ಬೀಳಗಿ: ಅಲ್ಪ ಅವಧಿಯಲ್ಲೇ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘ ಆಡಳಿತ ಮಂಡಳಿ, ನಿರ್ದೇಶಕರು ಹಾಗೂ ಸಿಬ್ಬಂದಿ ಕಾರ್ಯನಿಷ್ಠೆಯಿಂದ 86.21 ಲಕ್ಷ ರೂಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎನ್. ಪಾಟೀಲ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್‌ನ ಪ್ರಸಕ್ತ ಸಾಲಿನ 14ನೇ ವಾರ್ಷಿಕ ಮಹಾಸಭೆ, ಅನ್ನದಾತ ಸಹಕಾರಿ ಸಂಘದ 4ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು 161.57 ಕೋಟಿ ರೂ. ದುಡಿಯುವ ಬಂಡವಾಳ, 155.27 ಕೋಟಿ ರೂ. ಠೇವು ಹೊಂದಿದೆ. ಪ್ರಸಕ್ತ ವರ್ಷದಲ್ಲಿ ನೂತನವಾಗಿ ಇನ್ನೂ 10 ಶಾಖೆ ಆರಂಭಿಸಲಾಗುವುದು. ಜಮಖಂಡಿ, ಮುಧೋಳ, ಬನಹಟ್ಟಿ, ವಿಜಯಪುರ, ಇಳಕಲ್ಲ ಹಾಗೂ ಅಮೀನಗಡದಲ್ಲಿ ಶಾಖೆಗಳನ್ನು ಆರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಸಂಘದ ಎಲ್ಲ ಶಾಖೆಗಳು ಗಣಕೀಕೃತಗೊಂಡಿದ್ದು, ಸದಸ್ಯರು ಮತ್ತು ಗ್ರಾಹಕರ ಹಿತದೃಷ್ಠಿಯಿಂದ ಠೇವಣಿ ಬಡ್ಡಿ ದರವನ್ನು ರಾಷ್ಟ್ರೀಕೃತ ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ. ಅಲ್ಪಾವಧಿ, ಮಧ್ಯಮಾವಧಿ ಹಾಗೂ ಧೀರ್ಘಾವಧಿ ಸಾಲ ನೀಡಲಾಗಿದೆ. ಜತೆಗೆ ಉದ್ಯೋಗ ಸಾಲವನ್ನೂ ನೀಡಲಾಗಿದೆ. ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಅನ್ನದಾತ ಸಹಕಾರಿ ಸಂಘವು 4 ವರ್ಷದಲ್ಲಿ 23.55 ಲಕ್ಷ ಷೇರು ಬಂಡವಾಳ, 8.35 ಕೋಟಿ ರೂಗಳ ಠೇವು, 8.62 ಕೋಟಿ ದುಡಿಯುವ ಬಂಡವಾಳ ಹೊಂದುವ ಮೂಲಕ 6.66 ಲಕ್ಷ ರೂ ಲಾಭಗಳಿಸಿದೆ. ಈಗಾಗಲೇ 17 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 10 ಶಾಖೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈ ಭಾಗದ ಜನರ ಪ್ರೀತಿ, ವಿಶ್ವಾಸದಿಂದ ಬಾಡಗಂಡಿಯ ಎಸ್.ಆರ್.ಪಾಟೀಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಆರ್ಯುವೇದಿಕ್ ಕಾಲೇಜು, ಅಂತಾರಾಷ್ಟ್ರೀಯಮಟ್ಟದ ಶಿಕ್ಷಣ, ಅನೇಕ ಸಹಕಾರಿ ಸಂಸ್ಥೆಗಳು ಹಾಗೂ ರೈತರ ಮತ್ತು ಈ ಭಾಗದಲ್ಲಿನ ಜನರಿಗೆ ಉದ್ಯೋಗ ನೀಡಲು ಸಕ್ಕರೆ ಕಾರ್ಖಾನೆ ಆರಂಭಿಸಿದ ಎಸ್.ಆರ್. ಪಾಟೀಲರ ಕಾಳಜಿ ಅಪಾರವಾಗಿದೆ ಎಂದರು.
ಸಂಸ್ಥೆ ನಿರ್ದೇಶಕ ಬಿ.ಎನ್. ಹನಗಂಡಿ ಮಾತನಾಡಿ, 2010ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಸಂಸ್ಥೆ ಅಧ್ಯಕ್ಷ ಎಂ.ಎನ್. ಪಾಟೀಲರು ಶೈಕ್ಷಣಿಕ, ಔದ್ಯೋಗಿಕ, ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಮಾಜಿಕ ಸೇವೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಡಿ.ಪಿ. ಅಮಲಝರಿ, ದಯಾನಂದ ಪಾಟೀಲ, ಬಿ.ಪಿ.ಪಾಟೀಲ, ವೈ.ಎಂ. ಬೋರ್ಜಿ, ಸಂತೋಷ ಜಂಬಗಿ, ರವಿ ಪಾಟೀಲ, ಜಿ.ಜಿ. ದಿಕ್ಷೀತ್, ವಿಠ್ಠಲ ನಿಂಬಾಳ್ಕರ, ಲತಾ ಪಾಟೀಲ, ಕೆ.ಬಿ.ಪಾಟೀಲ, ಹಣಮಂತ ಅಂಟೀನ, ರಾಮಣ್ಣ ರಾಠೋಡ, ಶಂಕ್ರೆಪ್ಪ ಡಬರಿ, ಸಲಹೆಗಾರ ಕೆ.ಬಿ. ಕುಲಕರ್ಣಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರವೀಣ ಕಡಕೋಳ, ಪರಶುರಾಮ ಮಮದಾಪೂರ, ಎಸ್.ವಿ. ಆಗ್ನಿ ಇತರರಿದ್ದರು.
ಬಳಿಕ ಉತ್ತಮ ಗ್ರಾಹಕರು, ಠೇವುದಾರರನ್ನು ಸನ್ಮಾನಿಸಲಾಯಿತು.