21.7 C
Bengaluru
Tuesday, January 21, 2020

ಕನ್ನಡ ಮಾಧ್ಯಮ ಶಿಕ್ಷಣ, ತಜ್ಞರ ಸಭೆ ಶೀಘ್ರ

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಅಂಬಿಕಾತನಯದತ್ತ ವೇದಿಕೆ, ಧಾರವಾಡ: ಸರ್ಕಾರ ಏನೇ ತೀರ್ಮಾನ ಕೈಗೊಂಡರೂ ಭಾಷೆಗೆ ಧಕ್ಕೆ ತರಲು ಅವಕಾಶ ಕೊಡುವುದಿಲ್ಲ. ಕನ್ನಡ ಮಾಧ್ಯಮ ಶಿಕ್ಷಣ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಲು 5-6 ದಿನಗಳಲ್ಲಿ ಸಭೆ ಕರೆಯಲು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಕೃಷಿ ವಿವಿಯ ಅಂಬಿಕಾತನಯದತ್ತ ಪ್ರಧಾನ ವೇದಿಕೆಯಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಭಾಷಾ ತಾರತಮ್ಯ ಬಗ್ಗೆ ಲೋಪ-ದೋಷ ಸರಿಪಡಿಲು ತಯಾರಿದ್ದೇನೆ. ತಜ್ಞರಾದ ಚಂದ್ರಶೇಖರ ಕಂಬಾರ, ಚಂಪಾ ಅವರಂತಹವರು ಸಲಹೆ ನೀಡಬೇಕು ಎಂದರು. ಆದರೆ, ಸಾವಿರ ಕನ್ನಡ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ನೀಡುವ ಸರ್ಕಾರದ ನಿರ್ಣಯವನ್ನು ವಾಪಸ್ ಪಡೆಯುತ್ತೇವೆ ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ. ಇದಕ್ಕೂ ಮುನ್ನ ಮಾತನಾಡಿದ ಚಂಪಾ, ಸಾವಿರ ಕನ್ನಡ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ನೀಡುವ ಸರ್ಕಾರದ ನಿರ್ಣಯವನ್ನು ವಾಪಸ್ ಪಡೆಯುವಂತೆ ಅಗ್ರಹಿಸಿದ್ದರು. ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಮೈತ್ರಿ ಸರ್ಕಾರ 1,200 ಕೋಟಿ ರೂ. ಖರ್ಚು ಮಾಡಲಿದ್ದೇವೆ. ಈ ಕುರಿತು ಟೆಂಡರ್ ಆಗಿದ್ದು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರುತ್ತೇವೆ. ಇಂದು ಖಾಸಗಿ ಶಾಲೆಗಳು ಬೆಳೆದಿದ್ದು, ಅಟೋ ಚಾಲಕರ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಬೇಕೆಂದು ಬಯಸುತ್ತಾರೆ. ಸಮಾಜದಲ್ಲಿ ಆಗಿರುವ ಇಂತಹ ವ್ಯತ್ಯಾಸವನ್ನು ನಾವು ಗಮನಿಸಬೇಕಾಗುತ್ತದೆ ಎನ್ನುವ ಮೂಲಕ ಆಂಗ್ಲ ಮಾಧ್ಯಮಕ್ಕೆ ಮಣೆ ಹಾಕುವ ಒಲವನ್ನೇ ಸಿಎಂ ಪರೋಕ್ಷವಾಗಿ ವ್ಯಕ್ತಪಡಿಸಿದರು. ಇಂಗ್ಲಿಷ್ ಶಾಲೆಗಳನ್ನು ಖಾಸಗೀಕರಣ ಮಾಡಬೇಕು ಎಂದು ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಣಯ ಕೈಗೊಳ್ಳಲಿ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ. ಸವೋಚ್ಚ ನ್ಯಾಯಾಲಯ ಆದೇಶದಂತೆ ಖಾಸಗಿ ಶಾಲೆಗಳು ಅಧಿಕೃತ ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಯಾಗಿವೆ ಎಂದರು.

ಆರ್​ಟಿಇ ಬೋಗಸ್

ಶಿಕ್ಷಣ ಹಕ್ಕು ಕಾಯ್ದೆ (ಆರ್​ಟಿಇ) ಒಂದು ಬೋಗಸ್ ಕಾರ್ಯಕ್ರಮ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವ ಮಟ್ಟದಲ್ಲಿ ಹಣ ಲಪಟಾಯಿಸಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕುರಿತು ಇಲ್ಲಿ ಪ್ರಸ್ತಾಪ ಮಾಡುವುದಿಲ್ಲ. ಸರ್ಕಾರಿ ಶಾಲೆಗಳ 12,000 ಶಿಕ್ಷಕರಿಗೆ ಇಂಗ್ಲಿಷ್ ಜ್ಞಾನ ನೀಡಲು ತೀರ್ವನಿಸಿದ್ದೇವೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಮಟ್ಟ ಕಳಪೆ ಎಂಬುದು ದೂರವಾಗಿದೆ ಎಂದು ಸಿಎಂ ಹೇಳಿದರು.

ನಾಡಿನ ಇತಿಹಾಸ ಸ್ಮರಿಸಿದ ಬಳಿಗಾರ್

ಕನ್ನಡ ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಶ್ರೀಮಂತಿಕೆಯನ್ನು ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಆಶಯ ಭಾಷಣದಲ್ಲಿ ಸ್ಮರಿಸಿದರು. ಲಕ್ಷಾಂತರ ಜನ ಸಮ್ಮೇಳನಕ್ಕೆ ಸಾಕ್ಷಿಯಾಗಿರುವುದು ಕನ್ನಡಕ್ಕೆ ಕೆಡುಕಿಲ್ಲ ಎನ್ನುವುದನ್ನು ತೋರಿಸುತ್ತದೆ. ಅಷ್ಟೇ ಅಲ್ಲ, ಕನ್ನಡಕ್ಕೆ ಒದಗಿಬಂದ ಸಮಸ್ಯೆ ದೂರವಾಗುತ್ತದೆ ಎಂಬ ಭರವಸೆ ನೀಡಿದೆ. ಒಂದೇ ಊರಿನಲ್ಲಿ ಇಬ್ಬರು ಜ್ಞಾನಪೀಠ ಸಾಹಿತಿಗಳ ಸಮ್ಮೇಳನ ಕಸಾಪದ 104 ವರ್ಷಗಳ ಇತಿಹಾಸದಲ್ಲಿಯೇ ಪ್ರಥಮವಾಗಿದೆ. ಕನ್ನಡದ ಜ್ವಲಂತ ಸಮಸ್ಯೆ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ. 1 ಮತ್ತು 2ನೇ ಶತಮಾನದಲ್ಲಿ ಈಜಿಪ್ಟ್​ನಲ್ಲಿ ಕನ್ನಡ ಪದಗಳು ದೊರೆತಿರುವುದನ್ನು ಪಾಟೀಲ ಪುಟ್ಟಪ್ಪ ದಾಖಲಿಸಿದ್ದರು. ಅದೇ ರೀತಿ, 1ನೇ ಶತಮಾನದಿಂದ 10ನೇ ಶತಮಾನದವರೆಗೆ ಉಳಿದ ಭಾಷೆಗೆ ಕನ್ನಡ ಒತ್ತಾಸೆಯಾಗಿ ನಿಂತಿತ್ತು ಎಂದು ಪ್ರೊ.ಎಸ್.ಶೆಟ್ಟರ್ ದಾಖಲಿಸಿದ್ದಾರೆ. 4-5ನೇ ಶತಮಾನದಲ್ಲಿ ಶಿಲಾಲಿಪಿ ಬಳಸುವಷ್ಟು ಕನ್ನಡ ಪ್ರಬುದ್ಧವಾಗಿತ್ತು. ಆ ಕಾಲದಲ್ಲಿ ಇಂಗ್ಲಿಷ್ ಉನ್ನತ ಮಟ್ಟಕ್ಕೆ ಬೆಳೆದಿರಲಿಲ್ಲ. 6-7ನೇ ಶತಮಾನದಲ್ಲಿ ಕಪ್ಪೆ ಅರಭಟ್ಟನ ಶಾಸನದಲ್ಲಿ ಕನ್ನಡದ ಮಹತ್ವ ಸಾರಲಾಗಿದೆ. 8-9ನೇ ಶತಮಾನದಲ್ಲಿ ಕವಿರಾಜ ಮಾರ್ಗದಲ್ಲಿ ಸಹ ಕನ್ನಡ ಪರಂಪರೆ ಬಗ್ಗೆ ಉಲ್ಲೇಖಿಸಲಾಗಿದೆ. 10ನೇ ಶತಮಾನದಲ್ಲಿ ಪಂಪ ನಾವೆಲ್ಲರೂ ಒಂದು ಎಂದಿದ್ದ. 12ನೇ ಶತಮಾನದಲ್ಲಿ ವಚನಕಾರರು ಸಾಮಾಜಿಕ ಚಳವಳಿ ಮಾಡಿದರು. 15-16ನೇ ಶತಮಾನದಲ್ಲಿ ದಾಸರು ಕೀರ್ತನೆ ಮೂಲಕ ಜಾಗೃತಿ ಮೂಡಿಸಿದರು. ಬಳಿಕ ಜ್ಞಾನಪೀಠ ಸಾಹಿತಿಗಳು, ರಾಷ್ಟ್ರಕವಿಗಳು ಮಾನವೀಯತೆಯ ಸಂದೇಶ ಸಾರಿದ್ದರು ಎಂದು ಮನು ಬಳಿಗಾರ್ ಸ್ಮರಿಸಿದರು.

ಅದ್ದೂರಿ ಮೆರವಣಿಗೆ

ಸಮ್ಮೇಳನ ಸರ್ವಾಧ್ಯಕ್ಷರ ಅದ್ದೂರಿ ಮೆರವಣಿಗೆ ನಡೆಯಿತು. ಚಂದ್ರಶೇಖರ ಕಂಬಾರ, ಸತ್ಯಭಾಮಾ ಕಂಬಾರ ದಂಪತಿ ಹಾಗೂ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಅವರು ಪುಷ್ಪ ಹಾಗೂ ನಾಡ ಧ್ವಜಗಳಿಂದ ಅಲಂಕೃತಗೊಂಡ ಸಾರೋಟದಲ್ಲಿ ಆಸೀನರಾಗಿ ಕೆಸಿಡಿ ಕಾಲೇಜ್ ಆವರಣದಿಂದ ಜುಬಿಲಿ ವೃತ್ತ, ವಿವೇಕಾನಂದ ವೃತ್ತ, ಅಂಜುಮನ್ ವೃತ್ತ, ರಾಣಿ ಚನ್ನಮ್ಮ ಉದ್ಯಾನ, ಹೊಸ ಬಸ್ ನಿಲ್ದಾಣ ಮೂಲಕ ಹಾದು ಸಮ್ಮೇಳನ ನಡೆಯುವ ಕೃಷಿ ವಿವಿ ಅವರಣಕ್ಕೆ ಆಗಮಿಸಿತು.

ಮೊಳಗಿದ ಕಹಳೆ: 60ಕ್ಕೂ ಹೆಚ್ಚು ವೈವಿಧ್ಯಮಯ ಕಲೆಗಳು ಮೆರವಣಿಗೆಗೆ ಮೆರುಗು ನೀಡಿದವು. ಏಕಕಾಲದಲ್ಲಿ 25ಕ್ಕೂ ಹೆಚ್ಚು ಕಹಳೆ ನಾದ ಹೊರಹೊಮ್ಮಿತು. ನೆರೆದ ಕನ್ನಡಾಭಿಮಾನಿಗಳ ಕನ್ನಡ ಪರ ಘೊಷಣೆಗಳು ಮುಗಿಲುಮುಟ್ಟಿದವು. ಮಕ್ಕಳು ವಿವಿಧ ವಾದ್ಯ ಮೇಳಗಳು, ರೂಪಕಗಳು, ಕನ್ನಡ ಧ್ವಜಗಳ ಸಾಲು ಸಾಲು ನೋಡುಗರ ಕಣ್ಮನ ಸೆಳೆದವು. ಕುಂಭಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಜಗ್ಗಲಿಗಿ, ಕೋಲಾಟ, ಗೊಂಬೆ ಕುಣಿತ, ನಗಾರಿ, ಪೂಜಾ ಮತ್ತು ಪಟ, ಚಿಟ್ ಮೇಳ, ಹಲಗೆ ವಾದನ, ತೊಗಲುಗೊಂಬೆ, ಕುಸ್ತಿ ಪ್ರದರ್ಶನ, ಭಜನಾಪದಗಳು ಮೆರವಣಿಗೆ ಮೆರಗು ಹೆಚ್ಚಿಸಿದವು.

ಅಧ್ಯಕ್ಷರಿಗೆ ಸನ್ಮಾನ: ಮೆರವಣಿಗೆ ಮಹಾನಗರ ಪಾಲಿಕೆ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಪುಷ್ಪವೃಷ್ಟಿ ಮೂಲಕ ಆಧ್ಯಕ್ಷರಿಗೆ ಸ್ವಾಗತ ಕೋರಿದರು. ಅಧ್ಯಕ್ಷರು ಪತ್ನಿ ಸಮೇತ ಸಾರೋಟ್​ನಿಂದ ಕೆಳಗಿಳಿದು ಡಾ.ಪಾಟೀಲ ಪುಟ್ಟಪ್ಪ ಅವರಿಂದ ಸನ್ಮಾನ ಸ್ವೀಕರಿಸಿದರು. ಇದೇ ವೇಳೆ ಕಂಬಾರರು ಪಾಪು ಅವರಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಬಿಎಸ್​ವೈ ನೆನೆದ ಕಂಬಾರ

ತೇಜಸ್ವಿ ಮತ್ತು ನಾನು ಅಂದಿನ ಅನೇಕ ಮಂತ್ರಿಗಳನ್ನು ಭೇಟಿಯಾಗಿ ಕನ್ನಡ ತಂತ್ರಾಂಶದ ಅಗತ್ಯವನ್ನು ಹೇಳಿ, ಕೂಡಲೇ ಸರ್ಕಾರ ಗಮನ ಹರಿಸಬೇಕೆಂದು ಕೇಳಿಕೊಂಡೆವು. ಭೇಟಿ ಯಾದವರ್ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ. ಆಗ ಮುಂದೆ ಬಂದವರು ಯಡಿಯೂರಪ್ಪನವರು ಎಂದು ಅಧ್ಯಕ್ಷರು ನೆನಪಿಸಿಕೊಂಡರು. ಆಗ ಅವರು ಪೊ›.ಚಿದಾನಂದ ಗೌಡರ ನೇತೃತ್ವದಲ್ಲಿ ಒಂದು ಕಮಿಟಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಲು ಹೇಳಿದರು. ಸದರಿ ಸಮಿತಿ ತಂತ್ರಾಂಶದಲ್ಲಿ ಆಗಬೇಕಾದ ಕಾರ್ಯಕ್ರಮಗಳ ಒಂದು ಪಟ್ಟಿ ಮಾಡಿ ಅಂದಿನ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಿಗೆ ಕೊಟ್ಟರು ಎಂದರು.

ನಿಜವಾಗಿ ಈಗಿಂದೀಗ ಇಂಗ್ಲಿಷಿನಿಂದ ರಾಜ್ಯಭಾಷೆಗೆ ಮಾಧ್ಯಮ ಪಲ್ಲಟಗೊಳ್ಳು ವುದು ಶಿಕ್ಷಣದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

| ಡಾ.ಚಂದ್ರಶೇಖರ ಕಂಬಾರ, ಸಮ್ಮೇಳನಾಧ್ಯಕ್ಷ

ಸರ್ಕಾರ ಜಾಣಮರೆವು!

ಅಂಬಿಕಾತನಯದತ್ತ ವೇದಿಕೆ: ಸರ್ಕಾರಿ ಶಾಲೆ ಮುಚ್ಚುತ್ತಾ, ಖಾಸಗಿ ಶಾಲೆ ಸಂಖ್ಯೆ ಹೆಚ್ಚುತ್ತ, ಕನ್ನಡ ಅವನತಿಯಾಗುತ್ತಿರುವ ವಿಚಾರದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ್ ಕಂಬಾರ ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ. ‘ಇದ್ಯಾವುದೂ ತನ್ನ ಗಮನಕ್ಕೆ ಬಂದಿಲ್ಲವೆಂಬಂತೆ ಸರ್ಕಾರ ಜಾಣ ಮರೆವನ್ನು ಅಭಿನಯಿಸುತ್ತಿದೆ. ಮಾಧ್ಯಮದ ಎದುರಿಗೆ ಪ್ರಶ್ನಿಸಿದರೆ, ಅಕಾಡೆಮಿ ಬೇಕೇ? ಪ್ರಾಧಿಕಾರ ಬೇಕೇ? ಕಾವಲು ಸಮಿತಿ ಬೇಕೇ? ಎಂದು ಕೇಳಿ, ಕೊನೆಗೆ ತಪ್ಪಿತಸ್ಥರನ್ನು ಶಿಕ್ಷಿಸಲು ಕಿಂಚಿತ್ತೂ ಅಧಿಕಾರವಿಲ್ಲದ ಒಂದು ಸಂಸ್ಥೆ ಸ್ಥಾಪಿಸಿ ಪಾರಾಗುತ್ತಿದೆ. ಹೀಗಾದಾಗ ಕನ್ನಡದ ಬಗ್ಗೆ ಯಾವುದಾದರೂ ಆಸೆ ಉಳಿಯುವುದು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

ಎರಡು ಬಗೆವವರಿಗೆ ಎಚ್ಚರಿಕೆ: ಎರಡು ಕರ್ನಾಟಕ ಬೇಕೆನ್ನುವ ಮಹಾನುಭಾವರಿದ್ದಾರೆ. ಒಂದೇ ಜಿಲ್ಲೆಯನ್ನು ಎರಡಾಗಿ ಒಡೆಯಬೇಕೆಂಬವರೂ ಇದ್ದಾರೆ. ಅನೇಕ ಕರ್ನಾಟಕಗಳು ಒಂದಾಗುವುದಕ್ಕೇ ಏನೇನಾಯಿತೆಂದು ಕೊಂಚ ನೆನಪು ಮಾಡಿಕೊಳ್ಳೋಣ. ಕರ್ನಾಟಕವಾಗಿ 70 ವರ್ಷಗಳಾದರೂ ಒಂದು ಆಡಳಿತ ಭಾಷೆಯನ್ನು ನೂರಾರು ಸರ್ಕಾರಿ ಆಜ್ಞೆಗಳನ್ನು ಹೊರಡಿಸಿದರೂ ತರಲಾಗದೆ ಕೈಸೋತು ಕೂತಿದ್ದೇವೆ. ಸಾಲದೆ? ಬ್ರಿಟಿಷರು ಕೊಟ್ಟ ಇಂಗ್ಲಿಷನ್ನೇ ಈಗಲೂ ತಿದ್ದುತ್ತ ಕೂತಿದ್ದೇವೆಂದು ಮಾರ್ವಿುಕವಾಗಿ ಹೇಳಿದರು.

ನಾಡಿಗೆ ಅಧ್ಯಕ್ಷ ಪೀಠದ ವಿಶೇಷ ಮನವಿ: ನಮ್ಮ ಬದುಕಿಗೆ ಕನ್ನಡ ಭಾಷೆಯೊಂದೇ ಜೀವ, ಜೀವನ, ಪರಂಪರೆ ಮತ್ತು ಸಂಸ್ಕೃತಿ. ಒಂದು ಕುಟುಂಬದ ಜೀವನಕ್ಕಾಗಿ ನಿರ್ವಿುತವಾದ ಮನೆಗೆ ಗೋಡೆಗಳಿರುತ್ತವೆ. ಎರಡು ಬಾಗಿಲುಗಳೂ ಇರುತ್ತವೆ. ಗೋಡೆಗಳು ನಮ್ಮನ್ನು ಪ್ರಪಂಚದಿಂದ ಬೇರ್ಪಡಿಸುತ್ತವೆ ಮತ್ತು ಕಾಪಾಡುತ್ತವೆ. ಬಾಗಿಲುಗಳು ಹೊರಗಿನ ಪ್ರಪಂಚದೊಡನೆ ಸಂಪರ್ಕ ಸಾಧಿಸಲು ಅನುಕೂಲ ಕಲ್ಪಿಸುತ್ತವೆ. ಈಗಿನ ನಮ್ಮ ಮನೆಯ ಗೋಡೆ ಒಡೆದು ಇರುವ ಬಾಗಿಲುಗಳಿಗೆ ಇನ್ನಷ್ಟು ಬಾಗಿಲು ಹಚ್ಚಿ ಬಯಲು ಮಾಡುವುದು ಬೇಡವೆಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಕಂಬಾರರು ಮನವಿ ಮಾಡಿದ್ದು ವಿಶೇಷವಾಗಿತ್ತು.

ಸಮ್ಮೇಳನಾಧ್ಯಕ್ಷರ ಆತಂಕವೇನು?

  1. ಈಗ ಪ್ರತಿವರ್ಷ ಸಾವಿರಾರು ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಸ್ಕೂಲುಗಳು ಹಳ್ಳಿ ಹಳ್ಳಿಗಳಲ್ಲಿ ಏಳತೊಡಗಿದವು. ಇಂಥ ಸ್ಕೂಲುಗಳ ಆಡಳಿತ ಮಂಡಳಿಗಳಲ್ಲಿ ರಾಜಕಾರಣಿಗಳೇ ಇದ್ದಾರೆ! ಈ ಎಲ್ಲ ಸಂಸ್ಥೆಗಳಲ್ಲಿ ಶಿಕ್ಷಣದ ವ್ಯಾಪಾರೀಕರಣವಾಗಿ ಶಿಕ್ಷಣವೊಂದು ವ್ಯಾಪಾರವಾಗಿ ಪರಿವರ್ತನೆ ಹೊಂದಿವೆ.
  2. ನ್ಯಾಯವಾಗಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಸೌಕರ್ಯಗಳು ಹೆಚ್ಚಿ ಮಕ್ಕಳಿಗೆ ಬೆಂಚುಗಳು, ಕಂಪ್ಯೂಟರ್​ಗಳು ಬರಬೇಕಿತ್ತು. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಗೃಹಗಳಿರಬೇಕಿತ್ತು. ಅಲ್ಲಿಯ ಮಕ್ಕಳನ್ನು ನೋಡಿದರೆ ನಿರ್ಗತಿಕರ ಮಕ್ಕಳಂತೆ ಕಾಣುತ್ತಾರೆ.
  3. ಇಂಗ್ಲಿಷ್ ಪರಿಣಾಮವಾಗಿ ನಮ್ಮಲ್ಲಿದ್ದ ವಿಜ್ಞಾನಗಳೆಲ್ಲ ಗೊಡ್ಡು ಪುರಾಣಗಳಾದವು. ಆಯುರ್ವೆದದಂಥ ವಿಜ್ಞಾನ, ದೇವಸ್ಥಾನ ರಚನೆಯಂಥ ನಮ್ಮ ಇಂಜಿನಿಯರಿಂಗ್ ಕೂಡ ಗೊಡ್ಡು ಪುರಾಣಗಳಾಗಿ ವಿಶ್ವಾಸ ಕಳೆದುಕೊಂಡವು. ನೆಲ, ಹೊಲ ಕನ್ನಡವಾಗಿದ್ದರೂ ಕೃಷಿಶಾಸ್ತ್ರ ಕೂಡ ಇಂಗ್ಲಿಷ್​ನಲ್ಲಿ ರೂಪುಗೊಳ್ಳುತ್ತಿರುವ ವಿಪರ್ಯಾಸ.
  4. ನಮ್ಮ ದೇಶ ಉಳಿದ ದೇಶಗಳೊಂದಿಗೆ ಪ್ರಗತಿಪಥದಲ್ಲಿ ನಡೆಯಬೇಕಾದರೆ ಆಂಗ್ಲಭಾಷೆ ಅನಿವಾರ್ಯ ಎನ್ನುವುದು ಒಂದು ವಾದ. ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿಸಿದರೆ ಐತಿಹಾಸಿಕವಾಗಿ ನಾವು ಹಿಂದುಳಿಯಬಹುದು ಎಂಬ ಭಯವೂ ಕೆಲವರಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ವ್ಯಾಮೋಹ ನಮ್ಮನ್ನು ಏನೂ ಯೋಚಿಸದಂತೆ ಮಾಡಿದೆ.
  5. ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಹಾಗಾದಲ್ಲಿ ಯಾವುದೇ ಪ್ರಶಸ್ತಿ, ಸರ್ಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ ಚಳುವಳಿ ಇತ್ಯಾದಿಗಳು ಯಾವುವೂ ಆ ಭಾಷೆಯನ್ನು ಉಳಿಸಲಾರವು.

ಭಯಾನಕ ಸುದ್ದಿ ಇದು

2013-14ರಿಂದ 2017-18ರವರೆಗೆ ಸುಮಾರು 13 ಲಕ್ಷ ಮಕ್ಕಳು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಕಡಿಮೆ ಆಗಿ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಸುಮಾರು 15 ಲಕ್ಷ ಮಕ್ಕಳು ಹೆಚ್ಚಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಬಂದ ನಂತರ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳು ಅಧಿಕೃತವಾಗಿ ಆಂಗ್ಲ ಮಾಧ್ಯಮವಾಗಿ ಪರಿವರ್ತನೆ ಹೊಂದಿವೆ! ಸಾಲದ್ದಕ್ಕೆ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚು ಮಕ್ಕಳನ್ನು ಸರ್ಕಾರವೇ ಫೀ ಕೊಟ್ಟು ಆರ್​ಟಿಇಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದೆ. 2018-19ರ ಅವಧಿಯಲ್ಲಂತೂ ಸುಮಾರು ಮೂರುವರೆ ಲಕ್ಷ ಮಕ್ಕಳು ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಯಾದ ಭಯಾನಕ ಸುದ್ದಿ ಎಂದು ಕಂಬಾರ ತಿಳಿಸಿದರು.

ಜನಜಾತ್ರಿ!

ಒಂದೆಡೆ ನಾಡಧ್ವಜ ಹಾರಾಡುತ್ತಿದ್ದರೆ, ಮತ್ತೊಂದೆಡೆ ಕನ್ನಡಾಂಬೆಗೆ ಜೈಕಾರ ಮೊಳಗುತ್ತಿತ್ತು. ಯಾವ ದಿಕ್ಕಿಗೆ ಕಣ್ಣು ಹಾಯಿಸಿದರೂ ಜನಜಾತ್ರೆಯೇ. ಜನರು ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿರುವ ಕ್ಷಣವು ಕನ್ನಡಿಗರ ಸಾಹಿತ್ಯ ಪ್ರೇಮವನ್ನು ಸಾಕ್ಷೀಕರಿಸುವಂತಿತ್ತು. 60 ಸಾವಿರಕ್ಕಿಂತ ಅಧಿಕ ಸಂಖ್ಯೆಯಲ್ಲಿ ಬಂದ ಜನರು, ಕನ್ನಡ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದು ಖುಷಿಪಟ್ಟರು. ಸುಡು ಬಿಸಿಲಲ್ಲೂ ಉತ್ಸಾಹದಿಂದ ಜನರು ಸಮ್ಮೇಳನ ವೇದಿಕೆಯತ್ತ ಹೆಜ್ಜೆ ಹಾಕಿದರು. ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕಲಾತ್ಮಕ ರಸದೌತಣ ಸವಿದು ಖುಷಿಪಟ್ಟರು. ಧಾರವಾಡದ ನೆಲದಲ್ಲಿ ಸಂಭ್ರಮದಿಂದ ಕನ್ನಡ ತೇರನೆಳೆದರು. ಸಮ್ಮೇಳನಕ್ಕೆ ಬಂದವರಲ್ಲಿ ಯುವಜನರೇ ಅಧಿಕವಾಗಿದ್ದುದು ಕಂಡುಬಂತು. ಶಾಲಾ ಕಾಲೇಜ್​ಗಳಿಗೆ ಜಿಲ್ಲಾಡಳಿತ ರಜೆ ನೀಡಿದ್ದನ್ನು ಬಹುಪಾಲು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಕನ್ನಡ ತೇರನೆಳೆಯುವಲ್ಲಿ ಪಾಲ್ಗೊಂಡರು. ಬೆಳಗ್ಗೆಯಿಂದ ರಾತ್ರಿಯವರೆಗೂ ಸಾಗರೋಪಾದಿಯಲ್ಲಿ ಬಂದ ಜನರ ನಿಯಂತ್ರಿಸಲು ಪೊಲೀಸರು ಹೈರಾಣಾದರು.

ಭರ್ಜರಿ ಮಾರಾಟ

ಪ್ರದರ್ಶನ ಮೇಳದಲ್ಲಿ ಕರಕುಶಲ ವಸ್ತುಗಳು, ಜಾಕೆಟ್​ಗಳು, ಮಕ್ಕಳ ಆಟಿಕೆಗಳು, ಮಕ್ಕಳ ಬಟ್ಟೆಗಳು, ಮಣ್ಣಿನ ಮಡಿಕೆ ಇತ್ಯಾದಿ ವಸ್ತುಗಳು ಭರ್ಜರಿಯಾಗಿ ಮಾರಾಟಗೊಂಡವು. ಬೀದಿಬದಿ ವ್ಯಾಪಾರಸ್ಥರು ಹಾಗೂ ಗೂಡಂಗಡಿಗಳಲ್ಲೂ ಹೆಚ್ಚಿನ ವ್ಯಾಪಾರ ವಹಿವಾಟು ಕಂಡುಬಂದಿತು.

ಚಂಪಾ ಕಠೋರ ಅಪ್ಪಣೆ ಎಚ್​ಡಿಕೆ ವ್ಯಗ್ರ ಉತ್ತರ!

ಸಮ್ಮೇಳನದ ಉದ್ಘಾಟನಾ ಸಮಾರಂಭ ಸಾಹಿತಿಗಳು ಹಾಗೂ ಸರ್ಕಾರದ ಸವಾಲ್-ಜವಾಬ್ ವೇದಿಕೆಯಾಗಿ ಪರಿವರ್ತನೆಗೊಳ್ಳುವ ಮೂಲಕ ವೈಚಾರಿಕ ಸಂಘರ್ಷದ ಕುತೂಹಲಕ್ಕೆ ಕಾರಣವಾಯಿತು. ಮುಖ್ಯಮಂತ್ರಿ ಆಗಮನ ವಿಳಂಬವಾಗಿದ್ದರಿಂದ ಊಟ ಮಾಡಿಯೇ ಮುಖ್ಯ ವೇದಿಕೆ ಎದುರಿಗೆ ಬಂದು ಆಸೀನರಾಗಿದ್ದ ಸಭಿಕರಿಗೆ ಸಣ್ಣ ತೂಕಡಿಕೆ ಬರುವ ಹೊತ್ತಿಗೆ ಮಾತು ಆರಂಭಿಸಿದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪೊ›.ಚಂದ್ರಶೇಖರ ಪಾಟೀಲ, ಸಾವಿರ ಕನ್ನಡ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸುವ ಸರ್ಕಾರದ ಚಿಂತನೆಯನ್ನು ತರಾಟೆಗೆ ತೆಗೆದುಕೊಂಡರು.

ಸಾಹಿತಿಗಳು, ಚಿಂತಕರು, ಶಿಕ್ಷಣ ತಜ್ಞರು ಚರ್ಚೆ, ಅನುಸಂಧಾನ ನಡೆಸಿ ತೆಗೆದುಕೊಳ್ಳಬೇಕಾದ ನಿರ್ಣಯವನ್ನು ಸರ್ಕಾರ ಏಕಾಏಕಿ ತೆಗೆದುಕೊಳ್ಳುತ್ತಿದೆ. ಮಣ್ಣಿನ ಮಗನ ಸುಪುತ್ರ ಮುಖ್ಯಮಂತ್ರಿ ಕುಮಾರಸ್ವಾಮಿಯವರು ‘ಕಠೋರ’ಸ್ವಾಮಿಯಾಗಬಾರದು. ಹಿಂದಿನ ಸಿದ್ದರಾಮಯ್ಯ ಸರ್ಕಾರ ಕನ್ನಡ ಶಾಲೆಗಳ ಉಳಿವಿನ ನಿಟ್ಟಿನಲ್ಲಿ ಹೊಂದಿದ್ದ ನಿಲುವನ್ನು ಈಗಿನ ಸಮ್ಮಿಶ್ರ ಸರ್ಕಾರ ಪಾಲಿಸಬೇಕು. ಅದು ಮೈತ್ರಿಧರ್ಮ ಎಂದು ಚಂಪಾ ಎಂದಿನ ಶೈಲಿಯಲ್ಲೇ ಅಪ್ಪಣೆ ಕೊಡಿಸುತ್ತಿದ್ದಾಗ, ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಮುಖ ತುಸು ವ್ಯಗ್ರಗೊಂಡಿದ್ದು ಸ್ಪಷ್ಟವಾಗಿತ್ತು. ಪಕ್ಕದಲ್ಲೇ ಕುಳಿತಿದ್ದ ಚಂದ್ರಶೇಖರ ಕಂಬಾರರಿಗೆ ಸರ್ಕಾರದ ಅಭಿಪ್ರಾಯವನ್ನು ಅವರು ತಿಳಿಸತೊಡಗಿದಂತೆ ಕಂಡುಬಂತು. ಮಾತಿನ ಸರದಿ ಬಂದಾಗ ಮುಖ್ಯಮಂತ್ರಿಯವರು ಚಂಪಾಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ‘ಆಟೋ ಚಾಲಕರೂ ಅವರ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳುಹಿಸಲು ಬಯಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ’ ಎನ್ನುವ ಮೂಲಕ ಸಾಹಿತಿಗಳು ಹೇಳಿದ್ದಕ್ಕೆಲ್ಲ ಸರ್ಕಾರ ಸೊಪ್ಪು ಹಾಕಲು ಸಿದ್ಧವಿಲ್ಲ ಎನ್ನುವುದನ್ನು ಪ್ರತಿಪಾದಿಸಿದರು. ಕಂಬಾರರ ಭಾಷಣವೂ ಸರ್ಕಾರದ ಆಂಗ್ಲ ಶಿಕ್ಷಣ ಆರಂಭಿಸುವ ನಿಲುವಿಗೆ ವಿರುದ್ಧವಾಗೇ ಇತ್ತು. ಆದರೆ, ಸಿಎಂ ನಾನು ಯಾವುದಕ್ಕೂ ತಕ್ಷಣದಲ್ಲಿ ಬಾಗುವುದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು. ‘ನೀವು ನಿಮಗೆ ತೋಚಿದ್ದನ್ನು ಹೇಳಿ; ಅಂತಿಮ ನಿರ್ಣಯ ತೆಗೆದುಕೊಳ್ಳುವುದು ನಮಗೆ ಗೊತ್ತು’ ಎನ್ನುವಂತಿತ್ತು ಕುಮಾರ ನಿಲುವು!

ಸಿಎಂ ವಿಳಂಬಕ್ಕೆ ಸಮ್ಮೇಳನ ಅಸ್ತವ್ಯಸ್ತ

ಸಮ್ಮೇಳನ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿಎಂ ಕುಮಾರ ಸ್ವಾಮಿ ಸುಮಾರು 4 ತಾಸು ವಿಳಂಬವಾಗಿ ಆಗಮಿಸಿದ್ದು, ಮೊದಲದಿನದ ಕಾರ್ಯಕ್ರಮಗಳು ಅಸ್ತವ್ಯಸ್ತವಾಗಲು ಕಾರಣವಾಯಿತು. ಪ್ರವಾಸ ಪಟ್ಟಿ ಪ್ರಕಾರ ಬೆಳಗ್ಗೆ 11.30ಕ್ಕೆ ಸಿಎಂ ಆಗಮಿಸಬೇಕಿತ್ತು. ತುಮಕೂರಿನಲ್ಲಿ ಸಿದ್ಧಗಂಗಾಶ್ರೀಗಳ ಆರೋಗ್ಯ ವಿಚಾರಣೆಗೆ ಸಿಎಂ ತೆರಳಿದ ಹಿನ್ನೆಲೆಯಲ್ಲಿ ಅವರ ಆಗಮನ ವಿಳಂಬವಾಗುತ್ತದೆ ಎಂಬ ಮಾಹಿತಿ ಬಂದಾಗ ಸಂಘಟಕರು ಗೊಂದಲಕ್ಕೆ ಬಿದ್ದರು. ಸಾವಿರಾರು ಜನ ಎದ್ದು ಹೊರ ಹೋಗತೊಡಗಿದಾಗ ಕೂಡಲೇ ಊಟ ಕೊಡಿಸಲು ಆರಂಭಿಸುವುದರೊಂದಿಗೆ ವೇದಿಕೆಯಲ್ಲಿ ಕಲಾವಿದರಿಂದ ಹಾಡುಗಳನ್ನು ಶುರು ಮಾಡಿಸಿದರು. ಜನರನ್ನು ಹಿಡಿದಿಟ್ಟುಕೊಳ್ಳಲು ಸಂಘಟಕರು ಹಾಗೂ ಹಿರಿಯ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಮಧ್ಯಾಹ್ನ 2.30ಕ್ಕೆ ಸಿಎಂ ಆಗಮಿಸಿದರು. 3ಕ್ಕೆ ಆರಂಭವಾಗಬೇಕಿದ್ದ ಗೋಷ್ಠಿಗಳು 5 ಗಂಟೆ ನಂತರ ಶುರುವಾದವು. ಇದರಿಂದಾಗಿ ಹಲವರು ಗೋಷ್ಠಿಗಳತ್ತ ಸುಳಿಯಲೇ ಇಲ್ಲ. ಖಾಲಿ ಕುರ್ಚಿಗಳೆದುರು ಸಾಹಿತಿಗಳು, ಚಿಂತಕರು ವಿಚಾರ ಮಂಡಿಸುವ ದುಸ್ಥಿತಿ ಬಂತು. ಕನ್ನಡ ಕಟ್ಟುವಿಕೆ ಗೋಷ್ಠಿಯಲ್ಲಿ ಡಾ.ಎ.ವಿ.ನಾವಡ ಮಾತನಾಡಿ, ‘ನನ್ನ ಜೀವನದಲ್ಲೇ ಇಂಥ ಖಾಲಿ ಕುರ್ಚಿಗಳ ಗೋಷ್ಠಿ ನೋಡಿರಲಿಲ್ಲ. ಇದು ದುರ್ದೈವದ ಸಂಗತಿ. ಸಮ್ಮೇಳನ ಆಯೋಜಕರು ಆಳ್ವಾಸ್ ನುಡಿಸಿರಿಯನ್ನೊಮ್ಮೆ ನೋಡಿಕೊಂಡು ಬರಲಿ’ ಎನ್ನುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ತಡವಾಗಿ ಬಂದಿದ್ದಕ್ಕೆ ಸಂಸದ ಪ್ರಲ್ಹಾದ್ ಜೋಶಿ ಕೂಡ ಬೇಸರ ವ್ಯಕ್ತಪಡಿಸಿದರು.

ಬೇಸರಗೊಂಡ ಕಂಬಾರ

ಮುಖ್ಯಮಂತ್ರಿ ತಡವಾಗಿ ಬರುತ್ತಾರೆಂಬ ಕಾರಣಕ್ಕೆ ಡಾ.ಕಂಬಾರ ಅವರ ಮೆರವಣಿಗೆಯನ್ನು ನಿಧಾನ ಮಾಡ ಲಾಯಿತು. ಆದರೂ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಮೆರವಣಿಗೆ ಸಮ್ಮೇಳನ ಸ್ಥಳಕ್ಕೆ ತಲುಪಿತು. ತಡವಾಗುತ್ತಿರುವ ಬಗ್ಗೆ ಕಂಬಾರರ ಮುಖದಲ್ಲೂ ಬೇಸರ ಕಂಡುಬಂತು. ಕೂಡಲೇ ಸಂಘಟಕರು ಅವರನ್ನು ಭೋಜನಕ್ಕೆ ಕರೆದೊಯ್ದರು.

ಅನ್ನದಾಸೋಹದ ಮೇಲೆ ‘ಕಣ್ಣು’

ಅಡುಗೆ ಶುಚಿತ್ವದ ಕ್ರಮಗಳ ಅನುಸರಣೆ ಜತೆಗೆ ಸುರಕ್ಷತೆಗೂ ವಿಶೇಷ ಒತ್ತು ನೀಡಲಾಗಿದೆ. ಅದರಲ್ಲೂ 25 ಸಿಸಿ ಕ್ಯಾಮರಾಗಳ ಕಣ್ಗಾವಲು ಹಾಗೂ ಭಾರಿ ಭದ್ರತೆಯಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ವಿಷಪ್ರಾಷನ ಪ್ರಕರಣ ರಾಜ್ಯಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಪರಿಣಾಮ ಆಹಾರ ನಿರ್ವಹಣಾ ಸಮಿತಿ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಇಂಥದೊಂದು ಕಣ್ಗಾವಲು ಇದೇ ಪ್ರಥಮ ಬಾರಿ ನಡೆದಿದೆ.

ಕನ್ನಡ ಶಾಲೆಗಳ ಉಳಿವಿಗೆ ಸರ್ಕಾರ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಸಮಾನ ಶಿಕ್ಷಣ ನೀತಿ ಜಾರಿಗೆ ಮಾಡಬೇಕು. ಆಗ ಮಾತ್ರ ಸರ್ಕಾರಿ ಹಾಗೂ ಖಾಸಗಿ ಶಾಲೆ ಮಕ್ಕಳಿಗೆ ಸಮಾನ ಶಿಕ್ಷಣ ದೊರೆಯುತ್ತದೆ. ಸರ್ಕಾರಕ್ಕೇ ಇಚ್ಛಾಶಕ್ತಿ ಇರದಿರುವುದು ಸಮಸ್ಯೆಯಾಗಿದೆ.

| ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ವಿಮರ್ಶಕ

ಆಂಗ್ಲ ಮಾಧ್ಯಮ ಶಾಲೆ ತೆರೆಯುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಇಂಗ್ಲಿಷ್ ಅಗತ್ಯ ಎಂಬ ಒಂದೇ ಕಾರಣಕ್ಕೆ ಕನ್ನಡ ಶಾಲೆಗಳನ್ನು ಆಂಗ್ಲ ಮಾಧ್ಯಮವನ್ನಾಗಿ ಪರಿವರ್ತಿಸುವುದು ಸರಿಯಲ್ಲ. ಇದಕ್ಕೆ ನಮ್ಮ ವಿರೋಧವಿದೆ.

| ಕಾಳೇಗೌಡ ನಾಗವಾರ, ಸಾಹಿತಿ

ಕನ್ನಡ ಶಾಲೆ ಉಳಿವಿಗೆ ಉತ್ತರ ಹುಡುಕಾಟ

ಸಮ್ಮೇಳನದ ಪ್ರಥಮ ದಿನ ಕನ್ನಡದ ಕಹಳೆ ಮೊಳಗುವ ಜತೆಗೆ ಸಾಹಿತ್ಯಾಸಕ್ತರು ಹಾಗೂ ಸಾಹಿತಿ ಗಳ ವಲಯದಲ್ಲಿ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ವೇದಿಕೆಯ ಹೊರಗೆ ಸಹ ಬಿಸಿ ಬಿಸಿ ಚರ್ಚೆ ನಡೆಯಿತು. ಕನ್ನಡ ಶಾಲೆಗಳ ಅಳಿವು-ಉಳಿವು ವಿಷಯದ ಬಗ್ಗೆ ಸಮ್ಮೇಳನದ ಎರಡನೇ ದಿನವಾದ ಶನಿವಾರ ಪೊ›.ಜಿ.ಎಸ್.ಜಯದೇವ್ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಗೋಷ್ಠಿ ಏರ್ಪಡಿಸಿದ್ದರೂ ಶುಕ್ರವಾರವೇ ಇದರ ಕಾವು ಕಾಣಿಸಿತು.

ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯುವ ಪ್ರಸ್ತಾಪ ಸರ್ಕಾರದ ಮುಂದಿದೆ. ಇದಕ್ಕೆ ಸಾಹಿತಿಗಳ ವಿರೋಧ ಇದೆ. ಈ ಬಗ್ಗೆ ಸಿಎಂ ಜತೆ ಚರ್ಚೆ ನಡೆಸುತ್ತೇನೆ.

| ಸಿದ್ದರಾಮಯ್ಯ, ಮಾಜಿ ಸಿಎಂ (ಬಾಗಲಕೋಟೆಯಲ್ಲಿ)

ಸದ್ಯ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಿಗೆ ಸರ್ಕಾರ ಅಗತ್ಯ ಮೂಲಸೌಕರ್ಯ ಒದಗಿಸಿ ಮೇಲ್ದರ್ಜೆಗೆ ಏರಿಸಬೇಕು. ಆಂಗ್ಲ ಮಾಧ್ಯಮ ಶಾಲೆ ತೆಗೆಯುವ ನಿರ್ಧಾರವನ್ನು ಸರ್ಕಾರ ಕೈ ಬಿಡಬೇಕು. ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣ ಅತ್ಯವಶ್ಯಕ.

| ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...