8 Sixes Off 8 Balls : ವಿಶ್ವ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳು ದಾಖಲಾಗುತ್ತಲೇ ಇರುತ್ತವೆ. ಟಿ20 ಮತ್ತು ಟಿ10 ಸ್ವರೂಪ ಬಂದ ಮೇಲಂತೂ ದಾಖಲೆಗಳ ಸುರಿಮಳೆಯಾಗುತ್ತಿವೆ. ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದನ್ನು ನೀವು ನೋಡಿರಬಹುದು. ಆದರೆ, ಈ ದಾಖಲೆ ಅದನ್ನೂ ಮೀರಿಸಿದೆ.
ಹೌದು, ಇತ್ತೀಚೆಗೆ ಬ್ಯಾಟ್ಸ್‌ಮನ್ ಒಬ್ಬ 8 ಎಸೆತಗಳಲ್ಲಿ ಸತತ 8 ಸಿಕ್ಸರ್ ಬಾರಿಸುವ ಮೂಲಕ ವಿಶ್ವಕ್ರಿಕೆಟ್ ಅನ್ನು ನಿಬ್ಬೆರಗಾಗಿಸಿದ್ದಾರೆ. ಸ್ಪೇನ್ನಲ್ಲಿ ನಡೆದ ಟಿ10 ಟೂರ್ನಿಯಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳು ಹುಬ್ಬೇರಿಸಿದ್ದಾರೆ.
ಯುನೈಟೆಡ್ ಸಿಸಿ ಗಿರೋನಾ ಮತ್ತು ಪಾಕ್ ಬಾರ್ಸಿಲೋನಾ ನಡುವಿನ ಪಂದ್ಯ ಸ್ಪೇನ್ನ ಮಾಂಟ್ಜುಕ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಿನ್ನೆ (ನ.20) ನಡೆಯಿತು. ಈ ಪಂದ್ಯದಲ್ಲಿ ಬಾರ್ಸಿಲೋನಾದ ಬ್ಯಾಟ್ಸ್‌ಮನ್ ಅಲಿ ಹಸನ್ ಎಂಟು ಎಸೆತಗಳಲ್ಲಿ ಎಂಟು ಸಿಕ್ಸರ್ ಬಾರಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದರು.
ಮೊದಲು ಬ್ಯಾಟ್ ಮಾಡಿದ ಬಾರ್ಸಿಲೋನಾ ತಂಡ ಶುಭಾರಂಭ ಮಾಡಿತು. ಆದರೆ 6.1 ಓವರ್‌ಗಳ ನಂತರ 113 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಅಲಿ ಹಸನ್ ಪಾರು ಮಾಡಿದರು. ಏಳನೇ ಓವರ್‌ನ ಎರಡನೇ ಎಸೆತದಿಂದ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿದರು. ಆ ಬಳಿಕ ಎಂಟನೇ ಓವರ್ ನ 2, 3, 4 ಎಸೆತಗಳನ್ನು ಸಿಕ್ಸರ್ಗೆ ಅಟ್ಟಿದರು. ಹಸನ್, ಸತತ 8 ಎಸೆತಗಳಲ್ಲಿ 8 ಸಿಕ್ಸರ್ ಗಳಿಸಿದರು. ಈ ಪಂದ್ಯದಲ್ಲಿ ಹಸನ್ 16 ಎಸೆತಗಳನ್ನು ಎದುರಿಸಿ 8 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 55 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಲಿ ಹಸನ್ ಅವರ ಸ್ಫೋಟಕ ಆಟದ ನೆರವಿನಿಂದ ಪಾಕ್ ಬಾರ್ಸಿಲೋನಾ ತಂಡ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್‌ಗೆ 194 ರನ್ ಗಳಿಸಿತು. ಗುರಿ ಬೆನ್ನತ್ತಿದ ಯುನೈಟೆಡ್ ಸಿಸಿ ಗಿರೋನಾ ತಂಡ 9.4 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್ ಆಯಿತು.
ಅಂದಹಾಗೆ 6 ಎಸೆತಗಳಲ್ಲಿ 6 ಸಿಕ್ಸರ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಯಾಗಿದೆ. ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್ ಮತ್ತು ಹರ್ಷಲ್ ಗಿಬ್ಸ್ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರವಿಶಾಸ್ತ್ರಿ ಜೊತೆಗೆ ಇತರರು ದೇಶೀಯ ಕ್ರಿಕೆಟ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆದರೆ ಯಾವುದೇ ಕ್ರಿಕೆಟ್‌ನಲ್ಲಿ 8 ಎಸೆತಗಳಲ್ಲಿ 8 ಸಿಕ್ಸರ್ ಬಾರಿಸಿದ್ದು ಇದೇ ಮೊದಲು. ಹೀಗಾಗಿ ಕ್ರಿಕೆಟ್ ಜಗತ್ತು ನಿಬ್ಬೆರಗಾಗಿದೆ. (ಏಜೆನ್ಸೀಸ್)
ಅಮರನ್ ಚಿತ್ರತಂಡದ ಎಡವಟ್ಟಿನಿಂದ ವಿದ್ಯಾರ್ಥಿಯ ನೆಮ್ಮದಿ ಹಾಳು: 1 ಕೋಟಿ ರೂ. ಪರಿಹಾರಕ್ಕೆ ಆಗ್ರಹ! Amaran