ಚನ್ನಗಿರಿ: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲೂಕಾದ್ಯಂತ ನೂರಾರು ಎಕರೆ ಬೆಳೆ, ಎಂಟು ಮನೆಗಳು ಭಾಗಶಃ ಬಿದ್ದಿವೆ ಎಂದು ತಹಸೀಲ್ದಾರ್ ಪಿ.ಎಸ್.ಯರ‌್ರಿಸ್ವಾಮಿ ಬುಧವಾರ ಹೇಳಿಕೆ ನೀಡಿದ್ದಾರೆ.
ತಾಲೂಕಿನ ಬೆಂಕಿಕೆರೆ, ಯರಗಟ್ಟಿಹಳ್ಳಿ, ಬಸವೇಶ್ವರ ನಗರ, ವೆಂಕಟೇಶ್ವರ ಕ್ಯಾಂಪ್, ಕೆಂಪನಹಳ್ಳಿ, ಸುಣಗೆರೆ ಕಾವಲುಪ್ರದೇಶದ ಗ್ರಾಮಗಳಲ್ಲಿ ಮನೆಗಳು ಭಾಗಶಃ ಬಿದ್ದಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಪ್ರಕೃತಿ ವಿಕೋಪದಡಿ ಪರಿಹಾರ ನೀಡಲಾಗುತ್ತದೆ ಎಂದರು.
ತಾಲೂಕಿನ ವೆಂಕಟೇಶ್ವರ ಕ್ಯಾಂಪ್ ಗ್ರಾಮದಲ್ಲಿ ಆಲಿಕಲ್ಲು ಮಳೆ ಬಿದ್ದ ಕಾರಣದಿಂದ ಫಸಲಿಗೆ ಬಂದಿದ್ದ ಸುಮಾರು 110 ಎಕರೆ ಭತ್ತದ ಬೆಳೆ ನಾಶವಾಗಿದೆ. ಯರಗಟ್ಟಿಹಳ್ಳಿ ಗ್ರಾಮದಲ್ಲಿ 4 ಎಕರೆ, ಗರಗ ಹಾಗೂ ಹೊನ್ನಾನಾಯಕನಹಳ್ಳಿ ಗ್ರಾಮದಲ್ಲಿ ತಲಾ ಎರಡು ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಬಾಳೆ ಫಸಲು ನೆಲಕ್ಕೆ ಉರುಳಿದೆ.
ತಾಲೂಕಿನ ಸುಣಗೆರೆ ಹರೋನಹಳ್ಳಿ ಹೋಗುವ ಕಾವಲು ಪ್ರದೇಶದಲ್ಲಿ 15 ವರ್ಷದಿಂದ ಗುಡಿಸಲು ಹಾಕಿಕೊಂಡು ಜೀವನ ಕಟ್ಟಿಕೊಂಡಿದ್ದ ಜನರ 20ಕ್ಕೂ ಅಧಿಕ ಗುಡಿಸಲುಗಳು ನೆಲಸಮಗೊಂಡಿವೆ. ಗಾಳಿಗೆ ಮನೆ ಮೇಲೆ ಹಾಕಿದ್ದ ತಗಡುಗಳು ಹಾರಿ ಹೋಗಿವೆ.
ಉಬ್ರಾಣಿ 22.4 ಮಿಲಿ ಮೀಟರ್, ಚನ್ನಗಿರಿ 20.2, ಜೋಳದಾಳು 15.8, ದೇವರಹಳ್ಳಿ 8.6, ಸಂತೇಬೆನ್ನೂರು 4.2, ಬಸವಾಪಟ್ಟಣ 3.6, ಕೆರೆಬಿಳಚಿ 3.4, ತ್ಯಾವಣಗಿ 2.2 ಸೇರಿ ಒಟ್ಟು 80.4 ಮಿ.ಮೀ.ನಷ್ಟು ಮಳೆ ದಾಖಲಾಗಿದೆ.