ಮೂರು ವರ್ಷದಲ್ಲಿ 71 ಸಾವಿರ ಜನಕ್ಕೆ ನಾಯಿ ಕಡಿತ

street dog in shimogga

ನವೀನ್ ಬಿಲ್ಗುಣಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲಾದ್ಯಂತ ವರ್ಷದಿಂದ ವರ್ಷಕ್ಕೆ ನಾಯಿಗಳ ದಾಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಮೂರು ವರ್ಷದಲ್ಲಿ 71 ಸಾವಿರಕ್ಕೂ ಅಧಿಕ ಜನರು ಬೀದಿನಾಯಿಗಳ ಕಡಿತಕ್ಕೆ ಒಳಗಾಗಿದ್ದು, ಆರು ಮಂದಿ ರೇಬಿಸ್‌ಗೆ ತುತ್ತಾಗಿ ಮೃತಪಟ್ಟಿದ್ದಾರೆ. ಕಳೆದ ವರ್ಷವೇ ನಾಲ್ವರು ಬಲಿಯಾಗಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

ಜಿಲ್ಲೆಯ ಶಿವಮೊಗ್ಗ ಮಹಾನಗರ ಪಾಲಿಕೆ, ಭದ್ರಾವತಿ ಮತ್ತು ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ತೀರ್ಥಹಳ್ಳಿ, ಸೊರಬ, ಹೊಸನಗರ, ಕಾರ್ಗಲ್ ಮತ್ತು ಶಿರಾಳಕೊಪ್ಪ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಬೀದಿ ನಾಯಿಗಳ ನಿಯಂತ್ರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೂ ಬೀದಿ ನಾಯಿಗಳ ಏರಿಕೆ ಮಾತ್ರ ಕಡಿಮೆ ಆಗುತ್ತಿಲ್ಲ. ಪರಿಣಾಮ ಜನ-ಜಾನುವಾರುಗಳ ಮೇಲೆ ನಾಯಿಗಳ ದಾಳಿ ಕೂಡ ನಿಂತಿಲ್ಲ.
2022ರಲ್ಲಿ 19,593 ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು. 2023ರಲ್ಲಿ ನಾಯಿ ಕಡಿತದ ಪ್ರಕರಣಗಳು 25,764ಕ್ಕೆ ಏರಿಕೆಯಾಗಿದ್ದರೆ, ಕಳೆದ ವರ್ಷ 2024ರಲ್ಲಿ 26,950 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದರು. ಲಕ್ಷಾಂತರ ರೂ. ಸುರಿದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದರೂ ಬೀದಿ ನಾಯಿಗಳ ನಿಯಂತ್ರಣ ಮಾತ್ರ ಆಗುತ್ತಿಲ್ಲ ಎಂಬುದು ವಿಪರ್ಯಾಸ.
ಬೆಕ್ಕು ಪರಚಿ ಇಬ್ಬರ ಸಾವು: 2024ರಲ್ಲಿ ಬೆಕ್ಕು ಕಚ್ಚಿ ಇಬ್ಬರು ಮೃತಪಟ್ಟಿದ್ದಾರೆ. ಬೆಕ್ಕುಗಳು ಕಚ್ಚಿದರೆ ಅಥವಾ ಪರಚಿದರೆ ಜನರು ಸಾಯುತ್ತಾರೆ ಎಂಬುದು ಬಹಳಷ್ಟು ಜನರಿಗೆ ಅರಿವಿಲ್ಲ. ಆದರೆ ಬೆಕ್ಕುಗಳ ದಾಳಿಯಿಂದಲೂ ಜನರು ಸಾವಿಗೀಡಾಗುತ್ತಾರೆ ಎಂಬುದು ಶಿವಮೊಗ್ಗ ಜಿಲ್ಲೆಯಲ್ಲಿ ದೃಢಪಟ್ಟಿದೆ. ಬೆಕ್ಕು ಪರಚಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಪಡೆಯದೇ ನಿರ್ಲಕ್ಷೃವಹಿಸಿದ ಪರಿಣಾಮ ರೇಬಿಸ್‌ಗೆ ಬಲಿಯಾಗಿದ್ದಾರೆ. ಅದೇ ರೀತಿ ನಾಯಿಗಳ ದಾಳಿಗೂ ಇಬ್ಬರು ಮೃತಪಟ್ಟಿದ್ದು, 2022 ಮತ್ತು 2023ರಲ್ಲಿ ತಲಾ ಒಬ್ಬರು ನಾಯಿ ದಾಳಿಗೆ ತುತ್ತಾಗಿದ್ದಾರೆ.
ಬರ್ತ್ ಕಂಟ್ರೋಲ್ ಅಸರ್ಮಪಕ: ಸಂತಾನ ಶಕ್ತಿಹರಣ ಶಸಚಿಕಿತ್ಸೆ ನಂತರವೂ ನಾಯಿಗಳ ಜನನ ನಿಯಂತ್ರಣ ಆಗುತ್ತಿಲ್ಲ ಎಂಬುದು ವಿಪರ್ಯಾಸ. ನಗರಪಾಲಿಕೆ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎಬಿಸಿ (ಅನಿಮಲ್ ಬರ್ತ್ ಕಂಟ್ರೋಲ್) ಅಸಮರ್ಪಕವಾಗಿದೆ. ಸಂತಾನಶಕ್ತಿ ಹರಣ, ಶಸ್ತ್ರಚಿಕಿತ್ಸೆ ಸಮರ್ಪಕವಾಗಿ ನಡೆಯದೇ ಇರುವುದು, ಬೀದಿ ನಾಯಿಗಳ ಸಂಖ್ಯೆ ಹೆಚ್ಚಲು ಕಾರಣ. ಪಶು ವೈದ್ಯಾಧಿಕಾರಿಗಳ ಮಾಹಿತಿಯಂತೆ ವರ್ಷಕ್ಕೆ ಹೆಣ್ಣು ನಾಯಿ ಎರಡು ಬಾರಿ ಮರಿಗಳನ್ನು ಹಾಕಲಿದೆ. ಇದರಿಂದ ಒಂದೇ ವರ್ಷದಲ್ಲಿ ನಾಯಿಗಳ ಪ್ರಮಾಣ 10 ಪಟ್ಟು ಹೆಚ್ಚಾಗುತ್ತಿದೆ. ಪ್ರತಿ ವರ್ಷ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯಿಂದ ಹೊರಗುಳಿದ ನಾಯಿಗಳ ಪ್ರಮಾಣ ಹೆಚ್ಚುತ್ತಲೇ ಇದೆ.
10 ಸಾವಿರಕ್ಕೂ ಅಧಿಕ ಬೀದಿ ನಾಯಿ: ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದೇ ಬಡಾವಣೆ, ವೃತ್ತ, ಬೀದಿ, ಗಲ್ಲಿ-ಗಲ್ಲಿಗಳಲ್ಲೂ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಶಾಲೆಗಳ ವ್ಯಾಪ್ತಿಯಲ್ಲಿ ಸಣ್ಣ ಮಕ್ಕಳು ಹೊರಗಡೆ ಒಬ್ಬಂಟಿಗರಾಗಿ ಓಡಾಡದಂತಾಗಿದ್ದು, ಪಾಲಕರಲ್ಲಿ ಆತಂಕ ಮನೆ ಮಾಡಿದೆ. ಅದರಲ್ಲೂ ರಾತ್ರಿ ಹೊರಗಡೆ ಧೈರ್ಯವಾಗಿ ನಡೆದಾಡುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ. 35 ವಾರ್ಡ್‌ಗಳ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಅಧಿಕ ಬೀದಿನಾಯಿಗಳಿವೆ ಎಂದು ಅಂದಾಜಿಸಲಾಗಿದೆ.
ಉಚಿತ ವ್ಯಾಕ್ಸಿನ್: ಜಿಲ್ಲಾದ್ಯಂತ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಇದ್ದವರಿಗೆ ಉಚಿತವಾಗಿ ಆ್ಯಂಟಿ ರೇಬಿಸ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ವ್ಯಾಕ್ಸಿನ್‌ಗೆ ಕನಿಷ್ಟ 2,500ರೂ. ಇದೆ. ನ್ಯಾಷನಲ್ ರೇಬಿಸ್ ಕಂಟ್ರೋಲ್ ಪ್ರೋಗ್ರಾಂನಡಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ನಾಯಿ ಕಡಿತ ಪ್ರಕರಣಗಳನ್ನು ಜಿಲ್ಲಾ ಕಣ್ಗಾವಲು ಘಟಕಗಳಿಗೆ ವರದಿ ನೀಡಬೇಕು ಎನ್ನುತ್ತಾರೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು.

ನಾಯಿ ಕಡಿತದ ಪ್ರಕರಣಗಳು
ತಾಲೂಕು-2022-2023-2024
ಶಿವಮೊಗ್ಗ-5091-5800-5816
ಭದ್ರಾವತಿ-3701-4491-4546
ತೀರ್ಥಹಳ್ಳಿ-1920-2960-3129
ಸಾಗರ-3121-4117-4837
ಶಿಕಾರಿಪುರ-2107-3802-2752
ಸೊರಬ-1641-2329-2243
ಹೊಸನಗರ-2012-2265-3627
ಒಟ್ಟು-19593-25764-26,950

ನಾಯಿಗಳ ಕಡಿತವನ್ನು ಅಧಿಸೂಚಿತ ರೋಗವೆಂದು ಕೇಂದ್ರ ಸರ್ಕಾರ ಪರಿಗಣಿಸಿದೆ. ಇತ್ತೀಚೆಗೆ ನಾಯಿ ಕಡಿತ ಹೆಚ್ಚಾಗಿದೆ. ಹಾಗಾಗಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷ 26 ಸಾವಿರಕ್ಕೂ ಅಧಿಕ ಜನರಿಗೆ ನಾಯಿ ಕಚ್ಚಿದ್ದು, ರೇಬಿಸ್‌ಗೆ ನಾಲ್ವರು ಬಲಿಯಾಗಿದ್ದಾರೆ. ಹಾಗಾಗಿ ರೇಬಿಸ್ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ.
– ಡಾ. ನಾಗರಾಜ್ ನಾಯ್ಕ, ಶಿವಮೊಗ್ಗ ಡಿಎಸ್‌ಒ

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…