80ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ

ಹಾನಗಲ್ಲ: ತಾಲೂಕಿನಲ್ಲಿರುವ 152 ಗ್ರಾಮಗಳಲ್ಲಿ 80ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ತಾಲೂಕು ಆಡಳಿತ ಬರಗಾಲ ನಿರ್ವಹಣೆ ಅನುದಾನದಲ್ಲಿ ಕೊಳವೆ ಬಾವಿ ಕೊರೆಸಬೇಕು, ಇಲ್ಲವೇ ರೈತರಿಂದ ಬಾಡಿಗೆ ಆಧಾರದಲ್ಲಿ ಪಡೆದು ಜನರಿಗೆ ನೀರು ಪೂರೈಸಬೇಕು ಎಂದು ಶಾಸಕ ಸಿ.ಎಂ. ಉದಾಸಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿನ ಶಾಸಕರ ಕಚೇರಿಯಲ್ಲಿ ಸೋಮವಾರ ಕಂದಾಯ, ಜಿಪಂ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಕುರಿತು ರ್ಚಚಿಸಿದರು.

ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿನ ಅಂತರ್ಜಲ ಕುಸಿತವಾಗಿದೆ. ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಪೂರೈಕೆ ಮಾಡಲಾಗುತ್ತಿಲ್ಲ. ಹೀಗಾಗಿ ಬೇರೆ ಬೇರೆ ಕೊಳವೆ ಬಾವಿಗಳಿಂದಲೂ ಪೈಪ್​ಲೈನ್ ಅಳವಡಿಸಿ ನೀರು ಪೂರೈಸಬೇಕು ಎಂದರು.

ತಾಲೂಕಿನಲ್ಲಿ 123 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳ ನಿರ್ವಹಣೆಯದ್ದೇ ಸಮಸ್ಯೆಯಾಗುತ್ತಿದೆ. ಕೆಲವೆಡೆ ಕಾಯಿನ್ ಬಾಕ್ಸ್ ಸಮಸ್ಯೆ, ಇನ್ನು ಕೆಲವೆಡೆ ಯಂತ್ರಗಳ ತಾಂತ್ರಿಕ ದೋಷ ಕಂಡುಬಂದಿವೆ. ಕೆಲವು ಘಟಕಗಳಲ್ಲಿ ನೀರು ಶುದ್ಧೀಕರಣ ಯಂತ್ರಗಳ (ಮೆಮರೇನ್) ಅವಧಿ ಮುಗಿದಿರುವುದರಿಂದ ಅವು ಕಾರ್ಯನಿರ್ವಹಿಸುತ್ತಿಲ್ಲ. ಅವುಗಳ ಬದಲಾವಣೆಗೆ ಸುಮಾರು 60 ಸಾವಿರ ರೂ. ಅನುದಾನದ ಅಗತ್ಯವಿದ್ದು, ಜಿಪಂ ಅನುದಾನ ಅಥವಾ ಬರಗಾಲ ನಿರ್ವಹಣೆ ಅನುದಾನ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಹಕಾರ ಇಲಾಖೆ, ಕೆಆರ್​ಐಡಿಎಲ್ ಹಾಗೂ ಜಿಪಂ ಉಪವಿಭಾಗದಿಂದ ನಿರ್ವಿುಸಲಾಗಿದ್ದು, ಅವುಗಳಲ್ಲಿ ತಾಲೂಕಿನ ಶೀಗಿಹಳ್ಳಿ, ದಶರಥಕೊಪ್ಪ, ಶಿರಗೋಡ, ಬಾಳೂರು, ರಾಮತೀರ್ಥಹೊಸಕೊಪ್ಪ, ಅಕ್ಕಿವಳ್ಳಿ, ಮಾಸನಕಟ್ಟಿ ಸೇರಿ ಸುಮಾರು 20 ಗ್ರಾಮಗಳಲ್ಲಿನ ಘಟಕಗಳು ಸ್ಥಗಿತಗೊಂಡಿವೆ. ಎಲ್ಲ ಇಲಾಖೆಗಳು ಗುತ್ತಿಗೆದಾರರಿಗೆ ಸೂಚನೆ ನೀಡಿ ತಕ್ಷಣ ದುರಸ್ತಿಗೊಳಿಸಬೇಕು. ಬೇಸಿಗೆ ಅವಧಿಯಲ್ಲಿ ಸಮಸ್ಯೆ ಎದುರಾಗದಂತೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಸಮ್ಮಸಗಿ ಹಾಗೂ ಸೋಮಸಾಗರ ಗ್ರಾಮಗಳ ನೀರಿನ ಘಟಕದ ತಾಂತ್ರಿಕ ಸಮಸ್ಯೆಯಿಂದ ಕುಡಿಯುವ ನೀರು ವಾಸನೆ ಬರುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಬ್ಯಾಗವಾದಿ ಗ್ರಾಮದ ಜನತೆ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ನಿರಾಕರಿಸುತ್ತಿದ್ದಾರೆ. ಅವರಿಗೆ ಉಚಿತವಾಗಿ ನೀರು ಕೊಟ್ಟು ಜನ ಜಾಗೃತಿ ಮೂಡಿಸಿ ಎಂದು ಶಾಸಕ ಉದಾಸಿ ತಿಳಿಸಿದರು.

17 ಘಟಕ ಮಂಜೂರು: ತಾಲೂಕಿಗೆ ಮತ್ತೆ ತಲಾ 5 ಲಕ್ಷ ರೂ. ವೆಚ್ಚದ 17 ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿವೆ. ತಾಲೂಕಿನ ಬ್ಯಾರೇಜ್​ಗಳಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹಣೆ ಮಾಡಿಟ್ಟುಕೊಂಡಿರುವುದರಿಂದ ಗ್ರಾಮೀಣ ಪ್ರದೇಶದ ಕೊಳವೆ ಬಾವಿಗಳು ಇನ್ನೂ ನೀರು ನೀಡುತ್ತಿವೆ. ಬೇರೆ ತಾಲೂಕುಗಳಷ್ಟು ಸಮಸ್ಯೆ ಉದ್ಭವಿಸಿಲ್ಲ. ಆದಾಗ್ಯೂ ತಾಲೂಕಿನ ಸೋಮಸಾಗರ, ಗೊಂದಿ, ಬ್ಯಾತನಾಳ, ಸಮ್ಮಸಗಿ, ಡೊಮ್ಮನಾಳ ಸೇರಿ 5 ಗ್ರಾಮಗಳಲ್ಲಿ ರೈತರ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲಾಗಿದೆ ಎಂದು ಶಾಸಕ ಉದಾಸಿ ವಿವರಿಸಿದರು.

ಬರಗಾಲದ ನಿರ್ವಹಣೆಗಾಗಿ ಜನವರಿಯಿಂದ ಇಲ್ಲಿಯವರೆಗೆ 120ಕ್ಕಿಂತ ಹೆಚ್ಚು ಕೊಳವೆ ಬಾವಿ ಕೊರೆಸಲಾಗಿದೆ ಎಂದು ಜಿಪಂ ಇಂಜಿನಿಯರ್ ಆರ್.ಎಂ. ಸೊಪ್ಪಿಮಠ ಶಾಸಕರ ಗಮನಕ್ಕೆ ತಂದರು.

ತಹಸೀಲ್ದಾರ್ ಎಂ. ಗಂಗಪ್ಪ, ತಾಪಂ ಇಒ ಚನಬಸಪ್ಪ ಹಾವಣಗಿ, ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಸುಣಗಾರ, ಕೆಆರ್​ಐಡಿಎಲ್ ಸಂಸ್ಥೆಯ ಅಧಿಕಾರಿ ಸತೀಶ, ಗುತ್ತಿಗೆದಾರರಾದ ವೀರೇಶ ಬಣಕಾರ, ನಿಸಾರ ಪಾನವಾಲೆ ಉಪಸ್ಥಿತರಿದ್ದರು.