8 ಕ್ಷೇತ್ರದಲ್ಲೂ ಜೆಡಿಎಸ್​ಗೆ ಲೀಡ್

ಶಿವಮೊಗ್ಗ: ಲೋಕಸಭೆ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್ ಸಿಗುವುದು ಪಕ್ಕಾ. ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಸ್ವತಃ ತಾವೇ ಅಭ್ಯರ್ಥಿಯಂತೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಟಿಕೆಟ್ ಘೊಷಣೆ ನಂತರ ಸಿಕ್ಕ 38 ದಿನಗಳ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇನೆ. ಅಲ್ಪಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ ಸರಿಪಡಿಸಿಕೊಂಡು ಪ್ರಚಾರ ಮಾಡಲಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

ಮತ ಪ್ರಮಾಣ ಅಧಿಕವಾಗಿದ್ದು ನನಗೆ ಪ್ಲಸ್ ಪಾಯಿಂಟ್ ಆಗಲಿದೆ. ಉಪಚುನಾವಣೆಯಲ್ಲಿ ಆಗಿರುವ ಪ್ರಮಾಣಕ್ಕಿಂತ ಶೇ.12 ಅಧಿಕ ಆಗಿದೆ. ಇದರಲ್ಲಿ ಶೇ.11.5 ಮತಗಳು ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಸಿಗುವ ವಿಶ್ವಾಸವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಧು ಜನರ ಕೈಗೆ ಸಿಗುವುದಿಲ್ಲವೆಂಬ ಬಿಜೆಪಿ ಅಪಪ್ರಚಾರದ ನಡುವೆಯೂ ಮತದಾರರು ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಿದರು. ಅವರು ನನ್ನ ಟೀಕಿಸುವ ಕೆಲಸ ಬಿಟ್ಟರೆ ಮತ್ತೇನನ್ನೂ ಮಾಡಲಿಲ್ಲ. ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಹೇಳಲಿಲ್ಲ. ಆದರೆ ನಾವು ಬಂಗಾರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಸರ್ಕಾರಗಳ ಸಾಧನೆ ಮೂಲಕ ಮತ ಕೇಳಿದೆವು ಎಂದು ತಿಳಿಸಿದರು.

ಐಟಿ ಇಲಾಖೆ ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡಲು ಯತ್ನಿಸಿದರು. ಅಪ್ಪಾಜಿ ಗೌಡ ಸೇರಿ ಜೆಡಿಎಸ್ ಮುಖಂಡರನ್ನು ಪ್ರಚಾರದ ಕೊನೇ ದಿನಗಳಲ್ಲಿ ಗಂಟೆಗಟ್ಟಲೇ ಸುಮ್ಮನೆ ಕೂರಿಸಿಕೊಂಡರು. ಕಿರುಕುಳಕ್ಕೂ ತಲೆಕೆಡಿಸಿಕೊಳ್ಳದೆ ಪ್ರಚಾರ ನಡೆಸಿದೆವು. ಅಲ್ಲದೆ ಮುಂದಿನ ದಿನಗಳಲ್ಲಿ ಅರಣ್ಯ ಸಾಗುವಳಿದಾರರ ಪರ ಹೋರಾಟದಲ್ಲಿ ತೊಡಗುತ್ತೇನೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ ನಾನು ನಡೆಸಿದ ಪಾದಯಾತ್ರೆ ಹಾಗೂ ಹೋರಾಟಕ್ಕೆ ಉತ್ತಮ ಸ್ಪಂದನೆ ಸಿಕ್ಕಿತು. ಜಿಲ್ಲೆಯಲ್ಲಿ ಶೋಕಿಗಾಗಿ ಪಾದಯಾತ್ರೆ ನಡೆಸುವವರಿದ್ದಾರೆ. ಅವರ ಹೆಸರು ಹೇಳಲು ಇಚ್ಛಿಸುವುದಿಲ್ಲ. ನನ್ನ ಪಾದಯಾತ್ರೆ ಹೋರಾಟ ಹಾಗೂ ನೀರಾವರಿ ಯೋಜನೆಗಳ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿದ ಪರಿಣಾಮ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲು ಮುಂದಾದರು ಎಂದು ತಿಳಿಸಿದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ನಾಗರಾಜ್ ಕಂಕಾರಿ, ಜಿ.ಡಿ.ಮಂಜುನಾಥ್ ಇದ್ದರು.