ಪತ್ನಿ ತೊರೆದಿರುವ 8 ಎನ್​ಆರ್​ಐಗಳ ಪಾಸ್​ಪೋರ್ಟ್​ ರದ್ದು

ನವದೆಹಲಿ: ಪತ್ನಿಯನ್ನು ತೊರೆದು ವಿದೇಶಕ್ಕೆ ಹಾರಿರುವ ಎಂಟು ಜನ ಅನಿವಾಸಿ ಭಾರತೀಯರ(ಎನ್​ಆರ್​ಐ) ಪಾಸ್​ಪೋರ್ಟ್​ಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶುಕ್ರವಾರ ತಿಳಿಸಿದೆ.

ಪತ್ನಿಯರಿಗೆ ವಂಚಿಸಿ ಬೇರೆ ದೇಶಕ್ಕೆ ಪಲಾಯನ ಮಾಡಿರುವ ಪತಿಯರ ವಿರುದ್ಧ ಬಂದಿದ್ದ ದೂರುಗಳನ್ನು ಪರಿಶೀಲಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿದೇಶಾಂಗ ಸಚಿವಾಲಯ ಮತ್ತು ಗೃಹ ಇಲಾಖೆ ವಿಶೇಷ ಸಮಿತಿ ರಚಿಸಿತ್ತು.

ಕಳೆದ ಎರಡು ತಿಂಗಳಲ್ಲಿ ಸಮಿತಿಗೆ ಒಟ್ಟು 70 ದೂರುಗಳು ಬಂದಿವೆ. ಈ ಎಲ್ಲ ದೂರುಗಳ ವಿಚಾರಣೆ ನಂತರ ಎಂಟು ಎನ್​ಆರ್​ಐಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರ ಪಾಸ್​ಪೋರ್ಟ್​ಗಳನ್ನು ರದ್ದುಗೊಳಿಸಿದ್ದು ಲುಕ್​ಔಟ್​ ನೋಟೀಸ್​ ಜಾರಿಗೊಳಿಸಿದ್ದೇವೆ ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ.

ಈ ರೀತಿಯ ಪ್ರಕರಣಗಳಿಗೆ ಸ್ಪಂದಿಸಲು ಇಲಾಖೆ ಆನ್​ಲೈನ್​ ಪೋರ್ಟಲ್​ ಕೂಡ ಆರಂಭಿಸಿದ್ದು ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದೆ.

ಇಂಥ ಪ್ರಕರಣಗಳು ಕಂಡುಬಂದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಕ್ಷಣವೇ ತಿಳಿಸುವಂತೆ ಎಲ್ಲ ರಾಜ್ಯಗಳಿಗೆ ಸಚಿವೆ ಮನೇಕಾ ಗಾಂಧಿ ಸೂಚಿಸಿದ್ದರು.

ಎನ್​ಆರ್​ಐಗಳ ಮದುವೆ ಏಳು ದಿನಗಳೊಳಗೆ ನೋಂದಣಿಯಾಗಬೇಕು. ನಿಗದಿತ ಸಮಯದೊಳಗೆ ಮದುವೆ ನೋಂದಣಿಯಾಗದಿದ್ದರೆ ಅಂಥ ವ್ಯಕ್ತಿಗಳಿಗೆ ವೀಸಾ ಹಾಗೂ ಫಾಸ್​ಪೋರ್ಟ್​ಗಳನ್ನು ನೀಡದಿರುವಂತೆ ಇಲಾಖೆ ಈ ಮುಂಚೆ ನಿರ್ದೇಶನ ಹೊರಡಿಸಿತ್ತು. (ಏಜೆನ್ಸೀಸ್​)