ವಿಶಾಖಪಟ್ಟಣದಲ್ಲಿ ಕಾರಿನೊಳಗೆ ಆಟವಾಡುತ್ತಿದ್ದ ಬಾಲಕ ಉಸಿರುಗಟ್ಟಿ ಸಾವು

ವಿಶಾಖಪಟ್ಟಣಂ: ಇಲ್ಲಿನ ಸಿಂದಿಯಾದಲ್ಲಿರುವ ನೌಕಾಪಡೆಯ ವಸತಿನಿಲಯದಲ್ಲಿ 8 ವರ್ಷದ ಬಾಲಕನೊಬ್ಬ ಕಾರಿನೊಳಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ಬಂಗಾರು ಪ್ರೇಮ್​ಕುಮಾರ್​ ಮೃತ. ಬಾಲಕನ ತಂದೆ ಬಂಗಾರು ವಿನೋದ್​ ಕುಮಾರ್​ ಎಂಬುವವರು ಲೆಫ್ಟಿನೆಂಟ್​ ಕಮಾಂಡರ್​ ಅವರ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಲೆಫ್ಟಿನೆಂಟ್​ ಕಮಾಂಡರ್​ ಅವರ ಕಾರನ್ನು ಸ್ವಚ್ಛಗೊಳಿಸುವಾಗ ಆತನ ಎಂಟು ವರ್ಷದ ಮಗ ಕಾರಿನ ಹಿಂಬದಿ ಸೀಟಿನಲ್ಲಿ ಆಟವಾಡುತ್ತ ಕುಳಿತಿದ್ದಾನೆ. ಸ್ವಚ್ಛಗೊಳಿಸಿದ ಬಳಿಕ ಮಗನನ್ನು ಗಮನಿಸದ ತಂದೆ ಕಾರ್​ಲಾಕ್ ಮಾಡಿ ತೆರಳಿದ್ದಾರೆ. ಕಾರಿನ ಕಿಟಕಿಗಳು ಹಾಕಿದ್ದರಿಂದ ಬಾಲಕನಿಗೆ ಹೊರಬರಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಕೆಲವು ಸಮಯದ ಬಳಿಕ ಬಾಲಕ ಕಾಣಿಸದೆ ಇದ್ದುದ್ದರಿಂದ ಆತನನ್ನು ಪಾಲಕರು ಹುಡುಕಲು ಆರಂಭಿಸಿದ್ದು, ಮಗು ಕಾರಿನೊಳಗಿರುವುದು ಕಂಡುಬಂದಿದೆ. ಕೂಡಲೇ ಪ್ರಜ್ಞೆಯಿಲ್ಲದ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಆ ವೇಳೆಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಾಲಕನ ಸಾವಿನಿಂದಾಗಿ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *