ಕೊಕಟನೂರ: ಬಲೆಗೆ ಬಿದ್ದ ವಾಹನ ಕಳ್ಳರು

ಕೊಕಟನೂರ: ಹಲವು ದಿನಗಳಿಂದ ಮೋಟರ್ ಬೈಕ್ ಮತ್ತು ಟ್ರ್ಯಾಕ್ಟರ್ ಕಳ್ಳತನ ಮಾಡುತ್ತಿದ್ದ ಕಳ್ಳರ ತಂಡದ ಮೂವರು ಆರೋಪಿಗಳನ್ನು ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದು, 8.50 ಲಕ್ಷ ರೂ.ಮೌಲ್ಯದ ವಾಹನ ವಶಪಡಿಸಿಕೊಂಡಿದ್ದಾರೆ.

ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ರಾಜು ಪರಗೌಡ ಮುದಗೌಡರ, ಸಪ್ತಸಾಗರ ಗ್ರಾಮದ ರಾಜಕುಮಾರ ತಾತ್ಯಾಸಾಬ ಚುನಾರ ಹಾಗೂ ರವಿಚಂದ್ರ ಅಣ್ಣಪ್ಪ ಚುನಾರ ಬಂಧಿತ ಆರೋಪಿಗಳು. 2019ರ ಫೆ. 1 ರ ರಾತ್ರಿ 8.30 ರಿಂದ ಫೆ.2ರ 6 ಗಂಟೆ ಅವಧಿಯೊಳಗೆ ಖವಟಕೊಪ್ಪ ಗ್ರಾಮದ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಅಲಗೌಡ ರುದ್ರಪ್ಪ ಸತ್ತಿ ಅವರಿಗೆ ಸೇರಿದ ಜಾನ್ ಡಿಯರ್ ಕಂಪನಿಯ ಟ್ರ್ಯಾಕ್ಟರ್ ಕಳ್ಳತನವಾಗಿರುವ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳಗಾವಿ ಎಸ್‌ಪಿ ಸುಧೀರಕುಮಾರ ರೆಡ್ಡಿ ನೇತೃತ್ವದಲ್ಲಿ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರಿರಾಂಮ ಶಂಕರ ಮತ್ತು ಅಥಣಿ ಡಿವೈಎಸ್‌ಪಿ ರಾಮಗೌಡ ಬಸರಗಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಥಣಿ, ರಾಯಬಾಗ, ಕುಡಚಿ ಸೇರಿ ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 6.50 ಲಕ್ಷ ರೂ. ಮೌಲ್ಯದ 21 ಬೈಕ್‌ಗಳು ಮತ್ತು 2 ಲಕ್ಷ ರೂ. ಮೌಲ್ಯದ ಜಾನ್ ಡಿಯರ್ ಟ್ರ್ಯಾಕ್ಟರ್ ಇಂಜಿನ್ ವಶಕ್ಕೆ ಪಡೆಯಲಾಗಿದೆ.

ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಅಥಣಿ ಸಿಪಿಐ ಅಲಿಸಾಬ್ ಇಮಾಮಸಾಬ್, ಪಿಎಸ್‌ಐ ಯು.ಎಸ್.ಅವಟಿ, ಪ್ರೊಬೇಷನರಿ ಪಿಎಸ್‌ಐ ಎಂ.ಡಿ.ಘೋರಿ, ಎಎಸ್‌ಐ ಕೆ.ಆರ್.ಗುಡಾಜ ಸಿಬ್ಬಂದಿ ಎಂ.ಬಿ.ದೊಡಮನಿ, ಎಂ.ಡಿ.ಹಿರೇಮಠ, ಜಿ.ಎನ್. ಇಂಚಲ, ಎಸ್.ಐ.ಮೇಲಾಪುರ, ಬಿ.ಜೆ ತಳವಾರ, ರವಿ ಬಸ್ತವಾಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.