ಏರೋಮೆಕ್ಸಿಕೋ ವಿಮಾನ ಟೇಕಾಫ್ ವೇಳೆ ಅವಘಡ, 85 ಜನರಿಗೆ ಗಾಯ

ಡುರಾಂಗೊ: ಉತ್ತರ ಮೆಕ್ಸಿಕೋದಲ್ಲಿ ಆಲಿಕಲ್ಲು ಸಹಿತ ಭಾರಿ ಬಿರುಗಾಳಿಯಿಂದಾಗಿ ಏರೋಮೆಕ್ಸಿಕೊ ವಿಮಾನ ಟೇಕಾಫ್‌ ಆಗುವ ವೇಳೆ ವಿಮಾನದಲ್ಲಿ ಅವಘಡ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 85 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಮ್ಬ್ರಾಯರ್ 190 ವಿಮಾನವು ಡುರಾಂಗೊದಿಂದ ಮೆಕ್ಸಿಕೋ ನಗರಕ್ಕೆ 97 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಸ್ಥಳೀಯ ಕಾಲಮಾನ ಸಂಜೆ 4 ಗಂಟೆ ಸುಮಾರಿಗೆ ವಿಮಾನ ಪತನಗೊಂಡಿದೆ ಎಂದು ಮೆಕ್ಸಿಕೋ ಸಾರಿಗೆ ಸಚಿವ ಗೆರಾರ್ಡೊ ರುಯಿಜ್ ಎಸ್ಪಾರ್ಜಾ ತಿಳಿಸಿದ್ದಾರೆ.

ವಿಮಾನವು ತುರ್ತು ಲ್ಯಾಂಡ್‌ ಆದ ಬಳಿಕ ಬೆಂಕಿ ಹೊತ್ತಿಕೊಂಡಿದ್ದರಿಂದ 85 ಜನರು ಗಾಯಗೊಂಡಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತವಾದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

https://youtu.be/2EoNAVDXoDo