ರಾಜ್ಯ ಸರ್ಕಾರ, ಕಸಾಪ ವಿರುದ್ಧ ಪ್ರತಿಭಟನೆ ದಾಖಲಿಸಿದ ಕವಿಗೋಷ್ಠಿ

ಧಾರವಾಡ: ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳ ವಿಚಾರವಾಗಿ ಸರ್ಕಾರ ನಡೆದುಕೊಂಡ ಬಗೆಗೆ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿ ಪ್ರತಿಭಟನೆಯ ವೇದಿಕೆಯಾಗಿ ಮಾರ್ಪಟ್ಟಿತು. ಬಹಿರಂಗವಾಗಿ ಸರ್ಕಾರದ ನಡೆ ಖಂಡಿಸುವ ಜತೆಗೆ ಕವಿತೆಗಳ ಮೂಲಕ ಸರ್ಕಾರಕ್ಕೆ ಕವಿಗಳು ಧಿಕ್ಕಾರ ಹೇಳಿದರು.

ಸರ್ಕಾರಿ ಶಾಲೆ, ಸರ್ಕಾರದ ಜಡತ್ವ, ಕನ್ನಡಕ್ಕೆ ಕಂಟಕ, ಸ್ತ್ರೀ ಶೋಷಣೆ, ರೈತರ ಸ್ಥಿತಿಗತಿ, ಬರಗಾಲ, ದೇವರ ಪ್ರಸಾದ ಸೇರಿದಂತೆ ಸಮಾಜದಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ವಿಷಯವನ್ನೇ ಪ್ರಧಾನವಾಗಿಟ್ಟುಕೊಂಡು 40ಕ್ಕೂ ಅಧಿಕ ಕವಿಗಳು ಕವಿತೆ ವಾಚಿಸಿದರು. ಇನ್ನೊಂದೆಡೆ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಮಹಿಳೆಯರಿಂದ ಕುಂಭ ಹೊರಿಸಿದ್ದಕ್ಕೂ ವಿರೋಧ ವ್ಯಕ್ತವಾಯಿತು. ಕವಯತ್ರಿ ದಾಕ್ಷಾಯಿಣಿ ಹುಡೇದ ಕಸಾಪ ನೀಡಿದ ಗೌರವ ಧನವನ್ನು ಗೋಷ್ಠಿ ಅಧ್ಯಕ್ಷರಿಗೆ ನೀಡಲು ಮುಂದಾದ ಪ್ರಸಂಗ ಸಹ ನಡೆಯಿತು.

ಸರ್ಕಾರಿ ಶಾಲೆಗೆ ಕೊನೆಯ ಮೊಳೆ!

ಪ್ರೇಕ್ಷಾಗೃಹ ಸಭಾಂಗಣದಲ್ಲಿ ಲೇಖಕಿ ಪ್ರೊ.ಬಿ. ಸುಕನ್ಯಾ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಮಯದ ಪರಿಮಿತಿಯಲ್ಲಿ ನಿಗದಿತ ಕವಿಗಳು ಕವಿತೆ ವಾಚಿಸುವುದು ಸವಾಲಾಗಿತ್ತು. ಹೀಗಾಗಿ ಒಬ್ಬರಿಗೆ ಒಂದು ಕವಿತೆಯನ್ನು ಮಾತ್ರ ವಾಚಿಸುವಂತೆ ಸುಕನ್ಯ ಅವರು ಸೂಚಿಸಿದರು. ಕವಿ ಕಾರನಹಳ್ಳಿ ಶ್ರೀನಿವಾಸ, ಸರ್ಕಾರಿ ಶಾಲೆಗೆ ಕೊನೆಯ ಮೊಳೆ ಹೊಡೆಯೋಣ… ಎಂಬ ಕವಿತೆ ವಾಚಿಸುವ ಮೂಲಕ ಸರ್ಕಾರದ ಆಂಗ್ಲ ಭಾಷೆ ವ್ಯಾಮೋಹವನ್ನು ಪರೋಕ್ಷವಾಗಿ ಟೀಕಿಸಿದರು. ಪ್ರೇಕ್ಷಕರು ಕವಿತೆಗೆ ಮೆಚ್ಚುಗೆ ವ್ಯಕ್ತಪಡಿಸುವ ಜತೆಗೆ ಇಂಗ್ಲಿಷ್ ಶಾಲೆ ಬೆಳಸಿ, ಕನ್ನಡ ಮಾಧ್ಯಮ ಶಾಲೆ ಮುಗಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು.

ಕವಿತೆ ಮೂಲಕ ಪ್ರತಿಭಟನೆ

ಕವಿಗಳಾದ ನಟರಾಜ್, ಅನುಪಮಾ ಪ್ರಸಾದ್ ಹಾಗೂ ಕವಯತ್ರಿ ದಾಕ್ಷಾಯಿಣಿ ಕವಿತೆ ವಾಚಿಸುವ ಮೂದಲು ಪೂರ್ಣ ಕುಂಭ ಮೆರವಣಿಗೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಮಹಿಳೆಯ ಶೋಷಣೆ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಕವಿ ಗೋವಿಂದರಾಜು ತಮ್ಮ ಜಿಲ್ಲೆ ಚಿಕ್ಕಬಳ್ಳಾಪುರದ ಬಗ್ಗೆಯೇ ಕವನ ವಾಚಿಸಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಮಾಫಿಯಾದ ಬಗ್ಗೆ ತಿಳಿಸಿದರು. ಉಳಿದಂತೆ ಕೆಲವರು ಎರಡನೇ ಕವಿತೆ ವಾಚಿಸಲು ಮುಂದಾದಾಗ ಗೋಷ್ಠಿ ಅಧ್ಯಕ್ಷರು ಹಾಗೂ ಪ್ರೇಕ್ಷಕರು ವಿರೋಧ ವ್ಯಕ್ತಪಡಿಸಿದರು.

ಸಂಘಟಕರ ಬಗ್ಗೆ ಅಸಮಧಾನ

ಗೋಷ್ಠಿಯ ಅಧ್ಯಕ್ಷೆ ಪ್ರೊ.ಬಿ. ಸುಕನ್ಯಾ ಕವಿಗೋಷ್ಠಿ ಆಯೋಜನೆ ವಿಚಾರವಾಗಿ ಸಂಘಟಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 40 ಕ್ಕೂ ಅಧಿಕ ಕವಿಗಳಿಗೆ ಅವಕಾಶ ನೀಡಿರುವುದರಿಂದ ನಾಲ್ಕು ಗಂಟೆಯಾದರೂ ಸಮಯ ನೀಡಬೇಕಾಗುತ್ತದೆ ಎಂಬ ಪರಿಜ್ಞಾನ ಸಂಘಟಕರಿಗೆ ಇರಬೇಕಾಗಿತ್ತು. ಸಮಯಜ್ಞಾನ ಇಲ್ಲದಿರುವುದರಿಂದ ಕವಿತೆ ಬಗ್ಗೆ ವಿಮರ್ಶಿಸಲು ಸಮಯಾವಕಾಶ ಇಲ್ಲದಂತಾಗಿದೆ. ಇನ್ನು ಶಿರಸಿಯಲ್ಲಿ ನಡೆದ ಗೋಷ್ಠಿಯಲ್ಲಿ ನಾನು ಕೂಡ ಸರ್ಕಾರದ ನಡೆಯನ್ನು ಧಿಕ್ಕರಿಸಿದ್ದೆ. ಕವಿಗಳಿಗೆ ಪ್ರತಿಭಟನೆ ಮಾಡುವ ಧ್ವನಿಯಿರಬೇಕು ಎಂದು ಹೇಳಿದರು.

ಕವಿಗಳಿಂದಲೇ ಕವಿತೆ ದೂರ

ಕವಿತೆ ರಂಜಕವಾಗಿರುವ ಜತೆಗೆ ವಿಚಾರ ಪ್ರಚೋದಕ ಸಹ ಹೌದು. 70ರ ದಶಕದ ನವ್ಯಕಾಲದಲ್ಲಿ ಪ್ರಾಸ, ಛಂದಸ್ಸು, ಗಣ ಹಾಗೂ ಅರ್ಥಕ್ಕೆ ಪ್ರಾಮುಖ್ಯತೆ ನೀಡದೆ ಕವಿಗಳು ಕವಿತೆ ರಚಿಸಿದರು. ಇದರಿಂದ ಕವಿತೆ ಜನರಿಂದ ದೂರವಾಯಿತು. ಇನ್ನು ಕವಿತೆಯನ್ನು ಓದುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಕೆಲವರು ಒಂದೇ ರಾಗದಲ್ಲಿ ಓದುವುದರಿಂದ ಜನರನ್ನು ಪರಿಣಾಮಕಾರಿಯಾಗಿ ತಲುಪುವುದಿಲ್ಲ ಎಂದು ಚಟುಕು ಕವಿ ಡುಂಡಿರಾಜ್ ಆಶಯ ವ್ಯಕ್ತಪಡಿಸಿದರು.