ರೈತನಿಂದ 5 ಲಕ್ಷ ರೂ. ಲಂಚ ಪಡೆದ ಆರೋಪ: ಎಸಿಬಿ ದಾಳಿ ನಡೆಸಿದ ತಹಸೀಲ್ದಾರ್​ ಮನೆಯಲ್ಲಿ ಸಿಕ್ತು ಭಾರಿ ಹಣ!

ನವದೆಹಲಿ: ತೆಲಂಗಾಣದ ಕಂದಾಯ ಆಧಿಕಾರಿಯೊಬ್ಬರ ಮನೆ ಮೇಲೆ ದಾಳಿ ಮಾಡಿದ ರಾಜ್ಯ ಭ್ರಷ್ಟಾಚಾರ ನಿಗ್ರಹದಳ, ಅಧಿಕಾರಿಗೆ ಸಂಬಂಧಿಸಿದ ಸುಮಾರು 93.5 ಲಕ್ಷ ನಗದು ಹಾಗೂ 400 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ.

ರಂಗಾರೆಡ್ಡಿ ಜಿಲ್ಲೆಯ ಕೇಶಂಪೇಟ್​ ಪ್ರದೇಶದ ಮಂಡಲ ಕಂದಾಯ ಅಧಿಕಾರಿ ಮತ್ತು ತಹಸೀಲ್ದಾರ್​ ಆಗಿರುವ ವಿ. ಲಾವಣ್ಯ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೈದರಾಬಾದ್​ನ ಹಯಾತ್​ನಗರದಲ್ಲಿರುವ ಮನೆಯಲ್ಲಿ ನಗದು ಮತ್ತು ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ರೈತರೊಬ್ಬರ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸಲು ನಾಲ್ಕು ಲಕ್ಷ ರೂ. ಲಂಚ ಪಡೆದಿದ್ದ ಗ್ರಾಮದ ಕಂದಾಯ ಆಧಿಕಾರಿ ಅಂತಯ್ಯ ಸೆರೆಸಿಕ್ಕ ಬಳಿಕ ಕಂದಾಯ ಅಧಿಕಾರಿ ಮನೆ ಮೇಲೆ ದಾಳಿ ನಡೆದಿದೆ.

ರೈತನ ಪ್ರಕಾರ ದಾಖಲೆ ಸರಿಪಡಿಸಲು ಒಟ್ಟು 8 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದರು. ಇದರಲ್ಲಿ ತಹಸೀಲ್ದಾರ್​ ಲಾವಣ್ಯರಿಗೆ 5 ಲಕ್ಷ ಹಾಗೂ ಅಂತಯ್ಯಗೆ 3 ಲಕ್ಷ ರೂ ಎಂದು ಆರೋಪಿಸಿದ್ದಾರೆ. ರೈತನಿಂದ ಹಣ ಪಡೆದ ಬಳಿಕ ಅಂತಯ್ಯ ತಹಸೀಲ್ದಾರ್​ಗೆ ಮಾಹಿತಿ ನೀಡಿದ್ದಾಗಿ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದು, ಬಳಿಕ ತಹಸೀಲ್ದಾರ್​ರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ, ತಾನೂ ಲಂಚ ಪಡೆದಿರುವ ಆರೋಪವನ್ನು ತಹಸೀಲ್ದಾರ್​ ತಳ್ಳಿಹಾಕಿದ್ದಾರೆ.

ಇದೇ ವೇಳೆಯಲ್ಲಿ ರೈತನೊಬ್ಬ ತಹಸೀಲ್ದಾರ್​ ಲಾವಣ್ಯ ಕಾಲಿಗೆ ಬಿದ್ದು ಮನವಿ ಮಾಡುತ್ತಿರುವ ವಿಡಿಯೋವೊಂದು ವೈರಲ್​ ಆಗಿರುವುದು ಪ್ರಕರಣಕ್ಕೆ ಮತ್ತಷ್ಟು ಪುರಾವೆ ಸಿಕ್ಕಿದಂತಿದೆ. ವಿಡಿಯೋದಲ್ಲಿರುವ ರೈತನನ್ನು ಭಾಸ್ಕರ್​ ಎಂದು ಗುರುತಿಸಲಾಗಿದ್ದು, ಪಾಸ್​ಬುಕ್​ ಪಡೆದುಕೊಳ್ಳಲು ಗ್ರಾಮ ಕಂದಾಯ ಅಧಿಕಾರಿ ಅಂತಯ್ಯಗೆ 30 ಸಾವಿರ ರೂ. ಲಂಚ ನೀಡಿರುವುದಾಗಿ ತಿಳಿಸಿದ್ದಾನೆ. ಪಾಸ್​ಬುಕ್​ನಲ್ಲಿನ ತಪ್ಪು ದಾಖಲೆಯನ್ನು ಸರಿಪಡಿಸಲು 1 ಲಕ್ಷ ರೂ. ಕೇಳಿದ್ದರು ಎಂದು ಎಸಿಬಿ ಮುಂದೆ ಬಾಯ್ಬಿಟ್ಟಿದ್ದಾನೆ.

ದುರಾದೃಷ್ಟವೆಂದರೆ ಎರಡು ವರ್ಷದ ಹಿಂದೆ ತೆಲಂಗಾಣ ಸರ್ಕಾರ ಲಾವಣ್ಯ ಅವರಿಗೆ ಉತ್ತಮ ತಹಸೀಲ್ದಾರ್​ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಲಾವಣ್ಯ ಅವರ ಪತ್ನಿ ಹೈದರಾಬಾದ್​ ಮಹಾನಗರ ಪಾಲಿಕೆಯ ಅಧೀಕ್ಷಕರಾಗಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *