ಅಕ್ಷರ ಜಾತ್ರೆ 2019|ಕನ್ನಡ ಹಬ್ಬದ ಮೆರವಣಿಗೆಗೆ ಚಾಲನೆ

ಧಾರವಾಡ : ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ಘಟ್ಟ ಮೆರವಣಿಗೆಗೆ ಕರ್ನಾಟಕ ಮಹಾವಿದ್ಯಾಲಯ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಅದ್ಧೂರಿ ಚಾಲನೆ ದೊರೆಯಿತು.

ಕೆಸಿಡಿ ಆವರಣದ ಸಂಸ್ಥಾಪಕರಾದ ಸರ್ ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು ಹಾಗೂ ರೊದ್ದ ಶ್ರೀನಿವಾಸ ರಾಯರ ಪುತ್ಥಳಿಗಳಿಗೆ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಕಸಾಪ ಅಧ್ಯಕ್ಷ ಮನು ಬಳಿಗಾರ್​, ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ, ಶಾಸಕ ಶ್ರೀನಿವಾಸ ಮಾನೆ, ಅಮೃತ ದೇಸಾಯಿ ಮಾಲಾರ್ಪಣೆ ಮಾಡಿ ಗೌರವಿಸಿದರು.

ನಂತರ ಅಲಂಕೃತ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಸತ್ಯಭಾಮಾ ಕಂಬಾರ ದಂಪತಿಗಳು ಹಾಗೂ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಅವರನ್ನು ಗೌರವಪೂರ್ವಕವಾಗಿ ಆಸೀನರನ್ನಾಗಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ರೋಮಾಂಚನಗೊಳಿಸಿದ ಕಹಳೆಗಳ ನಾದ

ಮೆರವಣಿಗೆ ಆರಂಭವಾಗುತ್ತಿದ್ದಂತೆ ಏಕಕಾಲದಲ್ಲಿ ಮೊಳಗಿದ 25ಕ್ಕೂ ಹೆಚ್ಚು ಕಹಳೆಗಳ ನಾದ ನೆರೆದ ಸಹಸ್ರಾರು ಕನ್ನಡಿಗರ ಅಭಿಮಾನವನ್ನು ಬಡಿದೆಬ್ಬಿಸಿತು.
ಬಾನೆತ್ತರದಲ್ಲಿ ಹಾರಾಡಿದ ಕನ್ನಡ ಧ್ವಜ ಸಂಕೇತಿಸುವ ಬಲೂನುಗಳು ಚಿತ್ತಾರ ಮೂಡಿಸಿದವು. ಪೂರ್ಣ ಕುಂಭಹೊತ್ತ ಮಹಿಳೆಯರು, ಡೊಳ್ಳು, ಸೋಮನ ಕುಣಿತ, ವೀರಗಾಸೆ, ಜಗ್ಗಲಿಗೆ, ಕೋಲಾಟ, ಗೊಂಬೆ ಕುಣಿತ, ನಗಾರಿ ಮತ್ತಿತರ 60ಕ್ಕೂ ಹೆಚ್ಚು ವೈವಿಧ್ಯಮಯ ಕಲೆಗಳ ಅನಾವರಣ ವಿದ್ಯಾನಗರಿಯ ರಸ್ತೆಗಳಲ್ಲಿ ಕನ್ನಡದ ಘೋಷವನ್ನು ಸಾರಿತು.

ಮೆರವಣಿಗೆಯು ಧಾರವಾಡದ ಜ್ಯುಬಿಲಿ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಅಂಜುಮನ್ ವಿದ್ಯಾಲಯ, ರಾಣಿ ಚನ್ನಮ್ಮ ಉದ್ಯಾನದ ಬಳಿ ಸಂಚರಿಸಿ ಹೊಸ ಬಸ್ ನಿಲ್ದಾಣದ ಮಾರ್ಗವಾಗಿ ಸಮ್ಮೇಳನದ ಮುಖ್ಯ ವೇದಿಕೆ ತಲುಪಲಿದೆ.