ಕೊಚ್ಚಿ: ಚೀನಾದ ಕೊರೊನಾ ವೈರಸ್ ಭೀತಿ ಕೇರಳದಲ್ಲಿ ವ್ಯಾಪಕವಾಗಿದೆ.
ಯುವಕನೋರ್ವನಿಗೆ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆತನನ್ನು ಕೊಚ್ಚಿಯ ವ್ಯದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಅದಲ್ಲದೆ ಇತ್ತೀಚೆಗಷ್ಟೇ ಚೀನಾದಿಂದ ಕೇರಳಕ್ಕೆ ವಾಪಸಾಗಿರುವ ರಾಜ್ಯದ 80 ಜನರ ಮೇಲೆ ನಿಗಾ ಇಡಲಾಗಿದೆ. ಅವರ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನಹರಿಸಲಾಗಿದೆ. ಚೀನಾದಲ್ಲಿ ಕೊರೊನಾ ವೈರಸ್ ಸಿಕ್ಕಾಪಟೆ ಹರಡಿದ್ದು ಈಗಾಗಲೇ 26 ಮಂದಿಯನ್ನು ಬಲಿಪಡೆದಿದೆ. ಅಲ್ಲಿ 800ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಹಾಗಾಗಿ ಅಲ್ಲಿಂದ ರಾಜ್ಯಕ್ಕೆ ಮರಳಿದ 80 ಜನರ ಮೇಲೆ ನಿಗಾ ಇಡಲಾಗಿದೆ ಎಂದು ಕೊಚ್ಚಿ, ತಿರುವನಂತಪುರ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
80 ಜನರಲ್ಲಿ ಏಳು ಮಂದಿಗೆ ಸಣ್ಣಪ್ರಮಾಣದ ಜ್ವರ, ಕೆಮ್ಮು ಪ್ರಾರಂಭವಾಗಿದೆ. ಅವರಿಗೆ ರಾಜ್ಯದ ಬೇರೆಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 73 ಮಂದಿಯ ಆರೋಗ್ಯದ ಬಗ್ಗೆಯೂ ಗಮನಹರಿಸಲಾಗುತ್ತಿದೆ ಎಂದಿದ್ದಾರೆ.
24 ಮಂದಿ ಚೀನಾದಿಂದ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದು ಇಳಿದಾಗ ಅವರನ್ನೆಲ್ಲ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಿ ಕೊರೊನಾ ವೈರಸ್ ತಗುಲಿದೆಯಾ ಎಂದು ಪರಿಶೀಲನೆ ನಡೆಸಲಾಗಿತ್ತು. ಆದರೆ ಯಾವುದೇ ಶಂಕಿತ ವರದಿಯೂ ಬಂದಿರಲಿಲ್ಲ ಎನ್ನಲಾಗಿದೆ.(ಏಜೆನ್ಸೀಸ್)
ಕೇರಳಕ್ಕೂ ಕಾಲಿಟ್ಟಿತಾ ಡೆಡ್ಲಿ ಕೊರೊನಾ ವೈರಸ್? ಯುವಕನೋರ್ವನಿಗೆ ಸೋಂಕು ತಗುಲಿರುವ ಶಂಕೆ, ಕೊಚ್ಚಿ ಆಸ್ಪತ್ರೆಗೆ ದಾಖಲು