73 ಜನರ ಜೀವ ಉಳಿಸಿದ ಚಾಲಕರು!

ಯಲ್ಲಾಪುರ: ಇಬ್ಬರು ಚಾಲಕರ ನಡುವಿನ ಅದ್ಭುತ ಸಮಯಪ್ರಜ್ಞೆಯಿಂದಾಗಿ 73 ಪ್ರಯಾಣಿಕರು ಜೀವಪಾಯದಿಂದ ಪಾರಾದ ಅಚ್ಚರಿದಾಯಕ ಘಟನೆ ಇಲ್ಲಿಗೆ ಸಮೀಪದ ಅರಬೈಲ್ ಘಟ್ಟದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.

ಅರಬೈಲ್ ಘಟ್ಟವು ಹುಬ್ಬಳ್ಳಿ- ಕಾರವಾರ ರಸ್ತೆಯ ನಡುವೆ ಇಲ್ಲಿಂದ 20 ಕಿ.ಮೀ. ಅಂತರದಲ್ಲಿ ಇದೆ. ಸುಮಾರು 15 ಕಿ.ಮೀ. ಉದ್ದದ ಈ ಘಟ್ಟ ಅಪಾಯಕಾರಿ ತಿರುವುಗಳನ್ನು ಹೊಂದಿದೆ. ಇಂತಹ ಕ್ಲಿಷ್ಟಕರ ರಸ್ತೆಯಲ್ಲೇ ಗದಗದಿಂದ ಕಾರವಾರಕ್ಕೆ ಹೊರಟಿದ್ದ ಗದಗ ಘಟಕದ ಬಸ್ (ನಂಬರ್ ಕೆಎ 26 ಎಫ್ 1025) ಬ್ರೇಕ್ ಫೇಲ್ ಆಗಿ ಇಳಿಜಾರಿನಲ್ಲಿ ಅಪಾಯಕ್ಕೆ ಸಿಲುಕಿತು. ಸಾಕಷ್ಟು ವೇಗ ಹಾಗೂ ಕಡಿದಾದ ಇಳಿಜಾರು ಇದ್ದ ಕಾರಣ ಈ ಬಸ್ ಚಾಲಕನ ನಿಯಂತ್ರಣಕ್ಕೆ ಬರುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ತಲೆದೋರಿತು.

ಹೆದ್ದಾರಿ ಪಕ್ಕದ ದೊಡ್ಡ ಕಂದಕಕ್ಕೆ ಬಸ್ ಉರುಳುವ ಸ್ಥಿತಿ ನಿರ್ವಣಗೊಂಡಿದ್ದರಿಂದ ಪ್ರಯಾಣಿಕರೆಲ್ಲ ತೀವ್ರ ಆತಂಕಕ್ಕೆ ಒಳಗಾದರು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಬಸ್ ಚಾಲಕ ಈಶ್ವರ ಅವರು ಅಗಾಧ ಸಮಯಪ್ರಜ್ಞೆ ಹಾಗೂ ಸಾಹಸ ಮೆರೆದರು. ಮುಂದೆ ಸಾಗುತ್ತಿದ್ದ ಲಾರಿಯೊಂದು ಅವರಿಗೆ ದೇವರ ಸ್ವರೂಪ ಎಂಬಂತೆ ಕಂಡುಬಂದಿತು. ತಕ್ಷಣವೇ ಲಾರಿಗೆ ಬಸ್ ಅನ್ನು ಗುದ್ದಿ ವೇಗವನ್ನು ಕಡಿಮೆಗೊಳಿಸುವ ಪ್ರಯತ್ನ ಕೈಗೊಂಡರು. ಇದು ಫಲವನ್ನು ಕೂಡ ನೀಡಿತು. ಮೇಲಿಂದ ಮೇಲೆ ಲಾರಿಗೆ ಬಸ್ ಗುದ್ದಿದ್ದರಿಂದ ಬಸ್​ನ ಬ್ರೇಕ್ ಫೇಲ್ ಆಗಿದೆ ಎಂಬುದನ್ನು ಲಾರಿ ಚಾಲಕ ಈರಣ್ಣ ಕೂಡ ತಕ್ಷಣವೇ ಮನಗಂಡರು. ಹೀಗಾಗಿ, ಇಬ್ಬರೂ ಚಾಲಕರ ಮನಸ್ಥಿತಿಗಳು ಅಪಾಯವನ್ನು ಅರಿತು ಹೊಂದಾಣಿಕೆಯಾದವು. ಲಾರಿಗೆ ಬಸ್ ಗುದ್ದುತ್ತಲೇ ಘಟ್ಟದ ತಿರುವುಗಳ ಮೂಲಕ ಸಾಗಿತು. ಕೊನೆಗೂ ಇಳಿಜಾರು ಮುಕ್ತಾಯವಾದ ನಂತರ ಬಸ್ ನಿಯಂತ್ರಣಕ್ಕೆ ಬಂದು ನಿಲುಗಡೆ ಕಂಡಿತು.

ಅಚ್ಚರಿಯ ಸಂಗತಿ ಎಂದರೆ, ಬ್ರೇಕ್ ಫೇಲ್ ಆದ ನಂತರ ಬಸ್ ಸಾಗಿದ ಒಟ್ಟಾರೆ ದೂರ ಸುಮಾರು 4 ಕಿ.ಮೀ. ಇಂತಹ ಅದ್ಭುತ ಸಂಗತಿ ಜರುಗಿದ್ದು ಮಾತ್ರ ಇಬ್ಬರೂ ಚಾಲಕರ ಸಮಯಪ್ರಜ್ಞೆ, ಹೊಂದಾಣಿಕೆ ಹಾಗೂ ಸಾಹಸದಿಂದಾಗಿ.

ಈ ಘಟನೆಯಲ್ಲಿ ಬಸ್​ನ ಮುಂಭಾಗ ಹಾಗೂ ಲಾರಿಯ ಹಿಂಭಾಗ ಜಖಂಗೊಂಡಿದೆ. ಆದರೆ, ಬಸ್​ನಲ್ಲಿದ್ದ ಯಾರೊಬ್ಬರಿಗೂ ಗಾಯ ಕೂಡ ಆಗಿಲ್ಲ.