ಪಾಕಿಸ್ತಾನದ ಲಾಹೋರ್​ನಲ್ಲಿ ಬಾಂಬ್​ ಸ್ಫೋಟ: 8 ಜನ ಸಾವು, 25ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಲಾಹೋರ್​: ಪಾಕಿಸ್ತಾನದ ಲಾಹೋರ್​ನ ದಾತಾ ದರ್ಬಾರ್ ​ಬಳಿ ಪೊಲೀಸ್​ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ಬಾಂಬ್​ ಸ್ಫೋಟದಲ್ಲಿ ಎಂಟು ಜನ ಮೃತಪಟ್ಟು, 25 ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ಸೂಫಿ ಮಸೀದಿ ದಾತಾ ದರ್ಬಾರ್​ನ ಗೇಟ್​​ 2ರ ಬಳಿ 7ಕೆಜಿಯಷ್ಟು ಸ್ಫೋಟಕಗಳನ್ನು ಬಳಸಿ ಕಾರನ್ನು ಸ್ಫೋಟಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿದ್ದು, ಇದು ಆತ್ಮಹತ್ಯಾ ದಾಳಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಫೋಟದಲ್ಲಿ ವಿಶೇಷ ಪಡೆಯ ಐವರು ಸಿಬ್ಬಂದಿ, ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಲಾಹೋರ್​ನ ಡಿಐಜಿ ಅಶ್ಫಾಕ್​ ಅಹಮದ್​ ಖಾನ್​ ತಿಳಿಸಿದ್ದಾರೆ.

ಸ್ಫೋಟದಲ್ಲಿ 25 ಜನರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಮಾಯೋ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ನಗರ ಪೊಲೀಸ್​ ವರಿಷ್ಠಾಧಿಕಾರಿ ಸೈಯದ್​ ಗಜ್​ನಾಫರ್​ ಷಾ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್​ಖಾನ್​ ಸ್ಫೋಟದಲ್ಲಿ ಅತ್ಯಮೂಲ್ಯವಾದ ಜೀವಗಳನ್ನು ಜನತೆ ಕಳೆದುಕೊಂಡಿದ್ದು ಅವರ ಕುಟುಂಬಗಳಿಗೆ ದುಖಃವನ್ನು ಬರಿಸುವ ಶಕ್ತಿ ನೀಡಲಿ ಎಂದರು.

ಘಟನೆಯ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ. (ಏಜೆನ್ಸೀಸ್​)