ವರ್ಷ ಮುಗಿಯುತ್ತಿದ್ದರೂ ವಿತರಣೆಯಾಗದ ಸೈಕಲ್

ಡಿ.ಪಿ.ಮಹೇಶ್ ಯಳಂದೂರು
ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಪ್ರತಿ ವರ್ಷ ವಿಳಂಬವಾಗುತ್ತಿದ್ದು, ಈ ಬಾರಿಯೂ ಶೈಕ್ಷಣಿಕ ವರ್ಷ ಮುಕ್ತಾಯವಾಗಲು ಮೂರು ತಿಂಗಳು ಉಳಿದಿದೆಯಾದರೂ ತಾಲೂಕಿನ ಮಕ್ಕಳಿಗೆ ಸೈಕಲ್ ಭಾಗ್ಯ ಮಾತ್ರ ಇನ್ನೂ ದೊರೆತ್ತಿಲ್ಲ.


ತಾಲೂಕಿನ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 866 ವಿದ್ಯಾರ್ಥಿಗಳಿಗೆ ಇದರಿಂದ ಸಮಸ್ಯೆಯಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ 2006-07ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳಿಗಾಗಿ ಈ ಯೋಜನೆ ಜಾರಿಗೊಳಿಸಿತ್ತು. ನಂತರ ಈ ಯೋಜನೆಯನ್ನು ಬಡ ಕುಟುಂಬದ ಗಂಡು ಮಕ್ಕಳಿಗೂ ವಿಸ್ತರಿಸಲಾಯಿತು. ಇದ್ಕಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೂ ಇದರಿಂದ ಲಾಭವಾಗಿತ್ತು. ಆದರೆ, ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳ ಕೈಗೆ ಸೇರಿಸುವಲ್ಲಿ ವಿಳಂಬ ಮಾಡುತ್ತಿರುವ ಕ್ರಮ ಸರಿಯಲ್ಲ ಎಂಬುದು ಪಾಲಕರ ವಲಯದಿಂದ ಕೇಳಿ ಬರುತ್ತಿರುವ ದೂರಾಗಿದೆ.

ತಾಲೂಕಿನಲ್ಲಿ ನಿಧಾನ: ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ ತಾಲೂಕು ಕೇಂದ್ರಗಳಲ್ಲಿ ಎಲ್ಲರಿಗೂ ಸೈಕಲ್ ವಿತರಣೆ ಕಾರ್ಯವು ಮುಗಿದಿದೆ. ಯಳಂದೂರು ತಾಲೂಕಿನಲ್ಲಿ ಮಾತ್ರ ಸೈಕಲ್ ವಿತರಣೆ ತಡವಾಗಿದೆ. ಪಟ್ಟಣದ ಜೂನಿಯರ್ ಕಾಲೇಜಿನ ಆವರಣದಲ್ಲಿ ಸೈಕಲ್ ಬಿಡಿಭಾಗಗಳ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಪಿಯುಸಿ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಒಳಗೊಂಡಿರುವ ಇಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದು, ಕಾಮಗಾರಿಯಿಂದ ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ, ತಕ್ಷಣ ಸೈಕಲ್ ಜೋಡಿಸಿ ವಿತರಿಸುವ ಕೆಲಸ ಆಗಲಿ, ಮುಂದಿನ ವರ್ಷದಿಂದ ಜೋಡಿಸುವ ಕೆಲಸವನ್ನು ಬೇರೆ ಸ್ಥಳದಲ್ಲಿ ಮಾಡಬೇಕೆಂದು ಪಾಲಕರ ಸಲಹೆಯಾಗಿದೆ.

ಅಧಿಕಾರಿಗಳು ಹಾಗೂ ಗುತ್ತಿಗೆದಾರ ಕಾರಣ: ಸರ್ಕಾರ ಬದಲಾದಂತೆ ಅನುದಾನ ಕೊರತೆ, ಟೆಂಡರ್ ತಡ ನೆಪದಲ್ಲಿ ಸೈಕಲ್ ವಿತರಣೆ ವಿಳಂಬವಾಗುತ್ತಿತ್ತು. ಇನ್ನು ಟೆಂಡರ್ ಪಡೆದ ಕಂಪನಿಗಳು ಬಿಡಿ ಭಾಗಗಳನ್ನು ತಂದು ಒಂದೆಡೆ ಜೋಡಿಸಿ, ನೀಡುವುದರೊಳಗೆ ಶೈಕ್ಷಣಿಕ ವರ್ಷ ಮುಗಿಯುತ್ತದೆ. ಹೀಗೆ ಒಂದಲ್ಲಾ ಒಂದು ಕಾರಣದಿಂದ ಸೈಕಲ್ ವಿತರಣೆಯಂತೂ ವಿಳಂಬವಾಗುತ್ತಲೇ ಇದೆ. ಆದರೆ ಇದರ ಬಗ್ಗೆ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮುಂದಿನ ವರ್ಷದಿಂದ ಸೈಕಲ್‌ಗಳನ್ನು ಆದಷ್ಟು ಬೇಗ ನೀಡುವ ವ್ಯವಸ್ಥೆ ಮಾಡಬೇಕಾಗಿದೆ.

ತಾಲೂಕಿನಲ್ಲಿ 8ನೇ ತರಗತಿಯಲ್ಲಿ 866 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ನೀಡುವ ಸೈಕಲ್‌ಗಳ ಬಿಡಿಭಾಗಗಳನ್ನು ಜೋಡಿಸುವ ಕೆಲಸ ವಿಳಂಬವಾಗಿದೆ. ಇದರಿಂದ ವಿತರಣೆ ಸ್ವಲ್ಪ ತಡವಾಗಿದೆ. ವಾರದಲ್ಲಿ ಸೈಕಲ್ ವಿತರಿಸಲು ಕ್ರಮವಹಿಸಲಾಗುವುದು.
ತಿರುಮಲಾಚಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಯಳಂದೂರು