ಮುಂಬೈ ಆಸ್ಪತ್ರೆ ಅಗ್ನಿ ದುರಂತ: 6 ತಿಂಗಳ ಮಗು ಸೇರಿ ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಮುಂಬೈ: ಇಲ್ಲಿನ ಆಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಎಂಟು ಜನ ಮೃತಪಟ್ಟಿದ್ದು, 140 ಜನರನ್ನು ರಕ್ಷಿಸಲಾಗಿದೆ.

ಅಂಧೇರಿ ಉಪನಗರದ ಮಾರೊಲ್‌ನಲ್ಲಿನ ಸರ್ಕಾರಿ ಸ್ವಾಮ್ಯದ ಇಎಸ್‌ಐಸಿ ಕಾಮ್ಗರ್‌ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ವೇಳೆಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ 6 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಮತ್ತಿಬ್ಬರು ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ 10 ಅಗ್ನಿ ಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಡುವಂತಾಯಿತು. ಬೆಂಕಿಯ ಜ್ವಾಲೆಗಳು ಹೆಚ್ಚಾಗುತ್ತಿರುವ ವೇಳೆಗೆ ರೋಗಿಗಳನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ.

ರೋಗಿಗಳನ್ನು ಕೂಪರ್‌ ಆಸ್ಪತ್ರೆ, ಹೋಲಿ ಸ್ಪಿರಿಟ್‌ ಆಸ್ಪತ್ರೆ, ಪಿ ಠಾಕ್ರೆ ಟ್ರೊಮಾ ಆಸ್ಪತ್ರೆ, ಹಿರಾನಂದಾನಿ ಆಸ್ಪತ್ರೆ, ಸಿದ್ಧಾರ್ಥ್‌ ಆಸ್ಪತ್ರೆ ಮತ್ತು ಸೆವೆನ್‌ ಹಿಲ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಸದ್ಯ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಘಟನೆಗೆ ಮಹಾರಾಷ್ಟ್ರ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌(MIDC) ಕಾರಣ. ಈ ಕುರಿತು ತನಿಖೆ ಕೈಗೊಳ್ಳಲಾಗುತ್ತದೆ ಎಂದು ಮೇಯರ್‌ ವಿ ಮಹದೇಶ್ವರ್‌ ತಿಳಿಸಿದ್ದಾರೆ. (ಏಜೆನ್ಸೀಸ್)