8 ವರ್ಷದ ಬಾಲಕಿ ಮೇಲೆ ಸಹಪಾಠಿಯಿಂದಲೇ ಅತ್ಯಾಚಾರ!

ಭೋಪಾಲ್‌: ಎಂಟು ವರ್ಷದ ಬಾಲಕಿಯು ತನ್ನ ಸಹಪಾಠಿ ಬಾಲಕನಿಂದಲೇ ಅತ್ಯಾಚಾರಕ್ಕೊಳಗಾಗಿರುವ ಆತಂಕಕಾರಿ ಘಟನೆಯು ಭೋಪಾಲ್‌ನ ಖಾಸಗಿ ಶಾಲೆಯಲ್ಲಿ ನಡೆದಿದೆ.

ಈ ಕುರಿತು ಪಾಲಕರು ನೀಡಿರುವ ದೂರಿನಲ್ಲಿ, ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರದಲ್ಲಿ ಬಾಲಕನೊಂದಿಗೆ ಅಪರಿಚಿತ ಹುಡುಗ ಕೂಡ ತೊಡಗಿಕೊಂಡಿದ್ದಾನೆ ಎಂದು ದೂರಿದ್ದಾರೆ.

ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇನ್ನು ವರದಿ ಬಂದಿಲ್ಲ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಬಾಲಕಿಯ ಮನೆ ಸಮೀಪವೇ ಘಟನೆ ನಡೆದಿದ್ದು, ಬುಧವಾರ ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ಬಾಲಕ ಮತ್ತು ಆತನ ಪಾಲಕರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅಪ್ರಾಪ್ತ ಎನ್ನುವ ಕಾರಣಕ್ಕೆ ಬಂಧಿಸಿಲ್ಲ. ಮಹಿಳಾ ಪೊಲೀಸ್‌ ನೇತೃತ್ವದ ಎಸ್‌ಐಟಿಯು ಮುಂದಿನ ತನಿಖೆ ಕೈಗೊಂಡಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ದಿನೇಶ್‌ ಕುಶಾಲ್‌ ತಿಳಿಸಿದ್ದಾರೆ. (ಏಜೆನ್ಸೀಸ್)