71.15 ಕೋಟಿ ಬಜೆಟ್ ಮಂಡನೆ

ಹಳಿಯಾಳ: ತಾಲೂಕು ಪಂಚಾಯಿತಿಯ 2019-20ನೇ ಸಾಲಿನ ಲಿಂಕ್ ಡಾಕ್ಯುಮೆಂಟ್ ಪ್ರಕಾರ ನಿಗದಿಪಡಿಸಿದ 71.15 ಕೋಟಿ ರೂ.ಗಳ ಬಜೆಟ್ ಅನ್ನು ಶುಕ್ರವಾರ ನಡೆದ ತಾ.ಪಂ. ಕೆಡಿಪಿ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದಿಸಲಾಯಿತು.

ಇಲ್ಲಿಯ ದೇವರಾಜ ಅರಸು ಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ರೀಟಾ ಫ್ರಾನ್ಸಿಸ್ ಸಿದ್ದಿ ಬಜೆಟ್ ಮಂಡಿಸಿದರು.

ಬಜೆಟ್ ವಿವರ: ಶಿಕ್ಷಣ ಇಲಾಖೆಗೆ 48.44 ಕೋಟಿ, ಆರೋಗ್ಯ ಇಲಾಖೆಗೆ 3.55 ಲಕ್ಷ, ಸಮಾಜ ಕಲ್ಯಾಣ ಇಲಾಖೆಗೆ 2 ಕೋಟಿ, ಹಿಂದುಳಿದ ವರ್ಗಗಳ ಇಲಾಖೆಗೆ 46.60 ಲಕ್ಷ, ಶಿಶು ಅಭಿವೃದ್ಧಿ ಇಲಾಖೆಗೆ 15.92 ಕೋಟಿ, ಕೃಷಿ ಇಲಾಖೆಗೆ 33ಲಕ್ಷ, ತೋಟಗಾರಿಕಾ ಇಲಾಖೆಗೆ 83 ಸಾವಿರ, ಪಶು ಸಂಗೋಪನಾ ಇಲಾಖೆಗೆ 1.32 ಕೋಟಿ, ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ 2.60 ಕೋಟಿ ರೂ. ಮೀಸಲಾಗಿಟ್ಟಿದೆ.

ವೈದ್ಯರ ದುರ್ವರ್ತನೆ: ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳೊಂದಿಗೆ ವೈದ್ಯರು ಸರಿಯಾಗಿ ವರ್ತಿಸುತ್ತಿಲ್ಲ, ರೋಗಿಗಳ ಸಮಸ್ಯೆಯನ್ನು ಸರಿಯಾಗಿ ಪರಿಶೀಲಿಸದೇ ಕಳುಹಿಸುತ್ತಾರೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ರಾತ್ರಿ ಪಾಳಿಯಲ್ಲಿ ವೈದ್ಯರು ಸರಿಯಾಗಿ ಲಭ್ಯರಾಗುತ್ತಿಲ್ಲ ಎಂದು ಕೆಲವರು ಆರೋಪಿಸಿದರು. ಅದಕ್ಕೆ ಉತ್ತರಿಸಿದ ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು, ಕೆಲಸದ ಒತ್ತಡ ಸಾಕಷ್ಟಿದೆ, ಆದರೂ ತಾ.ಪಂ. ಸದಸ್ಯರು ವ್ಯಕ್ತಪಡಿಸಿದ ಆರೋಪ ಹಾಗೂ ಸಲಹೆಗಳನ್ನು ವೈದ್ಯರ ಗಮನಕ್ಕೆ ತಂದು ಉತ್ತಮ ಸೇವೆ ನೀಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಮಳೆ ಕೊರತೆ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗೇಶ ನಾಯ್ಕ ಕೃಷಿ ಇಲಾಖೆ ವರದಿ ಮಂಡಿಸಿದರು. ಪ್ರಸಕ್ತ ವರ್ಷ ತಾಲೂಕಿನಲ್ಲಿ ಮಳೆಯ ಕೊರತೆಯಿದೆ. ಕಳೆದ ವರ್ಷ ಮೇ 21ರಿಂದಲೇ ಮಳೆ ಆರಂಭವಾಗಿದ್ದರಿಂದ ಕೃಷಿ ಚಟುವಟಿಕೆಗಳು ಬೇಗನೆ ಆರಂಭಗೊಂಡಿದ್ದವು. ಜೂನ್ ತಿಂಗಳವರೆಗೆ ವಾಡಿಕೆ ಮಳೆ 215 ಮಿ.ಮೀ. ಗಳಾಗಬೇಕಾಗಿದ್ದು 43.40 ಮಿ.ಮೀ. ಮಳೆಯ ಕೊರತೆಯಿದೆ ಇದರಿಂದ ಬಿತ್ತನೆ ಕಾರ್ಯಗಳು ಸುಗಮವಾಗಿ ನಡೆದಿಲ್ಲ ಎಂದರು.

ಕಾಣೆ ಪ್ರಕರಣ: ಇತ್ತೀಚಿನ ಕೆಲ ದಿನಗಳಲ್ಲಿ ಶಾಲಾ ಬಾಲಕಿಯರು, ಯುವತಿಯರು, ಗೃಹಿಣಿಯರು ಕಾಣೆಯಾಗುತ್ತಿರುವ ಪ್ರಕರಣಗಳು ಹಾಗೂ ಪ್ರೇಮ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪಿಎಸ್​ಐ ಆನಂದಮೂರ್ತಿ ಸಭೆಯ ಗಮನಕ್ಕೆ ತಂದರು. ಪೊಲೀಸ್ ಇಲಾಖೆಯಿಂದ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ನಡೆದಿದ್ದು, ಜನಪ್ರತಿನಿಧಿಗಳು ಸಹ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ ಕುರಿಯವರ, ತಾ.ಪಂ. ಉಪಾಧ್ಯಕ್ಷೆ ನೀಲವ್ವ ಮಡಿವಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಳು ಪಾಟೀಲ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *