ವಿಜಯಪುರ: ಕೇವಲ 9 ತಿಂಗಳ ಪುಟಾಣಿ ಕಂದ 422 ವಸ್ತುಗಳನ್ನು ಗುರುತಿಸುವ ಮೂಲಕ ನೊಬೆಲ್ ಬುಕ್ ಆಫ್ ವರ್ಲ್ಸ್ ರೆಕಾರ್ಡ್ಸ್‌ನಿಂದ ಮೆಡಲ್ ಹಾಗೂ ಪ್ರಮಾಣಪತ್ರಕ್ಕೆ ಭಾಜನವಾಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ !
ನಗರದ ದೀಪಕ್ ಕತ್ತಿ ಮತ್ತು ಅನುಷಾ ಕತ್ತಿ ದಂಪತಿಯ ಪುತ್ರಿ ಐರಾ ಎಂಬ ಕಂದ ಸಾಧನೆಯ ಶಿಖರವೇರಿದ್ದು, ಗುಮ್ಮಟ ನಗರಿಯ ಹಿರಿಮೆಯೂ ಹೆಚ್ಚಿಸಿದೆ. ಅದ್ಭುತ ಆಲೋಚನಾ ಶಕ್ತಿ, ಅಮೋಘ ನೆನಪಿನ ಸಾಮರ್ಥ್ಯ ಹಾಗೂ ಅಗಾಧ ಗ್ರಹಿಕೆ ಮೂಲಕವೇ ಐರಾ ಎಲ್ಲರ ಗಮನ ಸೆಳೆದಿದ್ದಲ್ಲದೇ ದಾಖಲೆ ಬರೆದಿರುವುದು ಹೆಮ್ಮೆ ತರಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಸಂತಸ ಹಂಚಿಕೊಂಡ ಐರಾ ತಂದೆ ದೀಪಕ್ ಹಾಗೂ ತಾಯಿ ಅನುಷಾ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗಿದ್ದು, ಮಗುವಿನ ಪ್ರತಿಭೆ ಕಂಡು ಮೆಚ್ಚುಗೆಯನ್ನೂ ಪಡಿಸಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಐರಾ ಹುಟ್ಟಿನಿಂದ ಪ್ರತಿಯೊಂದಕ್ಕೂ ಸ್ಪಂದನೆ ನೀಡುತ್ತಿದ್ದಳು. ಈಕೆಯ ಚುರುಕು ಬುದ್ಧಿಯನ್ನು ಗಮನಿಸಿ 6 ತಿಂಗಳ ಮಗುವಾಗಿರುವಾಗಲೇ ಹಲವು ರೀತಿಯ ಕಲಿಕೆ ಶುರು ಮಾಡಲಾಯಿತು. ಮನೆಯಲ್ಲಿನ ವಸ್ತುಗಳು ಹಾಗೂ ಪಕ್ಷಿಗಳು, ಪ್ರಾಣಿಗಳನ್ನು ತೋರಿಸಿ, ಅವುಗಳ ಹೆಸರು ಹೇಳುವುದನ್ನು ಮಾಡುತ್ತಿದ್ದೆ. ಹೀಗೆ ನಾನು ಒಮ್ಮೆ ಹೇಳಿದರೆ ಸಾಕು ಅದನ್ನು ಆಕೆ ಗ್ರಹಿಸುತ್ತಿದ್ದಳು. ನಂತರದಲ್ಲಿ ಅದರ ಚಿತ್ರ ತೋರಿಸಿ, ಹೆಸರು ಹೇಳಿದ ತಕ್ಷಣವೇ ಐರಾ ಗುರುತಿಸುತ್ತಿದ್ದಳು. ಹೀಗಾಗಿ ಪ್ಲಾಶ್ ಕಾರ್ಡ್ ಮೂಲಕ ಆಕೆಯ ಕಲಿಕೆ ಮತ್ತು ಗ್ರಹಿಕೆ ಸಾಮರ್ಥ್ಯ ವೃದ್ಧಿಸಲು ಪ್ರಯತ್ನಿಸಲಾಯಿತು. ಮೂರು ತಿಂಗಳಲ್ಲಿ 422 ವಸ್ತುಗಳನ್ನು ಗುರುತಿಸುತ್ತಿದ್ದಳು ಎಂದು ತಾಯಿ ಅನುಷಾ ಹೇಳಿದರು.
ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯ ಮಾನದಂಡಗಳ ಅನುಸಾರ ಐರಾಳ ಜ್ಞಾಪಕಶಕ್ತಿಯ ವಿಡಿಯೋಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲಾಗಿತ್ತು. ಈ ಸಂಸ್ಥೆಯು 9 ತಿಂಗಳ ವಯಸ್ಸಿನಲ್ಲಿ 422 ವಸ್ತುಗಳನ್ನು ಗುರುತಿಸುವ ಕಿರಿಯ ಮಗು ಘೋಷಿಸಿ ಪ್ರಮಾಣಪತ್ರ ನೀಡಿದೆ ಎಂದು ತಿಳಿಸಿದರು.
ಐರಾಳ ಅಜ್ಜಿ ಪ್ರೇಮಾ ಕೊರವಿ ಮತ್ತಿತರರಿದ್ದರು.