18ರಂದು ವಿಟಿಯು ಘಟಿಕೋತ್ಸವ

ಬೆಳಗಾವಿ: ದೇಶದಲ್ಲಿಯೇ ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಮಾರ್ಚ್ 18 ರಂದು ಬೆ.10ಗಂಟೆಗೆ ನಡೆಯಲಿದೆ. ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದ್ದಾರೆ.

ವಿಟಿಯು ಕ್ಯಾಂಪಸ್‌ದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಬಾರಿ ಹೆಸರಾಂತ ಅಭಿಯಂತ ಹಾಗೂ ಸಾಮಾಜಿಕ ಕಾರ್ಯಕರ್ತ ಬಿ.ಗಿರೀಶ ಭಾರದ್ವಾಜ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿ ಗೌರವಿಸಲಾಗುತ್ತಿದೆ. ವಿಟಿಯು ಕುಲಾಧಿಪತಿ ರಾಜ್ಯಪಾಲ ವಾಜುಭಾಯಿ ವಾಲಾ, ವಿಟಿಯು ಸಮ ಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪಾಲ್ಗೊಳ್ಳಲಿದ್ದಾರೆ ಎಂದರು.
ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವದಲ್ಲಿ 64,881 ಬಿಇ, 819 ಬಿ.ಆರ್ಕ್, 4,425 ಎಂಬಿಎ, 1,801 ಎಂಸಿಎ, 2,859 ಎಂ.ಟೆಕ್, 28 ಎಂ.ಆರ್ಕ್, 428 ಪಿಎಚ್‌ಡಿ ಹಾಗೂ 33 ಎಂ.ಎಸ್ಸಿ ಇಂಜಿನಿಯರಿಂಗ್ ಪದವಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಡಾ.ಕರಿಸಿದ್ಧಪ್ಪ ತಿಳಿಸಿದರು. .

ದಾವಣಗೆರೆ ಕಾಲೇಜಿನ ಸುಚಿತ್ರಾ ಎನ್. ಚಿನ್ನದ ಹುಡುಗಿ: ದಾವಣಗೆರೆ ಜೈನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಬಿಇ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸುಚಿತ್ರ ಎನ್. ಎಂಟು ಚಿನ್ನದ ಪದಕ ಪಡೆದಿದ್ದಾರೆ. ದಾವಣಗೆರೆ ಬಾಪೂಜಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಬಿಇ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧುಶ್ರೀ ಎಸ್. ಆರ್.(ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ವಿಭಾಗದಲ್ಲಿ) 6 ಚಿನ್ನದ ಪದಕ ಪಡೆದಿದ್ದಾರೆ.

ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ ಪ್ರಕಾಶ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್‌ದಲ್ಲಿ 6 ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರಿನ ದಯಾನಂದ ಸಾಗರ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿ ಸುಪ್ರೀತ್ ಎಂ. ಬಿ.ಇ ಮ್ಯೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ 5 ಚಿನ್ನದ ಪದಕ ಪಡೆದಿದ್ದಾರೆ. ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಜೀವಿತಾ ಎಸ್ ಬಿಇ ಎಲೆಕ್ಟ್ರೀಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 6 ಚಿನ್ನದ ಪದಕ ಪಡೆದಿದ್ದಾರೆ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದರು.

360 ವಿದ್ಯಾರ್ಥಿಗಳಿಗೆ ರ‌್ಯಾಂಕ್

ಬಿಇ ಮತ್ತು ಬಿಟೆಕ್ ವಿವಿಧ ಶಾಖೆಗಳ ವಿದ್ಯಾರ್ಥಿಗಳಿಗೆ 200 ರ‌್ಯಾಂಕ್, ಬಿ.ಆರ್ಕ್ ವಿಭಾಗದಲ್ಲಿ 11ರ‌್ಯಾಂಕ್, ಎಂಬಿಎ ವಿಭಾಗದಲ್ಲಿ 10 ರ‌್ಯಾಂಕ್, ಎಂಸಿಎ ವಿಭಾಗದಲ್ಲಿ 10 ರ‌್ಯಾಂಕ್, ಎಂಟೆಕ್ ವಿಭಾಗದಲ್ಲಿ 127 ಹಾಗೂ ಎಂ.ಆರ್ಕ್ ವಿಭಾಗದಲ್ಲಿ 2 ಸೇರಿ 360 ಜನ ವಿದ್ಯಾರ್ಥಿಗಳಿಗೆ ರ‌್ಯಾಂಕ್ ನೀಡಲಾಗಿದೆ.

ಬಿಇ/ಬಿ.ಟೆಕ್‌ದಲ್ಲಿ ಶೇ.74.68ರಷ್ಟು ಫಲಿತಾಂಶ

ಈ ಬಾರಿ ಬಿಇ ಮತ್ತು ಬಿಟೆಕ್ ಸೇರಿ 86,875 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಈ ಪೈಕಿ 64,881 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.74.68ರಷ್ಟು ಫಲಿತಾಂಶ ಬಂದಿದೆ. ಈ ಉತ್ತೀರ್ಣರಾದ ವಿದ್ಯಾರ್ಥಿಗಳ ಪೈಕಿ 40,649 ವಿದ್ಯಾರ್ಥಿಗಳು, 24,231 ವಿದ್ಯಾರ್ಥಿನಿಯರು ಇದ್ದಾರೆ.

ದಯಾನಂದ ಸಾಗರ ಇಂಜಿನಿಯರಿಂಗ್‌ಗೆ 36 ರ‌್ಯಾಂಕ್

ಇಡೀ ರಾಜ್ಯದಲ್ಲಿ ಅತಿ ಹೆಚ್ಚು ರ‌್ಯಾಂಕ್‌ಗಳನ್ನು ಬೆಂಗಳೂರಿನ ದಯಾನಂದ ಸಾಗರ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಡೆದಿದ್ದು, 36 ರ‌್ಯಾಂಕ್‌ಗಳನ್ನು ಬಾಚಿಕೊಂಡಿದ್ದಾರೆ. ಬೆಂಗಳೂರು ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಾಜಿಗೆ 29, ಬೆಂಗಳೂರಿನ ಆರ್‌ಎನ್‌ಎಸ್ ಇನ್ಸ್‌ಟಿಟ್ಯೂಟ್‌ಗೆ-20, ಆಚಾರ್ಯ ಇನ್ಸ್‌ಟಿಟ್ಯೂಟ್‌ಗೆ -18, ಬೆಳಗಾವಿಯ ಜಿಐಟಿಗೆ- 11, ಬೆಂಗಳೂರಿನ ಎಂವಿಜೆ ಇಂಜಿನಿಯರಿಂಗ್ ಕಾಲೇಜಿಗೆ- 11, ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್‌ಗೆ -10 ಹಾಗೂ ಬೆಂಗಳೂರಿನ ಎಸ್‌ಜೆಬಿಐಟಿ ಇಂಜಿನಿಯರಿಂಗ್ ಕಾಲೇಜಿಗೆ 10 ರ‌್ಯಾಂಕ್ ಹಾಗೂ ಬೆಳಗಾವಿ ಕೆಎಲ್‌ಇ ಶೇಷಗಿರಿ ಇಂಜಿನಿಯರಿಂಗ್ ಕಾಲೇಜಿಗೆ 8 ರ‌್ಯಾಂಕ್‌ಗಳು ಬಂದಿವೆ.

ವಿಟಿಯು ವಿಭಜನೆ ಕೈಬಿಡಲಾಗಿದೆ

ವಿಟಿಯು ವಿಭಜನೆ ಯಾವುದೇ ಕಾರಣಕ್ಕೂ ಬೇಡ ಎಂದು ತಾವು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಕುಲಪತಿ ಡಾ.ಕರಿಸಿದ್ದ್ಧಪ್ಪ ಅವರು ಸ್ಪಷ್ಟಪಡಿಸಿದರು.