ಬೆಂಗಳೂರು: ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ಆಮಿಷಕ್ಕೆ ಒಳಗಾದ ಮಹಿಳೆಗೆ ಸೈಬರ್ ವಂಚಕರು 79 ಲಕ್ಷ ರೂ. ಧೋಖಾ ಮಾಡಿದ್ದಾರೆ.
ಜಯನಗರದ 4ನೇ ಹಂತದ 46 ವರ್ಷದ ಮಹಿಳೆ ಮೋಸ ಹೋದವರು. ಈಕೆ ಕೊಟ್ಟ ದೂರಿನ ಮೇರೆಗೆ ದಕ್ಷಿಣ ವಿಭಾಗ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಳೆದ ಜು. 18ರಂದು ಸ್ನೇಹಿತನ ಕಡೆಯಿಂದ ಸಂತ್ರಸ್ತೆ ವಾಟ್ಸ್‌ಆ್ಯಪ್ ಖಾತೆಗೆ ಲಿಂಕ್ ಬಂದಿತ್ತು. ಇದನ್ನು ಗಮನಿಸಿದ ಆಕೆ, ಹೂಡಿಕೆ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರು. ಬಳಿಕ ಒಟಿಸಿ ಆಲ್ ಪ್ರೋ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿದ್ದ. ಅದರಂತೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಸಂತ್ರಸ್ತೆ, ಜು. 18ರಿಂದ ಆ. 5ರ ನಡುವೆ ವಿವಿಧ ಬ್ಯಾಂಕ್ ಖಾತೆಯಿಂದ ಸ್ಟಾಕ್ ಮಾರ್ಕೆಟ್‌ನಲ್ಲಿ ಷೇರು ಖರೀದಿ ಮತ್ತು ಮಾರಾಟ ಮಾಡುತ್ತಿದ್ದರು. ಇದಕ್ಕಾಗಿ 79 ಲಕ್ಷ ರೂ. ಹೂಡಿಕೆ ಮಾಡಿದ್ದರು.
ಷೇರು ಮಾರಾಟ ಮತ್ತು ಖರೀದಿ ಮಾಡಿದಾಗ ವೆಬ್‌ಸೈಟ್‌ನಲ್ಲಿ ಸಂತ್ರಸ್ತೆಯ ಖಾತೆಯಲ್ಲಿ ಲಾಭಾಂಶ ತೋರಿಸುತ್ತಿತ್ತು. ಅದನ್ನು ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ವಿಚಾರಿಸಿದಾಗ ಮತ್ತಷ್ಟು ಹಣ ಹೂಡಿಕೆ ಮಾಡಿದರೆ ಮಾತ್ರ ಸಾಧ್ಯ ಆಗಲಿದೆ ಎಂದು ಸಬೂಬು ಹೇಳಿಕೊಂಡು ಕಾಲ ಮುಂದೂಡುತ್ತಿದ್ದ. ಕೊನೆಗೊಂದು ದಿನ ಆ್ಯಪ್ ಸರ್ವರ್ ಡೌನ್ ಆಗಿದ್ದು, ಸಂಪರ್ಕ ಕಡಿತವಾಗಿದೆ. ಆಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸಂತ್ರಸ್ತೆ, ಸಿಇಎನ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.