80 ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಸುಮಾರು 80 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.
ಎಚ್.ಕೆ.ಆರ್.ಡಿ.ಬಿ.ಯ 2017-18ನೇ ಸಾಲಿನ ಮ್ಯಾಕ್ರೋ ಅನುದಾನದಡಿಯಲ್ಲಿ ಮಹಾನಗರ ಪಾಲಿಕೆಯಿಂದ ಕೈಗೊಳ್ಳಲಾಗಿರುವ 7 ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.
96 ಲಕ್ಷ ರೂ. ವೆಚ್ಚದಲ್ಲಿ ನಗರದ ಮೆಕ್ಕಾ ಕಾಲನಿಯ ಎಸ್.ಬಿ.ಎಚ್. ಬ್ಯಾಂಕ್ನಿಂದ ರೆಹಮತ್ ನಗರದ ಚರಂಡಿವರೆಗೆ ಚರಂಡಿ ನಿರ್ಮಾಣ, ಒಂದು ಕೋಟಿ ರೂ. ವೆಚ್ಚದಲ್ಲಿ ನಗರದ ಮಿಲ್ಲತ್ ನಗರ, ಮಜೀದ್ ಖಾಭೆ ಖೌಸೇನ್ ಮತ್ತು ಮಜೀದೇ ಬಂದಾನವಾಜ್ ಸುತ್ತಲಿನ ಚರಂಡಿ ನಿರ್ಮಾಣ, ಒಂದು ಕೋಟಿ ರೂ. ವೆಚ್ಚದಲ್ಲಿ ನಗರದ ಗಂಜ್ ಮುಖ್ಯ ರಸ್ತೆಯಿಂದ ಕೆ.ಎಚ್.ಬಿ.ಬಡಾವಣೆಯ ಮೊಹ್ಮದ್ ಯುನುಸ್ ಕಿರಾಣಾ ಅಂಗಡಿವರೆಗೆ ರಸ್ತೆ ನಿರ್ಮಾಣ ಹಾಗೂ ಇಸ್ಲಾಮಾಬಾದ್ ಕಾಲನಿಯ ರಶೀದ್ ಭಾಯಿ ಕಿರಾಣಾ ಅಂಗಡಿಯಿಂದ ಅಲ್ಮೆರಾ ಕಾರ್ಖಾನೆವರೆಗೆ ಕೆಎಂಎಫ್ ಡೈರಿ ಹಿಂದುಗಡೆ ರಸ್ತೆ ನಿರ್ಮಾಣ ಕಾಮಗಾರಿ.
ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಗರದ ವಾರ್ಡ್​ 22ರಲ್ಲಿ ಶಹಾಬಜಾರ್ ಏರಿಯಾದ ಮಾತಾ ಮಾಣಿಕೇಶ್ವರಿ ಕಾಲನಿಯಲ್ಲಿ ಚರಂಡಿ ನಿರ್ಮಾಣ, 58 ಲಕ್ಷ ರೂ.ವೆಚ್ಚದಲ್ಲಿ ನಗರದ ಮೊಹಮ್ಮದ್ ಮನೆಯಿಂದ ನೂರಾನಿ ಚೌಕ್ ವರೆಗೆ ರಸ್ತೆ ನಿರ್ಮಾಣ, ಸುಮಾರು 98 ಲಕ್ಷ ರೂ. ವೆಚ್ಚದಲ್ಲಿ ನಗರದ ಸಲೀಂ ನದಾಫ್ ಮನೆಯಿಂದ ಕೆ.ಎನ್. ಸೈಯದ ಮನೆ ಮತ್ತು ಅರ್ಜು ಹಿಲ್ ಮನೆ ಮದಿನಾ ಕಾಲನಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಸಚಿವರು, ಹೈಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಭಾಗದ ಅಭಿವೃದ್ಧಿಗೆ ಪ್ರತಿ ವರ್ಷ 1500 ಕೋಟಿ ರೂ.ಗಳ ಅನುದಾನ ದೊರೆಯುತ್ತಿದೆ. ಸಾರ್ವಜನಿಕರ ಆಶಯಗಳಿಗೆ ಬದ್ಧರಾಗಿ ಹಾಗೂ ಅಭಿವೃದ್ಧಿಗಾಗಿ ಸದಾ ಕೆಲಸ ನಿರ್ವಹಿಸುವುದಾಗಿ ಹೇಳಿದರು.
ಶಾಸಕಿ ಕನ್ನೀಜ್ ಫಾತಿಮಾ, ಮಹಾಪೌರ ಮಲ್ಲಮ್ಮ ವಳಕೇರಿ, ಉಪ ಮಹಾಪೌರ ಅಲಿಯಾ ಶಿರೀನ್, ಆಯುಕ್ತ ಪೆದ್ದಪ್ಪಯ್ಯ, ಫರಾಜ ಹಾಗೂ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.