13 ರಂದು ಚಂದ್ರಮೌಳೇಶ್ವರ ರಥೋತ್ಸವ : ಪೂರ್ವ ಸಿದ್ಧತಾಸಭೆಯಲ್ಲಿ ಬನಶಂಕರಿ ರಘು ಮಾಹಿತಿ
ಚನ್ನರಾಯಪಟ್ಟಣ : ಪುರಾಣ ಪ್ರಸಿದ್ಧ ಚಂದ್ರಮೌಳೇಶ್ವರ ರಥೋತ್ಸವ ಹಾಗೂ 86ನೇ ದನಗಳ ಜಾತ್ರೆ ಫೆ.7 ರಂದು ಆರಂಭವಾಗುವುದರಿಂದ ಸಕಲ ಸಿದ್ಧತೆ ಮಾಡಿಕೊಡಲಾಗಿದೆ ಎಂದು ಪುರಸಭಾ ಅಧ್ಯಕ್ಷ ಬನಶಂಕರಿ ರಘು ತಿಳಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 86ನೇ ಭಾರಿ ದನಗಳ ಜಾತ್ರೆ ಹಾಗೂ ಚಂದ್ರಮೌಳೇಶ್ವರ ರಥೋತ್ಸವ ಸಿದ್ಧತೆ ಕುರಿತು ವಿವಿಧ ಸಂಘ ಸಂಸ್ಥೆಗಳ ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.
ಕಾರಣಾಂತರಗಳಿಂದ 8 ವರ್ಷಗಳಿಂದ ದನಗಳ ಜಾತ್ರೆಯನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. ರೈತ ಸಂಘದ ಮುಖಂಡರ ಸಲಹೆಯಂತೆ ಶಾಸಕರು ದನಗಳ ಜಾತ್ರೆಯನ್ನು ಈ ವರ್ಷ ಆಯೋಜಿಸಲು ತೀರ್ಮಾನಿಸಿದ್ದು, ಫೆ.7ರಂದು ಪುರಸಭೆ ಮುಂಭಾಗ 86ನೇ ಭಾರಿ ದನಗಳ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ರೈತ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ರಾಸುಗಳನ್ನು ನಿಗದಿತ ಅವಧಿಯಲ್ಲಿಯೇ ಜಾತ್ರೆಗೆ ತರುವಂತೆ ರೈತರನ್ನು ಮನವೊಲಿಸಬೇಕು. ಫೆ.13ರಂದು ಪುರಾಣ ಪ್ರಸಿದ್ಧ ಚಂದ್ರಮೌಳೇಶ್ವರ ಸ್ವಾಮಿಯ ರಥೋತ್ಸವ ಜರುಗಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಲ್ಲಿಯವರೆಗೆ ದನಗಳ ಜಾತ್ರೆ ಇರುವಂತೆ ನೋಡಿಕೊಳ್ಳಬೇಕು. ರೈತರು ಸಹ ಸಹಕಾರ ನೀಡಬೇಕು ಎಂದು ಕೋರಿದರು.
ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್ ಮಾತನಾಡಿ, ದನಗಳ ಜಾತ್ರೆಗೆ ಎಪಿಎಂಸಿ ಆವರಣದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದು ರಾಸುಗಳಿಗೆ ಕುಡಿಯುವ ನೀರು, ಮೇವು, ಸೇರಿದಂತೆ ಪಶು ಇಲಾಖೆಯನ್ನು ಸಂಪರ್ಕಿಸಿ ಪಶು ವೈದ್ಯಾಧಿಕಾರಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಚಂದ್ರಮೌಳೇಶ್ವರ ಜಾತ್ರೆ ಸಮಯದಲ್ಲಿ ಕುಡಿಯುವ ನೀರು, ನೈರ್ಮಲ್ಯ, ಪೊಲೀಸ್ ಭದ್ರತೆ ಸೇರಿದಂತೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪುರಸಭಾ ಉಪಾಧ್ಯಕ್ಷೆ ರಾಣಿಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್.ಸುರೇಶ್, ಪುರಸಭಾ ಸದಸ್ಯರಾದ ಸಿ.ಎನ್.ಮೋಹನ್, ಸುಜಾತಾ, ನಾಮನಿರ್ದೇಶನ ಸದಸ್ಯರಾದ ಉಮಾಶಂಕರ್, ರವಿ, ರೈತ ಸಂಘದ ಅಧ್ಯಕ್ಷ ಸಿ.ಜೆ.ರವಿ, ಸಪ್ತಸಾಗರ ಕಲಾನಿಕೇತನ ನೃತ್ಯ ಶಾಲೆಯ ಸುಧಾ, ಪೇಟೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ನೇತ್ರಾವತಿ, ಸ್ನೇಹ ಬಳಗದ ಅಧ್ಯಕ್ಷ ಸಿ.ಎನ್.ಅಶೋಕ್, ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಪುರಿ ಮಂಜಪ್ಪ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಭಾಗವಹಿಸಿದ್ದರು.