ಮುಂಡರಗಿ: ಮಲೆನಾಡು ಭಾಗದ ಚಿಕ್ಕಮಗಳೂರ, ಕಳಸ ಮೊದಲಾದ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ತಾಲೂಕಿನ ಸಿಂಗಟಾಲೂರ ಬ್ಯಾರೇಜ್ನ 26 ಗೇಟ್ಗಳ ಪೈಕಿ 21 ಗೇಟ್ಗಳ ಮೂಲಕ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
ಗಾಜನೂರಿನ ತುಂಗಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಬ್ಯಾರೇಜ್ನಿಂದ ಸೆ. 5ರಂದು 36,126 ಕ್ಯೂಸೆಕ್, ಸೆ.6ರಂದು 55,126, ಸೆ.7ರಂದು 74,443, ಸೆ.8ರಂದು 70,205, ಸೆ.9ರಂದು 71,935, ಸೆ.10ರಂದ 83,731 ಕ್ಯೂಸೆಕ್ ನೀರು ಸೇರಿ ಒಟ್ಟು 390,566 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ.
ಬ್ಯಾರೇಜ್ 3.12 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಿನ್ನೀರಿನಿಂದ ಗುಮ್ಮಗೋಳ, ಬಿದರಳ್ಳಿ, ವಿಠಲಾಪುರ ಮತ್ತು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮ ಮುಳುಗಡೆ ಪ್ರದೇಶಕ್ಕೆ ಒಳಪಟ್ಟಿವೆ. ನಾಲ್ಕು ಗ್ರಾಮಗಳನ್ನು ಇದುವರೆಗೆ ಸ್ಥಳಾಂತರಿಸದ ಕಾರಣ ಬ್ಯಾರೇಜ್ನಲ್ಲಿ 1.98 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗುತ್ತಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
ಆ.10ರಿಂದ ನಾಲ್ಕೈದು ದಿನಗಳವರೆಗೆ ನದಿಗೆ ಪ್ರತಿದಿನ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬಂದ ಕಾರಣ ಹಿನ್ನೀರಿನಿಂದಾಗಿ ವಿಠಲಾಪುರ, ಬಿದರಳ್ಳಿ ಮತ್ತು ನೀರು ಹರಿಸಿದ ನಂತರ ಹಮ್ಮಿಗಿ, ಹಳೇ ಸಿಂಗಟಾಲೂರ, ಗಂಗಾಪುರ, ಕೊರ್ಲಹಳ್ಳಿ ಗ್ರಾಮದ ಕೆಲ ಮನೆಗಳಿಗೆ ಹಾನಿ ಉಂಟಾಗಿತ್ತು. ಅಲ್ಲದೆ, ಸಾವಿರಾರು ಎಕರೆಯಷ್ಟು ಭತ್ತ, ಕಬ್ಬು, ಬಾಳೆ, ಗೋವಿನಜೋಳ, ಮತ್ತಿತರರ ಬೆಳೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ಈಗ ಮತ್ತೆ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನದಿ ಭಾಗದ ಜನರಲ್ಲಿ ಆತಂಕ ಮೂಡಿದೆ.
ಸದ್ಯಕ್ಕಿಲ್ಲ ನೆರೆ ಆತಂಕ: ಸಿಂಗಟಾಲೂರ ಬ್ಯಾರೇಜ್ನಿಂದ ನಿತ್ಯವೂ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಬ್ಯಾರೇಜ್ಗೆ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬಂದರೆ ಪ್ರವಾಹ ಸಮಸ್ಯೆ ಎದುರಾಗಲಿದೆ.
ತುಂಗಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಸೆ.10ರಂದು 83,731 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಬ್ಯಾರೇಜ್ನಲ್ಲಿ 1.98 ಟಿಎಂಸಿ ನೀರು ಸಂಗ್ರಹಿಸುತ್ತಿದ್ದು, ಹರಿದು ಬರುವ ಹೆಚ್ಚುವರಿ ನೀರನ್ನು ಬ್ಯಾರೇಜ್ನ 21 ಗೇಟ್ಗಳ ಮೂಲಕ ನದಿಗೆ ಬಿಡಲಾಗುತ್ತಿದೆ.
| ಪ್ರಕಾಶ ಐ, ಸಿಂಗಟಾಲೂರ ಬ್ಯಾರೇಜ್ ಎಇಇ
ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನ 15ರಂದು
ನರಗುಂದ: ಉತ್ತರ ಕರ್ನಾಟಕ ಭಾಗದ ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವು ನೀಡಲು ನಿರ್ಲಕ್ಷಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲು ಹಾಗೂ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಹಕ್ಕೊತ್ತಾಯ ಮಂಡಿಸಲು ಸೆ.15ರಂದು ಬಾಗಲಕೋಟೆ ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕರಪ್ಪ ಅಂಬಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ರೈತ ಸಂಘ ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ, ಕರ್ನಾಟಕ ರೈತ ಸೇನೆ, ಕರವೇ, ಬರಮುಕ್ತ ಕರ್ನಾಟಕ ಆಂದೋಲನ, ಜನಾಂದೋಲನಗಳ ಮಹಾಮೈತ್ರಿ, ಸ್ವರಾಜ್ ಇಂಡಿಯಾ ಸಹಯೋಗದಲ್ಲಿ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳು ಪ್ರವಾಹಕ್ಕೆ ತುತ್ತಾಗಿವೆ. ನೂರಾರು ಗ್ರಾಮಗಳು ಜಲಾವೃತಗೊಂಡಿವೆ. ಹೀಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೊಷಿಸಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ ಶಾಶ್ವತ ವಸತಿ ಸೌಲಭ್ಯ ಕಲ್ಪಿಸಬೇಕು. ಪ್ರವಾಹಪೀಡಿತ ರೈತರು ಪಡೆದಿರುವ ಕೃಷಿ ಸಾಲ, ಬೆಳೆ ಸಾಲ ಮತ್ತು ಮಹಿಳಾ ಸ್ವ ಸಹಾಯ ಸಂಘಗಳು, ಸಣ್ಣ ಪುಟ್ಟ ವ್ಯಾಪಾರಿಗಳು ಮಾಡಿರುವ ವಿವಿಧ ಸಾಲವನ್ನು ಸರ್ಕಾರ ಸಂಪೂರ್ಣ ಮನ್ನಾ ಮಾಡಬೇಕು. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಪರಿಹಾರ ನಿಧಿಯ ನಿಯಮಗಳನ್ನು ಪುನರ್ ಪರಿಶೀಲಿಸಿ ವಾಸ್ತವಿಕ ಹಾಗೂ ವೈಜ್ಞಾನಿಕ ಮಾನದಂಡದ ಆಧಾರದ ಮೇಲೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಅಲ್ಲದೆ, ವಿವಿಧ ಬೇಡಿಕೆಗಳ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕಾರ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ, ದರ್ಶನ ಪುಟ್ಟಣ್ಣಯ್ಯ, ನುಲೇನೂರ ಶಂಕ್ರಪ್ಪ, ಎಸ್.ಆರ್. ನವಲಿ ಹಿರೇಮಠ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.