81ರ ವೃದ್ಧೆಯಿಂದ ಡೆಬಿಟ್​ ಕಾರ್ಡ್​ ಕಸಿಯಲು ಯತ್ನಿಸಿದಳು; ಅಜ್ಜಿ ಕೊಟ್ಟ ತಿರುಗೇಟಿಗೆ ಕಾರ್ಡ್​ ಬಿಟ್ಟು ಪರಾರಿಯಾದಳು!

ಲಂಡನ್​: ಆಕೆ 81ರ ವೃದ್ಧೆ. ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಂ ನಿವಾಸಿ. ಹೆಸರು ಡೊರೀನ್​ ಜೋನ್ಸ್​. ಹಣದ ಅವಶ್ಯಕತೆ ಬಂದಿದ್ದರಿಂದ ಅವರು ಎಟಿಎಂಗೆ ಹೋಗಿ ಹಣ ವಿತ್​ಡ್ರಾ ಮಾಡಲು ಮುಂದಾಗಿದ್ದರು. ಹಣ ಪಡೆದು ಹಿಂದಿರುಗಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ಬಂದ ಮಹಿಳೆ ಡೊರೀನ್​ ಅವರಿಂದ ಡೆಬಿಟ್​ ಕಾರ್ಡ್​ ಕಸಿಯಲು ಯತ್ನಿಸಿದಳು.

ನಿಶ್ಶಕ್ತಿಯಿಂದಾಗಿ ತನ್ನ ಮೇಲೆ ತಿರುಗಿಬೀಳಲು ವೃದ್ಧೆಗೆ ಸಾಧ್ಯವಾಗುವುದಿಲ್ಲ. ಕಾರ್ಡ್​ ಅನ್ನು ಸುಲಭವಾಗಿ ಕಸಿಯಬಹುದು ಎಂಬುದು ಆ ಮಹಿಳೆಯ ಅಂದಾಜಾಗಿತ್ತು. ಆದರೆ, ಅದು ಉಲ್ಟಾ ಹೊಡೆಯಿತು. ಮಹಿಳೆ ಕಾರ್ಡ್​ ಕಸಿಯಲು ಯತ್ನಿಸುತ್ತಿದ್ದಂತೆ ಸರಕ್ಕನೆ ತಿರುಗಿದ ವೃದ್ಧೆ ಮಹಿಳೆಯ ತಲೆಗೂದಲು ಹಾಗೂ ಕತ್ತನ್ನು ಗಟ್ಟಿಯಾಗಿ ಹಿಡಿದುಕೊಂಡರು.

ವೃದ್ಧೆಯ ಹಿಡಿತದ ಬಿಗಿಗೆ ಸೋತ ಮಹಿಳೆ ತಕ್ಷಣವೇ ಕಾರ್ಡ್​ ಅನ್ನು ಕಸಿಯುವ ಪ್ರಯತ್ನ ಕೈಬಿಟ್ಟು, ಪ್ರಾಣ ಉಳಿಸಿಕೊಂಡರೆ ಸಾಕು ಎಂದು ಕೊಸರಾಡಲು ಆರಂಭಿಸಿದಳು. ಒಂದು ಹಂತದಲ್ಲಿ ಅಜ್ಜಿಯ ಹಿಡಿತ ಸಡಿಲಾಗುತ್ತಿದ್ದಂತೆ ಬಿಡಿಸಿಕೊಂಡು ಎದ್ದೆನೋಬಿದ್ದೆನೋ ಎಂದು ಪರಾರಿಯಾದಳು. ಮತ್ತೆ ಹಿಂದಿರುಗಿ ಎರಡನೇ ಬಾರಿಗೆ ಕಾರ್ಡ್​ ಕಸಿಯುವ ಗೋಜಿಗೂ ಆಕೆ ಹೋಗಲಿಲ್ಲ ಎನ್ನಲಾಗಿದೆ.

ತಮ್ಮ ಹಣ ಕಸಿಯಲು ಯತ್ನಿಸಿದ ಮಹಿಳೆಯನ್ನು ಬೆದರಿಸಿ ಓಡಿಸಿದ ಬಗ್ಗೆ ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. ನಾನು ತಿರುಗಿಬೀಳುತ್ತೇನೆ ಎಂದು ಆಕೆ ನಿರೀಕ್ಷಿಸಿರಲಿಲ್ಲ. ಆದರೆ, ಕಷ್ಟಪಟ್ಟು ದುಡಿದಿರುವ ಹಣ ನಿನಗೆ ಕೊಡುವುದಿಲ್ಲ ಎಂದು ಹೇಳುತ್ತಲೇ ಗಟ್ಟಿಯಾಗಿ ಹಿಡಿದುಕೊಂಡೆ. ಆಕೆ ಕಿರುಚಲು ಆರಂಭಿಸಿದಳು. ಅವಳು ಏಕೆ ಕಿರುಚಲು ಆರಂಭಿಸಿದಳು ಎಂಬುದೇ ನನಗೆ ಅರ್ಥವಾಗಲಿಲ್ಲ. ವಾಸ್ತವವಾಗಿ ನಾನು ಹೆದರಿ ಕಿರುಚಬೇಕಿತ್ತು. ಆದರೂ ನಾನು ನನ್ನ ಹಣ ಉಳಿಸಿಕೊಂಡು, ಆಕೆಯನ್ನು ಓಡಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *