಸಮರ್ಪಕವಾಗಿ ತಿಳಿದಿಲ್ಲ. ಜಗತ್​ಪ್ರಸಿದ್ಧವಾದ ಅನೇಕ ಸ್ಥಳಗಳು ನಮ್ಮಲ್ಲಿವೆ. ಅವುಗಳ ಸ್ಥೂಲನೋಟವನ್ನಾದರೂ ನಾವು ಒಂದೆಡೆ ಬಿಂಬಿಸುವಂಥ ಅಂತರರಾಷ್ಟ್ರೀಯ ಮಟ್ಟದ ಒಂದು ವಸ್ತು ಪ್ರದರ್ಶನಾಲಯ ಮಾಡುವ ಬಗ್ಗೆ ಈಗಲಾದರೂ ಚಿಂತಿಸಬೇಕು. ಇದು ಹಣದ ಪ್ರಶ್ನೆಯಲ್ಲ. ಇಚ್ಛಾಶಕ್ತಿಯ ಸಂಗತಿ.

ಈ ಪ್ರದರ್ಶನ ಸರ್ಕಾರದ ನಮ್ಮ ಇತರ ಇಲಾಖೆಗಳಿಗೂ ಪ್ರೇರಣೆ ಒದಗಿಸಬೇಕು. ಆಯಾಯ ಇಲಾಖೆಗಳು ತಮ್ಮ ಇಲಾಖೆಗಳಿಗನುಗುಣವಾಗಿ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ, ಆ ಮೂಲಕ ತಮ್ಮ ಇಲಾಖೆಯ ಸಾಧನೆ, ಪರಿಚಯವನ್ನೂ ಮಾಡಬಹುದು. ಸಂಸ್ಕೃತಿ ಸಂಬಂಧೀ ಕಾರ್ಯಕ್ರಮವೆಂದರೆ ಜನರು ಪ್ರೀತಿಯಿಂದ ಬರುತ್ತಾರೆ. ಜನಸಮುದಾಯದೊಡನೆ ಅರ್ಥಪೂರ್ಣ ಸಂಬಂಧ ಸೃಷ್ಟಿಸಿಕೊಳ್ಳುವ ಒಂದು ಸಾಧ್ಯತೆಯನ್ನು ಈ ಪ್ರದರ್ಶನ ತೋರಿಸಿಕೊಟ್ಟಿದೆ. ಲಕ್ಷಾಂತರ ಜನರು ಹಣ ನೀಡಿ ಬಂದು ನೋಡಿ ಮೆಚ್ಚಿದ್ದಾರೆಂಬುದೇ ಅದಕ್ಕೆ ಸಾಕ್ಷಿ.

ಈ ಪ್ರದರ್ಶನ ಇಷ್ಟು ಆಕರ್ಷಕವಾಗಿ ಮೂಡಿಬರಲು ಕಾರಣರಾದ ಕಲಾವಿದರನ್ನೂ, ತಂತ್ರಜ್ಞರನ್ನೂ ನಾವಿಲ್ಲಿ ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕು. ಟಿ ಎಸ್ ಅರವಿಂದ, ಎಸ್ ಪಿ ಅಗರ್ವಾಲ್, ರಂಜನ್ ರಾಮಚಂದ್ರ, ಜಾನ್ ದೇವರಾಜ್, ತಾರೇಶ್​ಕುಮಾರ್, ಹರ್ಷ, ಪ್ರಕಾಶ್, ಶಿವಕುಮಾರ್, ನಡೋಣಿ, ಬಿ ಕೆ ಎಸ್ ವರ್ಮ, ದಿನೇಶ್ – ಹೀಗೆ ಹಲವಾರು ಪ್ರತಿಭಾವಂತ ಮನಸ್ಸುಗಳ ಪರಿಶ್ರಮ ಇಲ್ಲಿದೆ. ನನಗೆ ತಿಳಿದು ಬಂದಂತೆ ಇವರೆಲ್ಲರ ಪ್ರತಿಭೆಯನ್ನು ಸಂಯೋಜಿಸಿದ ಎಂ ಜಗದೀಶ್, ಕಡಿದಾಳ್ ಪ್ರಕಾಶ್ ಹಾಗೂ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಹಂಪ ನಾಗರಾಜಯ್ಯ ಅವರು ಅಭಿನಂದನೆಗೆ ಅರ್ಹರು.

ಕುವೆಂಪು ಅವರಿಗೆ, ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದ ಐವತ್ತು ವರ್ಷಗಳ ನೆನಪಿಗೆ ಈ ಪ್ರದರ್ಶನ ಆಯೋಜಿಸಲಾಗಿತ್ತು ಎಂದು ಕೇಳಿದೆ. ಇದೊಂದು ನೆಪವಷ್ಟೆ. ಇಂತಹ ನೆಪವಿಲ್ಲದೆಯೂ ಒಳ್ಳೆಯ ಕೆಲಸಗಳನ್ನು ಮಾಡಬಹುದು. ಸಂದರ್ಭಗಳಿಗೆ ಕಾದು ಕೂರುವ ಅಗತ್ಯವಿಲ್ಲ.

(ಲೇಖಕರು ಖ್ಯಾತ ವಿಮರ್ಶಕರು)

 

Leave a Reply

Your email address will not be published. Required fields are marked *

Back To Top