ನವದೆಹಲಿ: ದೇಶದಲ್ಲಿ ಪ್ರತಿದಿನ ಸರಾಸರಿ 80 ಕೊಲೆ, 289 ಅಪಹರಣ ಮತ್ತು 91 ಅತ್ಯಾಚಾರಗಳು ನಡೆಯುತ್ತಿವೆ. 2017ಕ್ಕೆ ಹೋಲಿಸಿದರೆ 2018ರಲ್ಲಿ ಅಪರಾಧಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದಲ್ಲಿ (ಎನ್ಸಿಆರ್ಬಿ) ದಾಖಲಾಗಿರುವ ಅಂಕಿಅಂಶಗಳು ಬೆಚ್ಚಿ ಬೀಳಿಸುವ ರೀತಿಯಲ್ಲಿವೆ.
2018ರಲ್ಲಿ ಒಟ್ಟು 50,74,634 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 31,32,954 ಭಾರತೀಯ ದಂಡ ಸಂಹಿತೆ ಅನ್ವಯವಾಗುವ ಪ್ರಕರಣಗಳು ಹಾಗು 19,41,680 ಕೇಸ್ಗಳು ವಿಶೇಷ ಮತ್ತು ಸ್ಥಳೀಯ ಕಾನೂನುಗಳು (ಎಸ್ಎಲ್ಎಲ್) ಅನ್ವಯವಾಗುವಂಥದ್ದು. 2017ರಲ್ಲಿ ದಾಖಲಾದ ಒಟ್ಟು ಅಪರಾಧಗಳ ಸಂಖ್ಯೆ 50,07,044. 2018ರಲ್ಲಿ ಒಟ್ಟು 29,017 ಕೊಲೆ ಕೇಸ್ಗಳು ದಾಖಲಾಗಿದ್ದು 2017ಕ್ಕಿಂತ ಶೇ. 1.3% ಆಗಿದೆ.
ಆ ವರ್ಷದ ಕೊಲೆ ಪ್ರಕರಣ ಸಂಖ್ಯೆ 28,653. ವಿವಿಧ ವ್ಯಾಜ್ಯಗಳೇ ಕೊಲೆಗಳ ಹಿಂದಿನ ಕಾರಣ. ವೈಯಕ್ತಿಕ ದ್ವೇಷಕ್ಕಾಗಿ 3875 ಮಂದಿಯ ಕೊಲೆ ನಡೆದಿದ್ದು ‘ಲಾಭಕ್ಕಾಗಿ’ ನಡೆದ ಕೊಲೆಗಳು 2995. 2018ರಲ್ಲಿ ಅಪಹರಣ ಪ್ರಕರಣಗಳಲ್ಲಿ ಶೇ. 10.3 ಹೆಚ್ಚಳ ಕಂಡುಬಂದಿದೆ. 2018ರಲ್ಲಿ ಅಪಹರಣಗಳಿಗೆ ಸಂಬಂಧಿಸಿ 1,05,734 ಎಫ್ಐಆರ್ಗಳು ದಾಖಲಾಗಿದ್ದವು. 2017ರಲ್ಲಿ 95,893 ಎಫ್ಐಆರ್ಗಳು ದಾಖಲಾಗಿದ್ದವು.
ಮಹಿಳಾ ದೌರ್ಜನ್ಯ: ಮಹಿಳಾ ದೌರ್ಜನ್ಯ ವಿಭಾಗದಲ್ಲಿ 2018ರಲ್ಲಿ 3,78,277 ಮೊಕದ್ದಮೆಗಳು ದಾಖಲಾಗಿವೆ. 2017ರಲ್ಲಿ 3,59,849 ಮತ್ತು 2016ರಲ್ಲಿ 3,38,954 ಪ್ರಕರಣಗಳು ದಾಖಲಾಗಿದ್ದವು. ಐಪಿಸಿಯ ಸೆಕ್ಷನ್ 376 ವ್ಯಾಖ್ಯಾನಿಸಿರುವ ಪ್ರಕಾರ, 2018ರಲ್ಲಿ 33,356 ಅತ್ಯಾಚಾರ ನಡೆದಿವೆ. ಇದು 2017ಕ್ಕಿಂತ ಹೆಚ್ಚು. ಆ ವರ್ಷ 32,559 ಅತ್ಯಾಚಾರ ಹಾಗೂ 2016ರಲ್ಲಿ 38,947 ರೇಪ್ ನಡೆದಿದ್ದವು.
ಮಹಿಳೆಯರ ಅಪಹರಣವೇ ಹೆಚ್ಚು
2018ರಲ್ಲಿ ದಾಖಲಾದ ಒಟ್ಟು ಅಪಹರಣ ಪ್ರಕರಣ 1,05,536. ಆ ಪೈಕಿ 24,665 ಪುರುಷ ಹಾಗೂ 80,871 ಮಹಿಳಾ ಸಂತ್ರಸ್ತರಿದ್ದಾರೆ. ಪುರುಷ ವಿಭಾಗದಲ್ಲಿ ಬಾಲಕರು, ಮಹಿಳಾ ವಿಭಾಗದಲ್ಲಿ ಬಾಲಕಿಯರು ಒಳಗೊಂಡಿದ್ದಾರೆ. ಅಪಹೃತರ ಪೈಕಿ 92,137 ಜನರು ಪತ್ತೆಯಾಗಿದ್ದಾರೆ ಎಂದು 2018ರ ಅಂಕಿ-ಅಂಶ ತಿಳಿಸಿದೆ. ಆ ಪೈಕಿ 91,709 ಜೀವಂತವಾಗಿ ಹಾಗೂ 428 ಮಂದಿ ಶವವಾಗಿ ಪತ್ತೆಯಾಗಿದ್ದಾರೆ.
ಸಂಖ್ಯೆ ಏರಿಕೆ, ಪ್ರಮಾಣ ಇಳಿಕೆ
2017ಕ್ಕೆ ಹೋಲಿಸಿದರೆ 2018ರಲ್ಲಿ ಅಪರಾಧಗಳ ಸಂಖ್ಯೆ ಏರಿಕೆಯಾಗಿದ್ದರೂ ತಲಾ ಲಕ್ಷ ಜನಸಂಖ್ಯೆಗೆ ಅಪರಾಧ ಪ್ರಮಾಣ ಇಳಿಮುಖವಾಗಿದೆ ಎಂಬುದು ಎನ್ಸಿಆರ್ಬಿ ಅಂಕಿಅಂಶಗಳಿಂದ ಗೊತ್ತಾಗುತ್ತದೆ. 2017ರಲ್ಲಿ 50,07,044 ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2018ರಲ್ಲಿ ಅದು ಶೇ. 1.3 ಹೆಚ್ಚಿದೆ. ಅಪರಾಧ ಪ್ರಮಾಣ ದರ (ಕ್ರೖೆಮ್ ರೇಟ್) 2017ರಲ್ಲಿ ತಲಾ ಲಕ್ಷಕ್ಕೆ 388.6 ಇದ್ದದ್ದು 2018ರಲ್ಲಿ 383.5ಕ್ಕೆ ಇಳಿದಿದೆ.
ಏನಿದು ಎನ್ಸಿಆರ್ಬಿ?
ಕೇಂದ್ರ ಗೃಹ ಖಾತೆಯಡಿ ಎನ್ಸಿಆರ್ಬಿ ಕಾರ್ಯ ನಿರ್ವಹಿಸುತ್ತದೆ. ಭಾರತೀಯ ದಂಡ ಸಂಹಿತೆ ಮತ್ತು ವಿಶೇಷ ಹಾಗೂ ಸ್ಥಳೀಯ ಕಾನೂನುಗಳ ವ್ಯಾಖ್ಯಾನದನ್ವಯ ಬರುವಂಥ ಅಪರಾಧಗಳ ಅಂಕಿ-ಸಂಖ್ಯೆಗಳನ್ನು ಸಂಗ್ರಹಿಸಿ ವಿಶ್ಲೇಷಿಸುವುದು ಇದರ ಕೆಲಸ.