900 ಶಾಲೆಯಲ್ಲಷ್ಟೇ ಆಂಗ್ಲ ಮಾಧ್ಯಮ ಏಕೆ?

ತುಮಕೂರು: ಕನ್ನಡಿಗರು ಉಳಿದರಷ್ಟೇ ಕನ್ನಡ ಉಳಿಯಲು ಸಾಧ್ಯ. ಕನ್ನಡ ಅನ್ನ ನೀಡುವ ಭಾಷೆಯಾದರೆ ಕನ್ನಡ ತಾನಾಗೆ ಉಳಿಯಲಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಸೋಮವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ, ಸುವರ್ಣ ಸಾಹಿತ್ಯ ಸಭಾಂಗಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಭಾಷೆ ಉಳಿವಿಗೆ ಕನ್ನಡ ಕಲಿಯದೆ ಇದ್ದವರಿಗೆ ಶಿಕ್ಷಣವಿಲ್ಲ ಎಂಬ ನೀತಿ ಸರ್ಕಾರ ರೂಪಿಸಬೇಕು. ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಪ್ರಾರಂಭಕ್ಕೆ ಯಾವುದೇ ಅಧ್ಯಯನ ಮಾಡದೆ ಒಪ್ಪಿಗೆ ನೀಡಿರುವುದು ಅಪಾಯಕಾರಿ ಎಂದರು.

ಆಂಗ್ಲ ಮಾಧ್ಯಮದ ಕಾರಣಕ್ಕೆ ಸರ್ಕಾರಿ ಶಾಲೆಗಳು ಉಳಿಯಲಿವೆ ಎಂದರೆ ರಾಜ್ಯದ ಎಲ್ಲ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಸಿಗಲಿ. 900 ಶಾಲೆಗಳಿಗೆ ಮಾತ್ರ ಈ ಅವಕಾಶ ಏಕೆ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ರಾಜ್ಯದ ಶೈಕ್ಷಣಿಕ ಸ್ವಾಯತ್ತತೆ ಪ್ರಾತಿನಿಧ್ಯ ಕಿತ್ತುಕೊಂಡಿದೆ. ರಾಜ್ಯದ ಶಾಲೆಗಳಲ್ಲಿ ಕೇಂದ್ರೀಯ ಪಠ್ಯ ಬೋಧಿಸಲು ಮುಂದಾಗುವ ಮೂಲಕ ಶಿಕ್ಷಣ ಸ್ವಾಯತ್ತತೆ ಆತ್ಮಹತ್ಯೆಗೆ ಸಿದ್ಧವಾಗಿದೆ. 1ರಿಂದ 10ನೇ ತರಗತಿವರೆಗೆ ಎಲ್ಲ ಮಕ್ಕಳು ಒಟ್ಟಿಗೆ ಕಲಿಯುವಂತೆ ಅವಕಾಶವಾಗಬೇಕು. ಆದರೆ, ಮುರಾರ್ಜಿ ದೇಸಾಯಿ, ರಾಣಿ ಚೆನ್ನಮ್ಮ ವಸತಿ ಶಾಲೆ ಸ್ಥಾಪನೆ ಮಾಡಿ ಮಕ್ಕಳನ್ನು ಪ್ರತ್ಯೇಕಿಸಿದೆ ಎಂದು ಟೀಕಿಸಿದರು.

ತುಮಕೂರು ವಿವಿ ಕುಲಪತಿ ವೈ.ಎಸ್.ಸಿದ್ದೇಗೌಡ ಮಾತನಾಡಿ, ಪ್ರಪಂಚದಲ್ಲಿ ಅನೇಕ ಭಾಷೆಗಳು ಅವನತಿಯೆಡೆಗೆ ತಲುಪುತ್ತಿವೆ. ಕನ್ನಡ ಭಾಷೆ ಉಳಿಯಬೇಕು. ಬದಲಾವಣೆಗೆ ಹೊಂದಿಕೊಂಡು ಭಾಷೆ ಉಳಿಸುವ ಸವಾಲು ನಮ್ಮ ಮುಂದಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಮಾತನಾಡಿ, ನನ್ನ ಮಾತೃಭಾಷೆ ತಮಿಳಿನಲ್ಲಿ ಐಎಎಸ್ ಮಾಡಿದ್ದೇನೆ. ಕರ್ನಾಟಕ ನನ್ನ ಕರ್ಮ ಭೂಮಿ. ಕನ್ನಡ ಭಾಷೆ ಇನ್ನೊಂದು ಮಾತೃಭಾಷೆಯಾಗಿದೆ. ಪ್ರಾಂತೀಯ ಭಾಷೆ ಅಭಿವೃದ್ಧಿಗೆ ನಾವು ಮಾಡಿರುವ ಕೆಲಸ ತುಂಬಾ ಕಡಿಮೆ ಎಂದು ಹೇಳಿದರು.

ಮಕ್ಕಳು ತಂದೆ ತಾಯಿ ಎನ್ನುವುದಕ್ಕಿಂತ ಮಮ್ಮಿ ಡ್ಯಾಡಿ ಎಂದರೆ ಹೆತ್ತವರಿಗೆ ಹೆಮ್ಮೆ ಜಾಸ್ತಿ. ಕನ್ನಡ ಭಾಷೆ ಮಾತನಾಡಬೇಕು. ಪ್ರಾಂತೀಯ ಭಾಷೆ ಉಳಿಸಬೇಕು. ಪಾಲಕರು ಮಕ್ಕಳಿಗೆ ಕನ್ನಡ ಭಾಷೆ ಅಭಿವೃದ್ಧಿಗೆ ಶ್ರಮಿಸುವಂತೆ ಜಾಗೃತಿ ಮೂಡಿಸಬೇಕು ಎಂದರು.

ಕಸಾಪ ಸಂಘಟನೆಗೆ ಶ್ರಮಿಸಿದ ಮಾಜಿ ಅಧ್ಯಕ್ಷರು, ಹಿರಿಯ ಸದಸ್ಯರಿಗೆ, ತಾಲೂಕು ಕಸಾಪ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಸಾಹಿತಿ ಕವಿತಾಕೃಷ್ಣ, ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿದರು. ನಿವೃತ್ತ ಶಿಕ್ಷಕಿ ಪ್ರೇಮಾ ಮಲ್ಲಣ್ಣ, ಡಿ.ರಾಜಶೇಖರ್, ಬಿ.ಮರುಳಯ್ಯ, ಕೆ.ರವಿಕುಮಾರ್, ಎಚ್.ಗೋವಿಂದಯ್ಯ ಮತ್ತಿತರರಿದ್ದರು.

ಕಸಾಪ ಆರಂಭಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಕಾರ್ಯರೂಪಕ್ಕೆ ತಂದರು. ಕನ್ನಡ ಜನರ ಜೀವನದಲ್ಲಿ ನೆಲೆಸಬೇಕು. ಕನ್ನಡ ಪರ ನೇತಾರರು, ಸರ್ಕಾರ ಕನ್ನಡವನ್ನು ಬದುಕಿನ ಭಾಷೆ ಮಾಡುವ ಕೆಲಸವನ್ನು ಎಲ್ಲ ಕಾಲದಲ್ಲಿಯೂ ಮಾಡಬೇಕು.

| ಡಾ.ಬರಗೂರು, ರಾಮಚಂದ್ರಪ್ಪ ಸಾಹಿತಿ

Leave a Reply

Your email address will not be published. Required fields are marked *