760 ಡೆಂಘ ಪ್ರಕರಣ ಪತ್ತೆ: ಪೂರ್ವ ವಿಭಾಗದಲ್ಲಿ ಹೆಚ್ಚು ಬಾಧಿತರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡೆಂಘ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ವಾಗುತ್ತಿದೆ. ಜನವರಿಯಿಂದ ಈವರೆಗೆ 760 ಡೆಂಘ ಪ್ರಕರಣಗಳು ಪತ್ತೆಯಾಗಿವೆ.

ಪೂರ್ವ ವಲಯವೊಂದರಲ್ಲಿಯೇ 239 ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮಳೆಗಾಲ ಪೂರ್ಣಗೊಳ್ಳುವ ವೇಳೆಗೆ ರೋಗ ಮತ್ತಷ್ಟು ಹರಡುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಮನೆ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಬಿಬಿಎಂಪಿ ಮನವಿ ಮಾಡಿದೆ.

ಮೇ ತಿಂಗಳಿನಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 349 ಜನರಲ್ಲಿ ಡೆಂಘ ಕಾಣಿಸಿಕೊಂಡಿದೆ. ರೋಗ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ವಾರ್ಡ್​ವಾರು 3 ಜನರ ತಂಡಗಳನ್ನು ರಚಿಸಲಾಗಿದೆ. ಡೆಂಘ ಪ್ರಕರಣ ಪತ್ತೆಯಾದ ಮನೆಗಳಿಗೆ ತೆರಳಿ ಅಲ್ಲಿ ಸುತ್ತಮುತ್ತಲೂ ರೋಗ ಉತ್ಪತ್ತಿಗೆ ಕಾರಣವಾಗುವ ಅಂಶಗಳನ್ನು ಪತ್ತೆ ಮಾಡಿ ನಾಶ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗಡೆ ತಿಳಿಸಿದ್ದಾರೆ. ಡೆಂಘ ನಿಯಂತ್ರಿಸಲು ಸೊಳ್ಳೆ ಕಚ್ಚದಂತೆ ನಿಗಾ ವಹಿಸಬೇಕು, ಶುದ್ಧ ಹಾಗೂ ಕುದಿಸಿ ಆರಿಸಿದ ನೀರು ಸೇವಿಸಬೇಕು, ನೀರು ಶೇಖರಣಾ ತೊಟ್ಟಿ ಮತ್ತು ಟ್ಯಾಂಕ್​ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಬೇಕು, ನೀರು ನಿಲ್ಲದಂತೆ ಕ್ರಮ ಸೇರಿ ಅಗತ್ಯ ಕ್ರಮಗಳನ್ನು ಸಾರ್ವಜನಿಕರು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಎಲ್ಲಿ, ಎಷ್ಟು ಪ್ರಕರಣಗಳು?

ಪೂರ್ವ ವಲಯದಲ್ಲಿ 239, ದಕ್ಷಿಣ ವಲಯದಲ್ಲಿ 120, ಪಶ್ಚಿಮ ವಲಯದಲ್ಲಿ 37, ಬೊಮ್ಮನಹಳ್ಳಿ ವಲಯದಲ್ಲಿ 75, ದಾಸರಹಳ್ಳಿ ವಲಯದಲ್ಲಿ 21, ಮಹದೇವಪುರ ವಲಯದಲ್ಲಿ 113, ರಾಜರಾಜೇಶ್ವರಿ ನಗರ ವಲಯದಲ್ಲಿ 22, ಯಲಹಂಕ ವಲಯದಲ್ಲಿ 88 ಪ್ರಕರಣಗಳು ಪತ್ತೆಯಾಗಿವೆ. ಇದಲ್ಲದೆ ನಗರದಲ್ಲಿ 28 ಚಿಕೂನ್​ಗುನ್ಯಾ, 138 ಮಲೇರಿಯಾ, 127 ವಿಷಮಶೀತ ಜ್ವರ ಪ್ರಕರಣಗಳು ಪತ್ತೆಯಾಗಿವೆ.

Leave a Reply

Your email address will not be published. Required fields are marked *